Visakhapatnam | HPCL ತೈಲ ಸಂಸ್ಕರಣಾ ಘಟಕದಲ್ಲಿ ಸ್ಫೋಟ: ಸುತ್ತಮುತ್ತಲ ಪ್ರದೇಶದಲ್ಲಿ ಆವರಿಸಿದ ದಟ್ಟ ಹೊಗೆ; ಸ್ಥಳೀಯರಲ್ಲಿ ಆತಂಕ

Photo | ndtv
ವಿಶಾಖಪಟ್ಟಣಂ (ಆಂಧ್ರಪ್ರದೇಶ): ಇಲ್ಲಿನ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL)ನ ತೈಲ ಸಂಸ್ಕರಣಾ ಘಟಕದಲ್ಲಿ ಸಂಭವಿಸಿದ ಸ್ಫೋಟದ ಬಳಿಕ, ಭಾರೀ ಬೆಂಕಿ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ. ಈ ಬೆಂಕಿಯಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟ ಹೊಗೆ ಆವರಿಸಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ಸಲ್ಫರ್ ಪಿಚ್ ಟ್ಯಾಂಕ್ ನಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ. ದಟ್ಟ ಹೊಗೆಯೊಂದಿಗೆ ಬೆಂಕಿಯ ಜ್ವಾಲೆಗಳು ಮೇಲೇಳುತ್ತಿರುವ ದೃಶ್ಯಗಳ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ಘಟನೆಯನ್ನು ದೃಢಪಡಿಸಿರುವ ವಿಶಾಖಪಟ್ಟಣಂ ಪೊಲೀಸ್ ಆಯುಕ್ತ ಶಂಖಬ್ರತ ಬಾಗ್ಚಿ, ಈ ಬೆಂಕಿ ಅವಘಡ ಟ್ಯಾಂಕ್ ಗೆ ಮಾತ್ರ ಸೀಮಿತವಾಗಿದ್ದು, ತೈಲ ಸಂಸ್ಕರಣಾ ಘಟಕದ ಇತರ ಭಾಗಗಳಿಗೆ ಯಾವುದೇ ಹಾನಿಯನ್ನುಂಟು ಮಾಡಿಲ್ಲ ಎಂದು ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ, ಕ್ಷಿಪ್ರವಾಗಿ ಬೆಂಕಿಯ ಜ್ವಾಲೆಗಳನ್ನು ನಿಯಂತ್ರಣಕ್ಕೆ ತಂದರು ಎಂದು ತಿಳಿಸಿದೆ.
ಈ ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಹಾಗೂ ತೈಲ ಸಂಸ್ಕರಣಾ ಘಟಕದ ಇನ್ನಿತರ ಎಲ್ಲ ವಿಭಾಗಗಳೂ ಸುರಕ್ಷಿತವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದೆ.






