ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕೆಟ್ಟ ಹೊಟೇಲ್ ನೀಡಲಾಗಿತ್ತು: ಮೇರಿ ಕೋಮ್

ಮೇರಿ ಕೋಮ್ | PTI
ಹೊಸದಿಲ್ಲಿ: ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ ಎಂಬ ವರದಿಗಳನ್ನು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ನ ಅತ್ಲೀಟ್ಸ್ ಆಯೋಗದ ಅಧ್ಯಕ್ಷೆ ಹಾಗೂ ಬಾಕ್ಸಿಂಗ್ ದಂತಕತೆ ಎಮ್.ಸಿ. ಮೇರಿ ಕೋಮ್ ಮಂಗಳವಾರ ನಿರಾಕರಿಸಿದ್ದಾರೆ. ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿರುವ ಅವರು, ಆಯೋಗದಲ್ಲಿನ ನನ್ನ ಅವಧಿಯನ್ನು ಪೂರೈಸುತ್ತೇನೆ ಎಂದು ಅವರು ಹೇಳಿದ್ದಾರೆ.
ಮೇರಿ ಕೋಮ್ 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.
ಮಣಿಪುರದ 42 ವರ್ಷದ ಮೇರಿ ಕೋಮ್ ಕಳೆದ ವಾರ ರಾಷ್ಟ್ರೀಯ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಉತ್ತರಾಖಂಡದ ಹಲ್ದ್ವಾನಿಗೆ ಹೋಗಿದ್ದರು. ತನಗೆ ‘‘ಕಳಪೆ ಹೊಟೇಲ್ನಲ್ಲಿ ಕೋಣೆ’’ ನೀಡಿರುವುದಕ್ಕಾಗಿ ಅವರು ಅತೃಪ್ತಿ ವ್ಯಕ್ತಪಡಿಸಿದ್ದರು.
ಖಾಸಗಿ ವಾಟ್ಸ್ಆ್ಯಪ್ ಗುಂಪೊಂದರಲ್ಲಿ ನಾನು ಹೊರಹಾಕಿರುವ ಅಸಮಾಧಾನವನ್ನು ತಪ್ಪಾಗಿ ಅರ್ಥೈಸಲಾಗಿದೆ ಹಾಗೂ ನಾನು ರಾಜೀನಾಮೆ ನೀಡಿದ್ದೇನೆ ಎಂಬುದಾಗಿ ಮಾಧ್ಯಮಗಳಿಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದು ಪಿಟಿಐಯೊಂದಿಗೆ ಮಾತನಾಡಿರುವ ಮೇರಿ ಕೋಮ್ ಹೇಳಿದರು.
‘‘ನಾನು ರಾಜೀನಾಮೆ ನೀಡಿಲ್ಲ. ನನ್ನ ಅವಧಿಯನ್ನು ಪೂರ್ಣಗೊಳಿಸುತ್ತೇನೆ’’ ಎಂದು ಅವರು ಹೇಳಿದರು. ಅವರ ಅವಧಿ 2026ರಲ್ಲಿ ಮುಕ್ತಾಯಗೊಳ್ಳುತ್ತದೆ.
‘‘ನನ್ನನ್ನು ಇನ್ನೊಮ್ಮೆ ಈ ರೀತಿಯಾಗಿ ನಡೆಸಿಕೊಂಡರೆ, ರಾಜೀನಾಮೆ ನೀಡುವ ಬಗ್ಗೆ ಯೋಚಿಸುತ್ತೇನೆ ಎಂದಷ್ಟೇ ಅತ್ಲೀಟ್ಸ್ ಆಯೋಗದ ಇತರ ಸದಸ್ಯರೊಂದಿಗೆ ಹೇಳಿದ್ದೆ. ನಾನು ರಾಜೀನಾಮೆ ನೀಡುತ್ತೇನೆ ಎಂಬುದಾಗಿ ಎಂದೂ ಹೇಳಿಲ್ಲ. ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ನನ್ನ ಕುಟುಂಬ. ಯಾವುದೇ ವಿಷಯದಲ್ಲಾದರೂ ನನಗೆ ಅಸಮಾಧಾನವಾದರೆ, ಅದನ್ನು ವ್ಯಕ್ತಪಡಿಸುವ ಎಲ್ಲಾ ಹಕ್ಕು ನನಗಿದೆ’’ ಎಂದರು.
‘‘ರಾಷ್ಟ್ರೀಯ ಕ್ರೀಡಾಕೂಟದ ಸಮಾರೋಪ ಸಮಾರಂಭಕ್ಕೆ ಹೋದಾಗ, ಒಳ್ಳೆಯ ಹೊಟೇಲ್ ಲಭ್ಯವಿದ್ದರೂ, ನನಗೆ ಕೆಟ್ಟ ಹೊಟೇಲ್ನಲ್ಲಿ ಕೋಣೆ ನೀಡಲಾಗಿತ್ತು. ಬೇರೆಯವರಿಗೆ ಒಳ್ಳೆಯ ಹೊಟೇಲ್ ನೀಡಬಹುದಾದರೆ, ನನಗೆ ಯಾಕೆ ನೀಡಲು ಸಾಧ್ಯವಿಲ್ಲ. ನಾನು ಕೇಳಿದ ಒಂದೇ ಒಂದು ಪ್ರಶ್ನೆ ಅದು’’ ಎಂದು ಮೇರಿ ಕೋಮ್ ನುಡಿದರು.







