ತನ್ನ ತಿನಿಸುಗಳಿಂದ ಟೊಮೆಟೊ ಕೈಬಿಟ್ಟ ಮೆಕ್ಡೊನಾಲ್ಡ್ಸ್ !
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ದೇಶಾದ್ಯಂತ ಟೊಮೆಟೊ ಬೆಲೆ ಗಗನಕ್ಕೇರಿರುವುದರಿಂದ ಅದರ ಬಿಸಿ ಜನಸಾಮಾನ್ಯರಿಗೆ ಮಾತ್ರ ತಟ್ಟಿಲ್ಲ, ಫಾಸ್ಟ್ ಫುಡ್ ಕ್ಷೇತ್ರದ ದೈತ್ಯ ಸಂಸ್ಥೆಯಾದ ಮೆಕ್ಡೊನಾಲ್ಡ್ಸ್ ಅನ್ನೂ ಬಾಧಿಸಿದೆ. ದೇಶಾದ್ಯಂತದ ತನ್ನ ಹಲವಾರು ರೆಸ್ಟೋರೆಂಟ್ಗಳಲ್ಲಿ ಬರ್ಗರ್ ಮತ್ತಿತರ ತಿನಿಸುಗಳಲ್ಲಿ ತಾತ್ಕಾಲಿಕ ಕ್ರಮವಾಗಿ ಟೊಮೆಟೊ ಬಳಸುವುದಿಲ್ಲ ಎಂದು ಕಂಪೆನಿ ಘೋಷಿಸಿದೆ.
ತನಗೆ ಅಗತ್ಯವಿರುವ ಅತ್ಯುತ್ಕೃಷ್ಟ ಗುಣಮಟ್ಟದ ಟೊಮೆಟೊಗಳನ್ನು ಪಡೆಯುವುದು ಅಸಾಧ್ಯವಾಗಿರುವುದರಿಂದ ಈ ಕ್ರಮಕೈಗೊಳ್ಳಲಾಗಿದೆ ಎಂದು ಸಂಸ್ಥೆ ವಿವರಣೆ ನೀಡಿದೆ.
ಸಂಸ್ಥೆಯು ಅತ್ಯಂತ ಕಠಿಣ ಗುಣಮಟ್ಟ ಪರೀಕ್ಷೆಗಳ ನಂತರವೇ ಟೊಮೆಟೊ ಖರೀದಿಸುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಈ ಗುಣಮಟ್ಟ ಪರೀಕ್ಷೆಯಲ್ಲಿ ಸಫಲವಾಗುವಂತಹ ಟೊಮೆಟೊಗಳು ದೊರಕಿಲ್ಲ ಹಾಗೂ ಕೆಲವೊಂದು ಸೀಸನಲ್ ಸಮಸ್ಯೆ ಎಂಬ ಕಾರಣವನ್ನು ಸಂಸ್ಥೆ ನೀಡಿದೆ.
ಆದರೆ ಸದ್ಯ ಟೊಮೆಟೊ ಬಳಸದೇ ಇರುವ ಕ್ರಮ ಒಂದು ತಾತ್ಕಾಲಿಕ ಕ್ರಮ ಮುಂದೆ ಎಂದಿನಂತೆ ಟೊಮೆಟೊ ಬಳಸಲಾಗುವುದು ಎಂದೂ ಮೆಕ್ಡೊನಾಲ್ಡ್ ಹೇಳಿದೆ.
"ಸಂಸ್ಥೆಯ ಹೊಸದಿಲ್ಲಿ ಮತ್ತು ನೊಯ್ಡಾ ಶಾಖೆಗಳ ಹೊರಗೆ ಅಂಟಿಸಲಾಗಿರುವ ನೋಟಿಸಿನಲ್ಲಿ, ಬಹಳಷ್ಟು ಶ್ರಮದ ಹೊರತಾಗಿಯೂ ಗುಣಮಟ್ಟದ ಟೊಮೆಟೊಗಳು ಸೂಕ್ತ ಪ್ರಮಾಣದಲ್ಲಿ ಲಭ್ಯವಿಲ್ಲ. ಆಹಾರದ ಅತ್ಯುತ್ಕೃಷ್ಟ ಗುಣಮಟ್ಟ ಮತ್ತು ಸುರಕ್ಷತೆಗಾಗಿ ಕಠಿಣ ತಪಾಸಣೆಯ ನಂತರವೇ ಯಾವುದೇ ಖರೀದಿ ಮಾಡಲಾಗುತ್ತದೆ,” ಎಂದು ಬರೆಯಲಾಗಿದೆ.
ದೇಶದಲ್ಲಿ ಕಳೆದ ಕೆಲ ದಿನಗಳಲ್ಲಿ ಟೊಮೆಟೊ ಬೆಲೆಗಳು ಕೆಲವೊಂದು ನಗರಗಳಲ್ಲಿ ರೂ. 150ರ ಗಡಿ ದಾಟಿವೆ.