ಮನೋಜ್ ಬಾಜ್ ಪೇಯಿ ಅವರ ‘ಘೂಸ್ ಖೋರ್ ಪಂಡತ್’ ಟೀಸರ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

PC: YouTube screengrab
ಹೊಸದಿಲ್ಲಿ, ಫೆ. 5: ನೆಟ್ಫ್ಲಿಕ್ಸ್ ಬಿಡುಗಡೆ ಮಾಡಿರುವ ನಟ ಮನೋಜ್ ಬಾಜ್ ಪೇಯಿ ಅಭಿನಯದ ‘ಘೂಸ್ ಖೋರ್ ಪಂಡತ್’ ಸರಣಿಯ ಟೀಸರ್ ಶೀರ್ಷಿಕೆ ಬ್ರಾಹ್ಮಣ ಸಮುದಾಯದ ಆಕ್ಷೇಪಕ್ಕೆ ಗುರಿಯಾಗಿದೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಟೀಸರ್ ಬಿಡುಗಡೆಗೊಂಡ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ. ‘ಪಂಡತ್’ ಪದವನ್ನು ಪಾತ್ರದ ವಿವರಣೆಗೆ ಬಳಸಿರುವುದಕ್ಕೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.
“ಏಕೆ ಪಂಡಿತ್ ಮಾತ್ರ? ಏಕೆ ಮೌಲಾನಾ ಅಲ್ಲ? ಏಕೆ ʼಫಾದರ್ʼ ಅಲ್ಲ? ನಾನು ನಿಮಗೆ ಎಚ್ಚರಿಕೆ ನೀಡುತ್ತಿದ್ದೇನೆ” ಎಂದು ಬಾಂಬೆ ಹೈಕೋರ್ಟ್ನ ವಕೀಲ ಅಶುತೋಷ್ ಜೆ. ದುಬೆ ಕಮೆಂಟ್ ವಿಭಾಗದಲ್ಲಿ ಬರೆದಿದ್ದಾರೆ.
“ಶೀರ್ಷಿಕೆ ಕೆಟ್ಟದು, ಆಕ್ರಮಣಕಾರಿ ಮತ್ತು ಸೂಕ್ಷ್ಮವಲ್ಲದ್ದು. ಅದನ್ನು ತೆಗೆದುಹಾಕಲು ಚಲನಚಿತ್ರ ನಿರ್ಮಾಪಕರನ್ನು ಕೇಳುವುದು ಉತ್ತಮ” ಎಂದು ನವಿಕಾ ಚೌಹಾಣ್ ಎಂಬ ಬಳಕೆದಾರರ ಮತ್ತೊಂದು ಕಮೆಂಟ್ ಹೇಳಿದೆ.
ಶುಭಂ ತಿವಾರಿ ಬಾಬಾ ಎಂಬವರು, ಬಾಜ್ ಪೇಯಿ ಸ್ವತಃ ಬ್ರಾಹ್ಮಣರಾಗಿದ್ದು, ಬ್ರಾಹ್ಮಣ ಸಮುದಾಯವನ್ನು ಕೆಣಕಲು ಹಣ ಮತ್ತು ಅಧಿಕಾರವನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
►‘ತುಂಬಾ ಆಕ್ಷೇಪಾರ್ಹ’
ಈ ಸರಣಿಯ ನಿರ್ಮಾಪಕ ನೀರಜ್ ಪಾಂಡೆ. ಇವರು ಹಿಂದೆ ನೆಟ್ಫ್ಲಿಕ್ಸ್ನ ‘ಖಾಕೀ: ದಿ ಬಿಹಾರ್ ಚಾಪ್ಟರ್’ (2023) ಹಾಗೂ ಅದರ 2025ರ ಮುಂದುವರಿದ ಭಾಗವನ್ನೂ ನಿರ್ಮಿಸಿದ್ದರು. ಇತ್ತೀಚಿನ ಚಿತ್ರವು ನೆಟ್ಫ್ಲಿಕ್ಸ್ ಇಂಡಿಯಾದ 2026ರ ಕಂಟೆಂಟ್ ಸ್ಲೇಟ್ ನ ಭಾಗವಾಗಿದೆ. ಗಾಯಗೊಂಡ ಯುವತಿಯನ್ನು ಚಲಿಸುವ ಕಾರಿನಿಂದ ಹೊರಕ್ಕೆ ತಳ್ಳುವ ದೃಶ್ಯದಿಂದ ಟೀಸರ್ ಆರಂಭವಾಗುತ್ತದೆ. ಬಳಿಕ “ತನಿಖಾ ಅಧಿಕಾರಿ ಯಾರು?” ಎಂಬ ವಾಯ್ಸ್ಓವರ್ ಕೇಳಿಸುತ್ತದೆ.
