NSA ಅಡಿ ವಿದ್ಯಾರ್ಥಿನಿಯ ಬಂಧನ: 5 ಲಕ್ಷ ರೂ. ಪರಿಹಾರ ನೀಡಬೇಕೆಂಬ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋದ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಂ

ಮೇಧಾ ರೂಪಂ (Photo Credit: ANI)
ಹೊಸದಿಲ್ಲಿ: ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿ ವಿದ್ಯಾರ್ಥಿನಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಆಕೃತಿ ಚೌಧರಿ ಅವರನ್ನು ಬಂಧಿಸಿದ್ದ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಗೌತಮ್ ಬುದ್ಧ ನಗರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೇಧಾ ರೂಪಮ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಆಕೃತಿ ಚೌಧರಿ ಅವರ ಬಂಧನದ ಆದೇಶವನ್ನು ಮೇಧಾ ರೂಪಮ್ ಹೊರಡಿಸಿದ್ದರು. ಆದರೆ ಈ ಬಂಧನ ಕಾನೂನುಬದ್ಧವಾಗಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿ, ಬಂಧನವನ್ನು ರದ್ದುಪಡಿಸಿತ್ತು. ಜತೆಗೆ ಚೌಧರಿ ಅವರಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು.
ಈ ಪರಿಹಾರದ ಹಣವನ್ನು ಬಂಧನದ ಆದೇಶ ಹೊರಡಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೇಧಾ ರೂಪಮ್ ಹಾಗೂ ಪ್ರಕರಣಕ್ಕೆ ಹೊಣೆಗಾರರಾದ ಇತರ ಅಧಿಕಾರಿಗಳ ವೇತನದಿಂದ ವಸೂಲಿ ಮಾಡುವಂತೆ ಹೈಕೋರ್ಟ್ ಸೂಚಿಸಿತ್ತು. ಠಾಣಾಧಿಕಾರಿ (SHO) ಹಂತದವರೆಗಿನ ಅಧಿಕಾರಿಗಳನ್ನೂ ಈ ಆದೇಶದಲ್ಲಿ ಸೇರಿಸಲಾಗಿತ್ತು. ಈ ಆದೇಶವನ್ನೇ ಮೇಧಾ ರೂಪಮ್ ಇದೀಗ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದಾರೆ.
ದಿಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಆಕೃತಿ ಚೌಧರಿ ಅವರು 2026ರ ಎಪ್ರಿಲ್ ನಲ್ಲಿ ನೋಯ್ಡಾದಲ್ಲಿ ನಡೆದ ಕಾರ್ಮಿಕರ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದರು.
ಹೆಚ್ಚಿನ ವೇತನಕ್ಕಾಗಿ ಕಾರ್ಮಿಕರು ನಡೆಸಿದ ಶಾಂತಿಯುತ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಬಂಧಿತರಾದ ಹಲವು ಕಾರ್ಯಕರ್ತರಲ್ಲಿ ಚೌಧರಿ ಕೂಡ ಒಬ್ಬರಾಗಿದ್ದರು. ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಸತ್ಯಂ ವರ್ಮಾ ಅವರನ್ನೂ ಇದೇ ಪ್ರಕರಣಗಳಿಗೆ ಸಂಬಂಧಿಸಿ ಬಂಧಿಸಲಾಗಿತ್ತು.
ನಂತರ, ಮೇ 13ರಂದು ಉತ್ತರ ಪ್ರದೇಶ ಪೊಲೀಸರು ಚೌಧರಿ ಮತ್ತು ಸತ್ಯಂ ವರ್ಮಾ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ, 1980 (NSA) ಅಡಿ ಕ್ರಮ ಕೈಗೊಂಡಿದ್ದರು.
ಹೈಕೋರ್ಟ್ ಏಕೆ ಬಂಧನ ರದ್ದುಪಡಿಸಿತು?
ಚೌಧರಿ ಅವರಿಗೆ ಯಾವುದೇ ಅಪರಾಧ ಹಿನ್ನೆಲೆ ಇರಲಿಲ್ಲ. ಅವರು ವಿದ್ಯಾರ್ಥಿ ಕಾರ್ಯಕರ್ತೆಯಾಗಿದ್ದರು. ಅವರು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದರು ಎಂಬುದನ್ನು ತೋರಿಸುವ ಸಾಕ್ಷ್ಯವೂ ಇರಲಿಲ್ಲ ಎಂದು ಹೈಕೋರ್ಟ್ ಗಮನಿಸಿತ್ತು.
ಪೊಲೀಸರು ನೀಡಿದ್ದ ವರದಿಯಲ್ಲಿ ವಿಶ್ವಾಸಾರ್ಹ ಪೂರಕ ಸಾಕ್ಷ್ಯಗಳಿಲ್ಲದೆ ಕೇವಲ ಆರೋಪಗಳು ಮಾತ್ರ ಇದ್ದವು ಎಂದು ನ್ಯಾಯಾಲಯ ಹೇಳಿತ್ತು.
