“ಬಹುಶಃ ನಾನು ಬದುಕುಳಿಯಲಾರೆ”; ತನ್ನ ಒಂದು ತಿಂಗಳ ಮಗುವನ್ನು ನೋಡಲು ಕೊನೆಯ ಕರೆ ಮಾಡಿದ್ದ ಅನಂತನಾಗ್ ಕಾರ್ಯಾಚರಣೆಯ ಹೀರೊ ಹುಮಾಯೂನ್ ಭಟ್

Photo: indiatoday.in
ಅನಂತನಾಗ್ (ಜಮ್ಮು ಮತ್ತು ಕಾಶ್ಮೀರ): ಅನಂತನಾಗ್ ಜಿಲ್ಲೆಯ ಕೊಕೇರ್ ನಾಗ್ ಪ್ರದೇಶದಲ್ಲಿನ ಗಡೋಲೆ ದಟ್ಟಾರಣ್ಯದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಜಮ್ಮು ಮತ್ತು ಕಾಶ್ಮೀರದ ಉಪ ಪೊಲೀಸ್ ವರಿಷ್ಠಾಧಿಕಾರಿ ಹುಮಾಯೂನ್ ಭಟ್ ಹುತಾತ್ಮರಾಗಿದ್ದಾರೆ. ಇದಕ್ಕೂ ಕೆಲವೇ ಕ್ಷಣಗಳ ಮುನ್ನ, ಅವರು ತಮ್ಮ ಒಂದು ತಿಂಗಳ ಮಗುವಿನ ಮುಖವನ್ನು ಒಂದು ಕ್ಷಣ ಕಣ್ತುಂಬಿಕೊಳ್ಳಲು ತಮ್ಮ ಕುಟುಂಬದ ಸದಸ್ಯರಿಗೆ ಕರೆ ಮಾಡಿದ್ದಾರೆ ಎಂದು indiatoday.in ವರದಿ ಮಾಡಿದೆ.
ತಮ್ಮ ಪತ್ನಿ ಫಾತಿಮಾರಿಗೆ ವೀಡಿಯೊ ಕರೆ ಮಾಡಿದ್ದ ಹುಮಾಯೂನ್ ಭಟ್, ತಾವು ಬದುಕುಳಿಯುವ ಸಾಧ್ಯತೆ ಅತ್ಯಲ್ಪ ಎಂದು ಹೇಳಿಕೊಂಡಿದ್ದಾರೆ. ಆ ವೇಳೆಗೆ ಜಮ್ಮು ಮತ್ತು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿಯಾದ ಅವರು ಹಲವಾರು ಗುಂಡೇಟಿಗೆ ಈಡಾಗಿದ್ದರು. ಲಷ್ಕರ್-ಈ-ತೈಬಾದ ಹೊರ ಘಟಕವಾದ, ಪಾಕಿಸ್ತಾನ ಬೆಂಬಲಿತ ಟಿಆರ್ ಎಫ್ ಭಯೋತ್ಪಾದನಾ ಸಂಘಟನೆಯ ಉಗ್ರರ ಗುಂಡಿನ ದಾಳಿಯಲ್ಲಿ ಅವರು ತೀವ್ರ ರಕ್ತಸ್ರಾವಕ್ಕೊಳಗಾಗಿದ್ದರು.
ಈ ಘಟನೆಯು ಹುಮಾಯೂನ್ ಭಟ್ ರ ವಿವಾಹ ವಾರ್ಷಿಕೋತ್ಸವದ ಹಿಂದಿನ ರಾತ್ರಿ ನಡೆದಿದೆ. ತಮ್ಮ ಪತ್ನಿಗೆ ಕರೆ ಮಾಡಿರುವ ಭಟ್, ತನಗೆ ತಗುಲಿರುವ ಗುಂಡೇಟಿನಲ್ಲಿ ಬದುಕುಳಿಯುವ ಸಾಧ್ಯತೆ ಇಲ್ಲ ಎಂದು ಹೇಳಿಕೊಂಡಿದ್ದಾರೆ.
“ನಾನು ಬಹುಶಃ ಬದುಕುಳಿಯಲಾರೆ. ಒಂದು ವೇಳೆ ನಾನು ಗಾಯಗಳಿಗೆ ಬಲಿಯಾದರೆ, ದಯವಿಟ್ಟು ನಮ್ಮ ಪುತ್ರನ ಯೋಗಕ್ಷೇಮ ನೋಡಿಕೋ” ಎಂದು ವಿಡಿಯೊ ಕರೆ ಮೂಲಕ ತಮ್ಮ ಪತ್ನಿ ಫಾತಿಮಾರಿಗೆ ಹುಮಾಯೂನ್ ಭಟ್ ಮನವಿ ಮಾಡಿದ್ದಾರೆ.
ಇದಕ್ಕೂ ಕೆಲವೇ ಕ್ಷಣಗಳ ಮುನ್ನ ತಮ್ಮ ತಂದೆಯಾದ ನಿವೃತ್ತ ಪೊಲೀಸ್ ಮಹಾನಿರೀಕ್ಷಕ ಗುಲಾಮ್ ಹಸನ್ ಭಟ್ ಅವರಿಗೆ ಕರೆ ಮಾಡಿರುವ ಹುಮಾಯೂನ್ ಭಟ್, ನನಗೆ ಗಾಯಗಳಾಗಿದ್ದರೂ, ಆರಾಮವಾಗಿದ್ದೇನೆ ಎಂದು ತಿಳಿಸಿದ್ದಾರೆ.
ತಮ್ಮ ಪುತ್ರನ ಅಕಾಲಿಕ ಮರಣದ ನಡುವೆಯೂ ಅಸಾಧಾರಣ ಸಮಚಿತ್ತತೆ ಹಾಗೂ ಸ್ವಯಂ ನಿಯಂತ್ರಣವನ್ನು ಪ್ರದರ್ಶಿಸಿದ ಹುಮಾಯೂನ್ ಭಟ್ ರ ತಂದೆ, ತಮ್ಮ ಪುತ್ರನ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು. ಹುಮಾಯೂನ್ ಭಟ್ ಅವರ ಅಂತ್ಯಕ್ರಿಯೆಯನ್ನು ಅವರ ಸ್ವಗ್ರಾಮವಾದ ಬುಡ್ಗಮ್ ನಲ್ಲಿ ಬುಧವಾರ ನೆರವೇರಿಸಲಾಗುತ್ತದೆ.