ಮಣಿಪುರ| ಜನಾಂಗೀಯ ಹಿಂಸಾಚಾರದ ವೇಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಕುಕಿ ಮಹಿಳೆ ಮೃತ್ಯು

ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ: 2023ರಲ್ಲಿ ಮಣಿಪುರದಲ್ಲಿ ಭುಗಿಲೆದ್ದ ಮೈತೈ-ಕುಕಿ ಜನಾಂಗೀಯ ಹಿಂಸಾಚಾರದ ವೇಳೆ ರಾಜಧಾನಿ ಇಂಫಾಲದಿಂದ ಗುಂಪೊಂದು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ್ದ ಕುಕಿ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ಖಿನ್ನತೆಯಿಂದಾಗಿ ಅಸ್ವಸ್ಥರಾಗಿ ಎರಡು ವರ್ಷಗಳ ನಂತರ ಮೃತಪಟ್ಟಿರುವ ಘಟನೆ ನಡೆದಿದೆ. ಇದರಿಂದ ತಮ್ಮ ಪುತ್ರಿ ಜೀವಂತವಾಗಿರುವಾಗಲೇ ಆಕೆಗೆ ನ್ಯಾಯ ದೊರೆಯಬಹುದು ಎಂಬ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ ಆಘಾತವಾಗಿದೆ.
ಎರಡು ವರ್ಷಗಳ ಹಿಂದೆ ಅನುಭವಿಸಿದ್ದ ತೀವ್ರ ಮಾನಸಿಕ ಆಘಾತ ಹಾಗೂ ದೇಹಕ್ಕಾದ ಗಾಯಗಳಿಂದ ಆಕೆಯೆಂದೂ ಚೇತರಿಸಿಕೊಳ್ಳಲೇ ಇಲ್ಲ. ಇದರಿಂದಾಗಿ ಆಕೆಯ ಆರೋಗ್ಯ ಹದಗೆಟ್ಟಿತು ಎಂದು ಆಕೆಯ ಕುಟುಂಬದ ಸದಸ್ಯರು ಅಳಲು ತೋಡಿಕೊಂಡಿದ್ದಾರೆ.
ಜುಲೈ 2023ರಲ್ಲಿ ಸುದ್ದಿ ಸಂಸ್ಥೆಯೊಂದರೊಂದಿಗೆ ಮಾತನಾಡಿದ್ದ ಸಂತ್ರಸ್ತ ಮಹಿಳೆಯು, ಮೈತೈ ಸಮುದಾಯದ ಪುರುಷರಿಂದ ತಾನು ಅನುಭವಿಸಿದ್ದ ಭಯಾನಕ ಯಾತನೆಯ ಬಗ್ಗೆ ಹೇಳಿಕೊಂಡಿದ್ದರು. ಗುಂಪಿನಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಸಂತ್ರಸ್ತೆ ಲೈಂಗಿಕ ದೌರ್ಜನ್ಯ ನಡೆದ ಸುಮಾರು ಎರಡು ತಿಂಗಳ ನಂತರ ಪೊಲೀಸರಿಗೆ ದೂರು ನೀಡುವಲ್ಲಿ ಯಶಸ್ವಿಯಾಗಿದ್ದರು.
"ಮಹಿಳೆಯನ್ನು ಲಾಂಗೋಲ್ನಿಂದ ಅಪಹರಿಸಿದ ಗುಂಪು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಬಳಿಕ ಬಿಷ್ಣುಪುರ್ ಬಳಿ ಏಕಾಂಗಿಯಾಗಿ ಬಿಟ್ಟು ಪರಾರಿಯಾಗಿತ್ತು. ಆಕೆ ಗಂಭೀರ ಸ್ವರೂಪದ ದೈಹಿಕ ಗಾಯಗಳು ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಗಂಭೀರ ಸ್ವರೂಪದ ಜನನಾಂಗ ಸೋಂಕಿಗೂ ಗುರಿಯಾಗಿದ್ದಳು. ಆಕೆಗೆ ಗುವಾಹಟಿಯಲ್ಲಿ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಜನವರಿ 10ರಂದು ಮೃತಪಟ್ಟಿದ್ದಾಳೆ ಎಂದು ಚೂರಚಂದ್ ಪುರ್ ಮೂಲದ ಸ್ವದೇಶಿ ಬುಡಕಟ್ಟು ನಾಯಕರ ವೇದಿಕೆಯು ಪ್ರಕಟಣೆಯಲ್ಲಿ ತಿಳಿಸಿದೆ.







