ಮಣಿಪುರ ಜನಾಂಗೀಯ ಹಿಂಸಾಚಾರ ; ಬುಡಕಟ್ಟು ವ್ಯಕ್ತಿಗೆ ಬೆಂಕಿ ಹಚ್ಚಿದ ವೀಡಿಯೊ ವೈರಲ್

ಸಾಂದರ್ಭಿಕ ಚಿತ್ರ | PHOTO : PTI
ಇಂಫಾಲ: ಬುಡಕಟ್ಟು ವ್ಯಕ್ತಿಯೋರ್ವನನ್ನು ಕಂದಕದ ಒಳಗೆ ಹಾಕಿ ಬೆಂಕಿ ಹಚ್ಚಿದ ಘಟನೆಯ ಭೀಕರ ವೀಡಿಯೊ ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಈ ವೀಡಿಯೊ ಮೇ ತಿಂಗಳ ಆರಂಭದ್ದೆಂದು ಕಾಣುತ್ತದೆ. ನಾವು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ‘ಕುಕಿ’ ಎಂದು ಗುರುತಿಸಲಾದ 7 ಸೆಕೆಂಡ್ಗಳ ವೀಡಿಯೊವನ್ನು ಮಣಿಪುರದಲ್ಲಿ ಅಕ್ಟೋಬರ್ 8ರಂದು ಹಲವು ವ್ಯಾಟ್ಸ್ ಆ್ಯಪ್ ಗುಂಪುಗಳಲ್ಲಿ ಶೇರ್ ಮಾಡಲಾಗಿದೆ.
ವೀಡಿಯೊದಲ್ಲಿ ಕಪ್ಪು ಟಿ ಶರ್ಟ್ ಹಾಗೂ ಕ್ಯಾಮೊಫ್ಲಾಗ್ ಪ್ಯಾಂಟ್ ಧರಿಸಿದ ವ್ಯಕ್ತಿಯೋರ್ವ ಕಂದಕದಲ್ಲಿ ಬಿದ್ದಿರುವುದು ಕಂಡು ಬಂದಿದೆ. ಆ ವ್ಯಕ್ತಿಯ ಮುಖವನ್ನು ಜಜ್ಜಿ, ದೇಹಕ್ಕೆ ಬೆಂಕಿ ಹಚ್ಚಲಾಗಿದೆ. ಈ ವ್ಯಕ್ತಿಯನ್ನು ಜೀವಂತವಾಗಿ ದಹಿಸಲಾಗಿದೆಯೇ ಎಂದು ಸ್ಪಷ್ಟವಾಗಿಲ್ಲ.
ಹಿಂಸಾಚಾರದ ಸಂದರ್ಭ ಸಮುದಾಯದ ಐದರಿಂದ ಆರು ಮಂದಿಯನ್ನು ಜೀವಂತವಾಗಿ ಸುಟ್ಟು ಹಾಕಲಾಗಿದೆ. ಆದುದರಿಂದ ನಾವು ವೀಡಿಯೊದಲ್ಲಿ ಕಂಡು ಬಂದ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಕುಕಿ ರೊ ಸಂಘಟನೆಯ ಪ್ರತಿನಿಧಿಯೊಬ್ಬರು ತಿಳಿಸಿದ್ದಾರೆ.





