ಕಝಕ್ಸ್ತಾನದಲ್ಲಿ ಮೆದುಳಿನ ಆಘಾತಕ್ಕೆ ಒಳಗಾದ ಎಂಬಿಬಿಎಸ್ ವಿದ್ಯಾರ್ಥಿಯನ್ನು ಜೈಪುರಕ್ಕೆ ಏರ್ಲಿಫ್ಟ್

Photo Credit : X @indembastana
ಜೈಪುರ, ಅ. 21: ಕಝಕ್ಸ್ತಾನದಲ್ಲಿ ಮೆದುಳಿನ ಆಘಾತಕ್ಕೆ ಒಳಗಾದ ರಾಜಸ್ಥಾನದ 22 ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯನ್ನು ಮುಂದಿನ ಚಿಕಿತ್ಸೆಗಾಗಿ ಸೋಮವಾರ ಸಂಜೆಗೆ ಜೈಪುರಕ್ಕೆ ಏರ್ಲಿಫ್ಟ್ ಮಾಡಲಾಗಿದೆ.
ಜೈಪುರದ ಶಹಾಪುರ ನಿವಾಸಿಯಾಗಿರುವ ರಾಹುಲ್ ಘೋಸಾಲ್ಯ ಕಝಕ್ಸ್ತಾನದ ಅಸ್ತಾನದಲ್ಲಿ 2021ರಿಂದ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದರು. ಮೆದುಳಿನ ಆಘಾತಕ್ಕೆ ತುತ್ತಾದ ಅವರು ಅಕ್ಟೋಬರ್ 8ರಿಂದ ಅಸ್ತಾನದ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಕೃತಕ ಉಸಿರಾಟದ ವ್ಯವಸ್ಥೆಯ ನೆರವಿನಲ್ಲಿ ಇದ್ದರು. ವೈದ್ಯರ ತಂಡ ಹಾಗೂ ಅಧಿಕಾರಿಗಳ ಸಮನ್ವಯದ ಪ್ರಯತ್ನದಿಂದ ಅವರನ್ನು ವಿಮಾನ ಆ್ಯಂಬುಲೆನ್ಸ್ನಲ್ಲಿ ಜೈಪುರಕ್ಕೆ ಕರೆ ತರಲಾಗಿದೆ.
ಜೈಪುರಕ್ಕೆ ಕರೆದುಕೊಂಡು ಬಂದ ಬಳಿಕ ರಾಹುಲ್ ಅವರನ್ನು ಎಸ್ಎಂಎಸ್ ಆಸ್ಪತ್ರೆಯ ವೈದ್ಯಕೀಯ ತುರ್ತು ನಿಗಾ ಘಟಕಕ್ಕೆ ವರ್ಗಾಯಿಸಲಾಗಿದೆ. ಎಸ್ಎಂಎಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ದೀಪಕ್ ಮಹೇಶ್ವರಿ ನೇತೃತ್ವದ ನಾಲ್ವರು ಸದಸ್ಯರ ತಂಡ ರಾಹುಲ್ ಅವರ ಚಿಕಿತ್ಸೆಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದೆ.
ರಾಹುಲ್ ಅವರ ಹೆತ್ತವರು ಸಾಮಾಜಿಕ ಮಾಧ್ಯಮದ ಮೂಲಕ ಮನವಿ ಮಾಡಿದ ಬಳಿಕ ರಾಹುಲ್ ಅವರ ವರ್ಗಾವಣೆ ಸಾಧ್ಯವಾಗಿದೆ. ರಾಹುಲ್ ಅವರಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಭಾರತಕ್ಕೆ ಕರೆ ತರಲು ಹಲವು ಸಾಮಾಜಿಕ ಸಂಘಟನೆಗಳು ತಮ್ಮ ಬೆಂಬಲ ವ್ಯಕ್ತಪಡಿಸಿದ್ದವು.







