ಹುತಾತ್ಮರ ದಿನ: ಡಿಯು ಕ್ಯಾಂಪಸ್ನಲ್ಲಿ ಗಾಂಧಿ ಪ್ರತಿಮೆ ಬಳಿ ಮೊಂಬತ್ತಿ ಹಚ್ಚದಂತೆ ವಿದ್ಯಾರ್ಥಿಗಳಿಗೆ ತಡೆ; ಆರೋಪ

PC: x.com/milligazette
ಹೊಸದಿಲ್ಲಿ: ಹುತಾತ್ಮರ ದಿನದಂದು (ಜನವರಿ 30) ಗಾಂಧಿ ಪ್ರತಿಮೆ ಮುಂದೆ ಮೊಂಬತ್ತಿ ಹಚ್ಚದಂತೆ ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನು ಕ್ಯಾಂಪಸ್ನ ಭದ್ರತಾ ಸಿಬ್ಬಂದಿ ತಡೆದ ಘಟನೆ ಬೆಳಕಿಗೆ ಬಂದಿದೆ. ವಿಶ್ವವಿದ್ಯಾನಿಲಯ ಕ್ಯಾಂಪಸ್ನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಸ್ಮರಣೆಯನ್ನು ಶಾಂತಿಯುತವಾಗಿ ಆಚರಿಸುವುದಕ್ಕೂ ನಿರ್ಬಂಧ ವಿಧಿಸಲಾಗಿದೆ ಎಂಬ ಆರೋಪಗಳು ವ್ಯಾಪಕ ಟೀಕೆಗೆ ಕಾರಣವಾಗಿವೆ.
ಈ ಘಟನೆ ವಿವಿ ಕ್ಯಾಂಪಸ್ನ ಮುಖ್ಯದ್ವಾರದ ಬಳಿ, ಕುಲಪತಿಗಳ ನಿವಾಸದಿಂದ ಕೇವಲ 100 ಮೀಟರ್ ದೂರದಲ್ಲಿ ನಡೆದಿದೆ.
“ಹುತಾತ್ಮರ ದಿನದಂದು ಗಾಂಧಿ ಪ್ರತಿಮೆಯ ಸುತ್ತ ಕತ್ತಲು ಆವರಿಸಿತ್ತು. ನಾವು ಕೇವಲ ಮೊಂಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲು ಬಯಸಿದ್ದೆವು. ಆದರೆ ಅಧಿಕಾರಿಗಳು ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿ ಭದ್ರತಾ ಸಿಬ್ಬಂದಿ ನಮ್ಮನ್ನು ತಡೆದರು. ಸುಮಾರು ಒಂದು ಗಂಟೆ ಕಾಲ ಚರ್ಚೆ ನಡೆಸಿದರೂ ಪ್ರಯೋಜನವಾಗಲಿಲ್ಲ. ಯಾವುದೇ ಸಂಘರ್ಷಕ್ಕೆ ಇಳಿಯದೆ ಶಾಂತಿಯುತವಾಗಿ ವಾಪಸ್ಸಾದೆವು,” ಎಂದು ವಿದ್ಯಾರ್ಥಿ ಸಮರ್ಥ್ ಬನೀವಾಲ್ ಹೇಳಿದರು.
ಈ ಕುರಿತು ಪ್ರತಿಕ್ರಿಯಿಸಿದ ಮತ್ತೊಬ್ಬ ವಿದ್ಯಾರ್ಥಿ ವಿಕಾಸ್ ರಾಣ್ವಾ, “ಹುತಾತ್ಮರ ದಿನದಂದು ಮುಂಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಲು ತೆರಳಿದ್ದೆವು. ಆದರೆ ಭದ್ರತಾ ಸಿಬ್ಬಂದಿ ಅವಕಾಶ ನೀಡಲಿಲ್ಲ. ಕೊನೆಗೆ ಮೊಂಬತ್ತಿ ಉರಿಸದೇ ವಾಪಸ್ಸಾಗಬೇಕಾಯಿತು. ಇದು ತೀರಾ ಖೇದಕರ,” ಎಂದು ಹೇಳಿದರು.
ಘಟನೆಯ ಪರಿಣಾಮಗಳ ಬಗ್ಗೆ ಮತ್ತೊಬ್ಬ ವಿದ್ಯಾರ್ಥಿ ಮಂದೇವ್ ಕಸಾನಾ ಆತಂಕ ವ್ಯಕ್ತಪಡಿಸಿದ್ದು, “ಈ ಘಟನೆ ನಮ್ಮ ವಿಶ್ವವಿದ್ಯಾನಿಲಯದ ಸ್ಥಿತಿಗತಿಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.







