ಆನ್ ಲೈನ್ ಜೂಜಾಟ ಜಾಹೀರಾತು: ಸಚಿನ್ ತೆಂಡೂಲ್ಕರ್ ನಿವಾಸದ ಎದುರು ಬೃಹತ್ ಪ್ರತಿಭಟನೆ

PHOTO : TIMES NOW
ಮುಂಬೈ: ಆನ್ ಲೈನ್ ಜೂಜಾಟದ ಜಾಹೀರಾತಿನಲ್ಲಿ ಭಾಗಿಯಾಗಿರುವುದನ್ನು ವಿರೋಧಿಸಿ ಸ್ವತಂತ್ರ ಶಾಸಕ ಬಚ್ಚು ಕಾಡು ಅವರ ಪಕ್ಷದ ಕಾರ್ಯಕರ್ತರು ಗುರುವಾರ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ನಿವಾಸದೆದುರು ಬೃಹತ್ ಪ್ರತಿಭಟನೆ ನಡೆಸಿದರು. ನಂತರ, ಬಚ್ಚು ಕಾಡು ನೇತೃತ್ವದ ಎಲ್ಲ ಪ್ರತಿಭಟನಾಕಾರರನ್ನು ನಂತರ ಬಾಂದ್ರಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಎಂದು timesnownews.com ವರದಿ ಮಾಡಿದೆ.
ಮಹಾರಾಷ್ಟ್ರ ಸರ್ಕಾರದ ಮಾಜಿ ಸಚಿವರೂ ಆಗಿರುವ ಬಚ್ಚು ಕಾಡು, ಸಚಿನ್ ತೆಂಡೂಲ್ಕರ್ ಅವರಿಗೆ ಕಾನೂನು ನೋಟಿಸ್ ರವಾನಿಸಲಾಗುವುದು ಎಂದು ಬೆದರಿಕೆ ಒಡ್ಡಿದ ಕೇವಲ ಎರಡು ದಿನಗಳ ಅಂತರದಲ್ಲಿ ಈ ಪ್ರತಿಭಟನೆ ನಡೆದಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ್ದ ಬಚ್ಚು ಕಾಡು, “ಭಾರತ ರತ್ನ ಪ್ರಶಸ್ತಿ ವಿಜೇತರು ನೀತಿ ಸಂಹಿತೆಯನ್ನು ಪಾಲಿಸಬೇಕಿದೆ. ನಾವು ಆಗಸ್ಟ್ 30ರಂದು ಸಚಿನ್ ತೆಂಡೂಲ್ಕರ್ ಅವರಿಗೆ ನ್ಯಾಯಾಲಯದ ನೋಟಿಸ್ ಕಳಿಸಲಿದ್ದೇವೆ. ನಾವು ಅವರಿಗೆ ಆಗಸ್ಟ್ 30ರವರೆಗೆ ಸಮಯ ನೀಡುತ್ತೇವೆ. ಅವರು ಇಲ್ಲಿಯವರೆಗೂ ಜಾಹೀರಾತಿನ ಕುರಿತು ತಮ್ಮ ನಿಲುವೇನು ಎಂದು ಸ್ಪಷ್ಪಪಡಿಸಿಲ್ಲ. ಹೀಗಾಗಿ ನಾವು ವಕೀಲರೊಬ್ಬರ ಮೂಲಕ ಅವರಿಗೆ ನೋಟಿಸ್ ಕಳಿಸಲಿದ್ದೇವೆ” ಎಂದು ಹೇಳಿದ್ದರು.
ಪೇಟಿಎಂ ಫಸ್ಟ್ ಗೇಮ್ ಪ್ರಚಾರ ಅಭಿಯಾನದಿಂದ ಹಿಂದೆ ಸರಿಯುವಂತೆ ನಾವು ಸಚಿನ್ ತೆಂಡೂಲ್ಕರ್ ಅವರಿಗೆ ಮಾಡಿದ್ದ ಮನವಿಗೆ ಪ್ರತಿಕ್ರಿಯೆ ನೀಡಲು ಅವರಿಗೆ ಸಮಯಾವಕಾಶ ನೀಡಿದ್ದೆವು. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಇರುವುದರಿಂದ ಅನಿವಾರ್ಯವಾಗಿ ಕಾನೂನು ನೋಟಿಸ್ ಕಳಿಸುತ್ತಿದ್ದೇವೆ” ಎಂದು ಕಾಡು ತಿಳಿಸಿದ್ದರು.
ಪೇಟಿಎಂ ಫಸ್ಟ್ ಗೇಮ್ ಜೂಜಾಟದ ತಂತ್ರಾಂಶವಾಗಿದ್ದು, ಇದು ಅಂತರ್ಜಾಲದಲ್ಲಿ ಲಭ್ಯವಿದೆ. ಈ ತಂತ್ರಾಂಶವು ಆನ್ ಲೈನ್ ನಲ್ಲಿ ಜೂಜಾಟವಾಡಿ, ನಗದು ಮೊತ್ತವನ್ನು ಗೆಲ್ಲಲು ಅವಕಾಶ ನೀಡುತ್ತದೆ.
ಕಳೆದ ವಾರ ಇದೇ ಬಗೆಯ ಪ್ರತಿಭಟನೆ ಬಾಲಿವುಡ್ ತಾರೆ ಶಾರೂಖ್ ಖಾನ್ ಅವರ ನಿವಾಸವಾದ ಮನ್ನತ್ ಮುಂದೆಯೂ ನಡೆದಿತ್ತು. ಹೀಗಾಗಿ ಅವರ ನಿವಾಸದ ಸುತ್ತ ಭಾರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು.







