ದಿಲ್ಲಿಯಲ್ಲಿ ರಾಹುಲ್ ನೇತೃತ್ವದಲ್ಲಿ ಬೃಹತ್ ರ್ಯಾಲಿ; ಪ್ರತಿಪಕ್ಷ ನಾಯಕರಿಂದ ಸುಪ್ರೀಂ ಕೋರ್ಟ್ಗೆ ಜಾಥಾ
ʼವೋಟ್ ಚೋರಿʼ ಆರೋಪದಲ್ಲಿ ಸಿಇಸಿ ವಿರುದ್ಧ ಅರ್ಜಿ ಸಲ್ಲಿಕೆ

ರಾಹುಲ್ ಗಾಂಧಿ | Photo Credit : PTI
ಹೊಸದಿಲ್ಲಿ: ಸೋಮವಾರ ‘ಇಂಡಿಯಾ’ ಮೈತ್ರಿಕೂಟದ ನಾಯಕರು ಮತ್ತು ಸಾವಿರಾರು ಬೆಂಬಲಿಗರು ‘ಚಲೋ ದಿಲ್ಲಿ - ಪ್ರಜಾಪ್ರಭುತ್ವಕ್ಕಾಗಿ ಮಾರ್ಚ್’ ಹೆಸರಿನಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಬೃಹತ್ ಪ್ರತಿಭಟನಾ ಜಾಥಾ ನಡೆಸಿದರು. ಚುನಾವಣಾ ಆಯೋಗದಲ್ಲಿ ನಡೆದಿದೆ ಎನ್ನಲಾದ ಆಡಳಿತಾತ್ಮಕ ಲೋಪಗಳು ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಅಕ್ರಮಗಳ ಕುರಿತು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಈ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಜಾಥಾದ ಬಳಿಕ ರಾಹುಲ್ ಗಾಂಧಿ ಅವರು ಖುದ್ದಾಗಿ ಸುಪ್ರೀಂ ಕೋರ್ಟ್ಗೆ ತೆರಳಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಗೆ ತಕ್ಷಣವೇ ಮಧ್ಯಂತರ ತಡೆ ಕೋರಿ ಮನವಿ ಸಲ್ಲಿಸಿದ್ದಾರೆ.
ಕನಾಟ್ ಪ್ಲೇಸ್ನಿಂದ ಮಂಡಿ ಹೌಸ್ವರೆಗಿನ ರಸ್ತೆಯಲ್ಲಿ ಸಾವಿರಾರು ಪ್ರತಿಭಟನಾಕಾರರು ಜಮಾಯಿಸಿದ್ದರಿಂದ ರಾಷ್ಟ್ರ ರಾಜಧಾನಿಯಾದ್ಯಂತ ಅತ್ಯಂತ ಬಿಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು.
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಎಐಎಸ್ಎ ಮುಖ್ಯಸ್ಥೆ ನೇಹಾ ಬೋರಾ ಅವರ ನೇತೃತ್ವದಲ್ಲಿ ಕನಾಟ್ ಪ್ಲೇಸ್-ಬಾರಾಖಂಬಾ ರಸ್ತೆಯ ಜಂಕ್ಷನ್ನಿಂದ ಆರಂಭವಾದ ಜಾಥಾವನ್ನು ಸುಪ್ರೀಂ ಕೋರ್ಟ್ ತಲುಪುವ ಮುನ್ನವೇ ಪೋಲಿಸರು ತಡೆದರು. ಈ ವೇಳೆ ರಾಹುಲ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಪ್ರಮುಖ ಪ್ರತಿಪಕ್ಷ ನಾಯಕರು ಟ್ರಕ್ ಮೇಲೆ ನಿಂತಿದ್ದನ್ನು ವೀಡಿಯೊ ದೃಶ್ಯಾವಳಿಗಳು ತೋರಿಸಿವೆ.
ಭಾರತದ ಮುಖ್ಯ ನ್ಯಾಯಮೂರ್ತಿಗಳು (ಸಿಜೆಐ) ಇತ್ತೀಚೆಗೆ ನೀಡಿದ್ದ ನಿರ್ದೇಶನದ ಮೇರೆಗೆ ಈ ಕಾನೂನು ಹೋರಾಟವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ರಾಹುಲ್ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್, ಚುನಾವಣಾ ಆಯೋಗದ ಪ್ರಸ್ತುತ ನಾಯಕತ್ವ ಬದಲಾಗುವವರೆಗೆ, ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವವರೆಗೆ ಮತ್ತು ದೇಶದ ಸಂಪೂರ್ಣ ಚುನಾವಣಾ ವ್ಯವಸ್ಥೆಯನ್ನು ಸರಿಪಡಿಸುವವರೆಗೆ ಈ ಹೋರಾಟವು ಮುಂದುವರಿಯಲಿದೆ ಎಂದು ಘೋಷಿಸಿದರು.
