ಕೋವಿಡ್ನಿಂದ ಬಳಲಿದವರು ಕಠಿಣ ಕೆಲಸ ಮಾಡಬಾರದು: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ
ಗಾರ್ಬಾ ನೃತ್ಯದ ವೇಳೆ ಸರಣಿ ಹೃದಯಾಘಾತದ ಕುರಿತು ಕೇಂದ್ರ ಆರೋಗ್ಯ ಸಚಿವ ಪ್ರತಿಕ್ರಿಯೆ

ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (PTI)
ಹೊಸದಿಲಿ: ಗುಜರಾತ್ನಲ್ಲಿ ನವರಾತ್ರಿ ಆಚರಣೆಯ ಅಂಗವಾಗಿ ನಡೆದ ಗಾರ್ಬಾ ನೃತ್ಯದ ವೇಳೆ ಹಲವಾರು ಮಂದಿ ಹೃದಯಾಘಾತದಿಂದ ಮೃತಪಟ್ಟಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಪ್ರತಿಕ್ರಿಯಿಸಿದ್ದು, ಕೋವಿಡ್ ಗೆ ಒಳಗಾಗಿದ್ದ ಜನರು ಅತಿಯಾಗಿ ಕೆಲಸ ಮಾಡುವುದನ್ನು ತಪ್ಪಿಸಬೇಕು ಎಂದಿದ್ದಾರೆ.
ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾಂಡವಿಯಾ ಅವರು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನಡೆಸಿದ ಅಧ್ಯಯನವನ್ನು ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವರು, “ಐಸಿಎಂಆರ್ ವಿಸ್ತೃತ ಅಧ್ಯಯನವನ್ನು ಮಾಡಿದೆ, ಇದು ತೀವ್ರವಾದ ಕೋವಿಡ್ನಿಂದ ಬಳಲಿದ್ದ ಜನರು 1 ರಿಂದ 2 ವರ್ಷಗಳವರೆಗೆ ಕಠಿಣ ವ್ಯಾಯಾಮ ಅಥವಾ ತೀವ್ರ ಪ್ರಮಾಣದ ಕೆಲಸ ಮಾಡುವುದರಿಂದ ದೂರವಿರಬೇಕು ಎಂದು ಹೇಳುತ್ತದೆ. ಇಂತಹವರು ಹಠಾತ್ ಹೃದಯ ಸ್ತಂಭನಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚಿದೆ” ಎಂದು ಅವರು ಹೇಳಿದ್ದಾರೆ.
ಗುಜರಾತ್ನಲ್ಲಿ 'ಗರ್ಬಾ' ವೇಳೆ ನೃತ್ಯ ಮಾಡುವಾಗ ಹೃದಯಾಘಾತದಿಂದ 10 ಜನರು ಸಾವನ್ನಪ್ಪಿದ ಕೆಲವು ದಿನಗಳ ನಂತರ ಆರೋಗ್ಯ ಸಚಿವರ ಪ್ರತಿಕ್ರಿಯೆ ಬಂದಿದೆ.
ಕೇವಲ 24 ಗಂಟೆಗಳಲ್ಲಿ 13 ವರ್ಷದ ಬಾಲಕ ಸೇರಿದಂತೆ ಮಧ್ಯ ವಯಸ್ಕ ಹಾಗೂ ಸಣ್ಣ ಪ್ರಾಯದವರೇ ಹೃದಯಾಘಾತದಿಂದ ಮೃತಪಟ್ಟಿದ್ದರು. ಸಣ್ಣ ಪ್ರಾಯದಲ್ಲಿ ಹೃದಯಾಘಾತಕ್ಕೆ ಒಳಗಾಗುತ್ತಿರುವವರ ಸಂಖ್ಯೆ ತೀವ್ರವಾಗುತ್ತಿರುವುದರಿಂದ ಘಟನೆಯು ಕಳವಳವನ್ನು ಉಂಟು ಮಾಡಿದೆ.