“ಅವರ ಹೆಸರು ಅಜಯ್ ದೀಕ್ಷಿತ್ ಆದರೆ ಅವರು ದಿಲ್ಲಿ ಪೊಲೀಸ್ ವಲಯದಲ್ಲಿ ಪಂಡತ್ ಎಂದು ಕುಖ್ಯಾತರಾಗಿದ್ದಾರೆ. ಅವರು ವಿವಾಹಿತರು, ಆದರೆ ಪರಸ್ತ್ರೀ ವ್ಯಾಮೋಹಿ. ಅವರ ಸೇವಾ ದಾಖಲೆಯೂ ತುಂಬಾ ಕೆಟ್ಟದಾಗಿದೆ” ಎಂದು ಪುರುಷ ಧ್ವನಿ ಹೇಳುತ್ತಿದ್ದಂತೆ ಮನೋಜ್ ಬಾಜ್ ಪೇಯಿ ಫ್ರೇಮ್ ಗೆ ಪ್ರವೇಶಿಸುತ್ತಾರೆ. ನಂತರ ಟೀಸರ್ ನಲ್ಲಿ ಇತರ ಪಾತ್ರಗಳ ಕ್ಷಿಪ್ರ ದೃಶ್ಯಗಳು ಕಾಣಿಸುತ್ತವೆ.
ನೆಟ್ಫ್ಲಿಕ್ಸ್ ಇಂಡಿಯಾದ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾದ ಟೀಸರ್ ಗೆ “ಹರ್ ಭ್ರಷ್ಟ ಅಧಿಕಾರಿ ಕೋ ಬದಲ್ನೇ ಕಾ ಏಕ್ ಮೌಕಾ ಮಿಲ್ತಾ ಹೈ… ಅಬ್ ಆಫೀಸರ್ ಅಜಯ್ ದೀಕ್ಷಿತ್ ಕಿ ಬಾರಿ” (ಪ್ರತಿಯೊಬ್ಬ ಭ್ರಷ್ಟ ಅಧಿಕಾರಿಗೂ ಬದಲಾಗಲು ಒಂದು ಅವಕಾಶ ಸಿಗುತ್ತದೆ… ಈಗ ಅಧಿಕಾರಿ ಅಜಯ್ ದೀಕ್ಷಿತ್ ಸರದಿ) ಎಂಬ ಶೀರ್ಷಿಕೆ ನೀಡಲಾಗಿದೆ. ಈ ʼರೀಲ್ʼ 20 ಲಕ್ಷಕ್ಕಿಂತ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.
“ಇಂದು, ಬ್ರಾಹ್ಮಣರನ್ನು ದೂಷಿಸಲಾಗುತ್ತಿದೆ, ಅವಮಾನಿಸಲಾಗುತ್ತಿದೆ ಮತ್ತು ಕೊಳಕು ಮತಬ್ಯಾಂಕ್ ರಾಜಕೀಯಕ್ಕಾಗಿ ಬಲಿಪಶುಗಳಾಗಿ ಬಳಸಲಾಗುತ್ತಿದೆ. ಇತ್ತೀಚೆಗೆ, ಐಎಎಸ್ ಅಧಿಕಾರಿ ಸಂತೋಷ್ ವರ್ಮಾ ಅವರು ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ(ಮದುವೆ ಮಾಡಿಕೊಡುವವರೆಗೆ) ಮೀಸಲಾತಿ ಮುಂದುವರಿಯಬೇಕು ಎಂದು ಹೇಳಿದ್ದರು. ‘ಬ್ರಾಹ್ಮಣ ಭಾರತ್ ಛೋಡೋ’ ಮತ್ತು ‘ಬ್ರಾಹ್ಮಣವಾದ್ ಸೆ ಆಝಾದಿ’ ನಂತಹ ಘೋಷಣೆಗಳು ತುಂಬಾ ಸಾಮಾನ್ಯವಾಗುತ್ತಿವೆ. ಬ್ರಾಹ್ಮಣರ ವಿರುದ್ಧ ದ್ವೇಷ ನಿಜವಾಗಿಯೂ ಮುಂದಿನ ಹಂತವಾಗಿರುವ ಸಮಯದಲ್ಲಿ, ಚಲನಚಿತ್ರಕ್ಕೆ ಅಂತಹ ಹೆಸರುಗಳನ್ನು ನೀಡುವುದು ಅತ್ಯಂತ ಆಕ್ಷೇಪಾರ್ಹವಾಗಿದೆ” ಎಂದು ಧರ್ಮ ಪಾರ್ಟಿ ಆಫ್ ಇಂಡಿಯಾದ ಸಂಸ್ಥಾಪಕಿ ಹಾಗೂ ಸ್ವಯಂ ಘೋಷಿತ ಬ್ರಾಹ್ಮಣ ಹಕ್ಕುಗಳ ಕಾರ್ಯಕರ್ತೆ ಅನುರಾಧಾ ತಿವಾರಿ ಹೇಳಿದ್ದಾರೆ. ಶೀರ್ಷಿಕೆಯನ್ನು ತಕ್ಷಣ ಬದಲಾಯಿಸದಿದ್ದರೆ ಪ್ರದರ್ಶನ ನಿಷೇಧಕ್ಕೆ ಒತ್ತಾಯಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಸೌಜನ್ಯ: theprint.in