ಜ್ಞಾನೇಶ್ ಕುಮಾರ್ಗೆ ನೇರ ಎಚ್ಚರಿಕೆ ನೀಡಿದ ಅವರು, ತಕ್ಷಣವೇ ರಾಜೀನಾಮೆ ನೀಡಿ ಮಾಫಿ ಸಾಕ್ಷಿಯಾಗಿ. ನಿಮ್ಮಿಂದ ತಪ್ಪಾಗಿದೆ ನಿಜ, ಆದರೆ ಈ ನಿರ್ಧಾರಗಳ ಹಿಂದಿನ ಮುಖ್ಯ ಸೂತ್ರಧಾರ ನೀವಲ್ಲ ಎಂದು ಹೇಳಿದರು.
‘ಆರೋಪಗಳಿಂದಾಗಿ ಕುಮಾರ್ ಒತ್ತಡದಲ್ಲಿದ್ದಾರೆ. ಅವರಿಗೆ ರಾತ್ರಿ ನಿದ್ರಿಸಲೂ ಸಾಧ್ಯವಾಗುತ್ತಿಲ್ಲ ಎನ್ನುವುದು ನಮಗೆ ತಿಳಿದಿದೆ. ನೀವು ಸಿಇಸಿ ಆಗಿ ಉಳಿಯುವುದಿಲ್ಲ ಎಂದು ಅವರಿಗೆ ನೇರವಾಗಿಯೇ ಹೇಳುತ್ತಿದ್ದೇನೆ’ಎಂದರು.
ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆಗಾಗಿ ನಡೆಯುತ್ತಿರುವ ಈ ಹೋರಾಟದಲ್ಲಿ ಯಾವುದೇ ಪಕ್ಷಭೇದವಿಲ್ಲದೆ ಎಲ್ಲ ನಾಗರಿಕರು ಭಾಗವಹಿಸಬೇಕೆಂದು ಕರೆ ನೀಡಿದ ರಾಹುಲ್,ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ ಎಂದು ಬಿಜೆಪಿ ಬೆಂಬಲಿಗರೂ ಭಾವಿಸುತ್ತಿದ್ದರೆ ಅವರೂ ಪ್ರತಿಭಟನೆಯಲ್ಲಿ ಭಾಗಿಯಾಗಬಹುದು. ಇದು ಸಂವಿಧಾನದ ರಕ್ಷಣೆಗಾಗಿ ಹೋರಾಟ,ನಿಮ್ಮ ಭವಿಷ್ಯಕ್ಕಾಗಿ ಹೋರಾಟ ಎಂದು ಹೇಳಿದರು.
ಪ್ರತಿಭಟನೆಯನ್ನು ‘ಶಿವ ತಾಂಡವ’ ಎಂದು ಬಣ್ಣಿಸಿದ ಅವರು,‘‘ ಶಿವನ ‘ಬಾರಾತ್’ (ಮದುವೆ ಮೆರವಣಿಗೆ)’ನಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಈ ಹೋರಾಟ ನಿಲ್ಲುವುದಿಲ್ಲ. ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ರಕ್ಷಿಸಲು ದಿನಗಳು ಅಥವಾ ವರ್ಷಗಳು ಬೇಕಾದರೂ ನಮ್ಮ ಹೋರಾಟ ಮುಂದುವರಿಯಲಿದೆ ’’ ಎಂದು ಹೇಳಿದರು.
ಮೈತ್ರಿಕೂಟದ ನಾಯಕರು ಜಾಥಾ ನಡೆಸುತ್ತಿದ್ದಂತೆಯೇ, ಅವರ ಕಾನೂನು ತಂಡವು ‘ವೋಟ್ ಚೋರಿ (ಮತ ಕಳವು)’ ಆರೋಪದಲ್ಲಿ ಸಿಇಸಿ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಯನ್ನು ಸಲ್ಲಿಸಿತು.