ಇಂತಹ ಪರಿಸ್ಥಿತಿಯಲ್ಲಿ NSAಯಂತಹ ಕಠಿಣ ಕಾನೂನಿನ ಅಡಿ ಬಂಧನ ಅಗತ್ಯವೇ ಎಂಬುದನ್ನು ಜಿಲ್ಲಾಧಿಕಾರಿ ದಾಖಲೆಗಳನ್ನು ಸಂಪೂರ್ಣವಾಗಿ ಮತ್ತು ಕೂಲಂಕಷವಾಗಿ ಪರಿಶೀಲಿಸಿ ನಿರ್ಧರಿಸಬೇಕಿತ್ತು. ಆದರೆ ಹಾಗೆ ಮಾಡದೆ ‘ಯಾವುದೇ ವಿವೇಚನೆಯಿಲ್ಲದೆ’ ಬಂಧನದ ಆದೇಶ ಹೊರಡಿಸಲಾಗಿದೆ ಎಂದು ಹೈಕೋರ್ಟ್ ಹೇಳಿತ್ತು.
ನ್ಯಾಯಮೂರ್ತಿ ಅತುಲ್ ಶ್ರೀಧರನ್ ಮತ್ತು ನ್ಯಾಯಮೂರ್ತಿ ಅಚಲ್ ಸಚ್ದೇವ್ ಅವರಿದ್ದ ನ್ಯಾಯಪೀಠ, ಈ ಬಂಧನವು ಸಂವಿಧಾನದ 21ನೇ ವಿಧಿ ನೀಡಿರುವ ಮೂಲಭೂತ ಹಕ್ಕನ್ನು ಉಲ್ಲಂಘಿಸಿದೆ ಎಂದು ಹೇಳಿತ್ತು.
ಬಂಧನದ ಆದೇಶ ಹೊರಡಿಸಿದ ಗೌತಮ್ ಬುದ್ಧ ನಗರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೇಧಾ ರೂಪಮ್ ಅವರ ‘ನಡವಳಿಕೆಯು ಖಂಡನೀಯವಾಗಿದೆ’ ಎಂದು ನ್ಯಾಯಪೀಠ ಕಟುವಾಗಿ ಹೇಳಿತ್ತು.
‘ಪಾಠ ಕಲಿಸಲು ಬಂಧನ’
ಚೌಧರಿ ಅವರನ್ನು ‘ಒಂದು ಉದಾಹರಣೆಯನ್ನಾಗಿ’ ಮಾಡುವ ಉದ್ದೇಶ ಅಧಿಕಾರಿಗಳಿಗೆ ಇತ್ತು ಎಂಬುದನ್ನು ಪ್ರಕರಣದ ಸನ್ನಿವೇಶಗಳು ತೋರಿಸುತ್ತವೆ ಎಂದು ನ್ಯಾಯಾಲಯ ಹೇಳಿತ್ತು.
ಕಾರ್ಮಿಕರ ಪರವಾಗಿ ಸಾರ್ವಜನಿಕ ಸ್ಥಳಗಳಲ್ಲಿ ತಮ್ಮ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಲು ಇತರರು ಮುಂದಾಗದಂತೆ ತಡೆಯುವ ಉದ್ದೇಶವೂ ಇದರಲ್ಲಿ ಇತ್ತು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.
ಹೈಕೋರ್ಟ್ ತನ್ನ 15 ಪುಟಗಳ ಆದೇಶದಲ್ಲಿ ಅಧಿಕಾರಿಗಳು ಮತ್ತು ಪೊಲೀಸರ ಜವಾಬ್ದಾರಿಯ ಬಗ್ಗೆಯೂ ಹೇಳಿತ್ತು.
ನಾಗರಿಕರ ಸಾಂವಿಧಾನಿಕ ಮತ್ತು ಕಾನೂನುಬದ್ಧ ಹಕ್ಕುಗಳು, ಘನತೆ, ಗೌರವ ಹಾಗೂ ಕಲ್ಯಾಣವನ್ನು ರಕ್ಷಿಸುವುದು ಅಧಿಕಾರಿಗಳ ಜವಾಬ್ದಾರಿ. ಈ ಕಾರಣದಿಂದ ಅವರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ ಎಂದು ನ್ಯಾಯಾಲಯ ಹೇಳಿತ್ತು.
ಆದರೆ ಅಧಿಕಾರಿಗಳು ತಮ್ಮ ‘ನಿಷ್ಠೆ ಸಂವಿಧಾನಕ್ಕೆ ಇರಬೇಕೇ ಹೊರತು ರಾಜಕೀಯ ಕಾರ್ಯಾಂಗಕ್ಕಲ್ಲ’ ಎಂಬುದನ್ನು ಮರೆಯಬಾರದು ಎಂದು ನ್ಯಾಯಪೀಠ ಹೇಳಿತ್ತು.
ಅಧಿಕಾರಿಗಳು ಜನರ ಸೇವಕರು. ‘ಪ್ರಜಾಪ್ರಭುತ್ವದಲ್ಲಿ ಜನರೇ ಯಜಮಾನರು’ ಎಂದು ನ್ಯಾಯಾಲಯ ಹೇಳಿತ್ತು.
ಅಧಿಕಾರಿಗಳು ಮತ್ತು ಪೊಲೀಸರು ತಮ್ಮ ಪ್ರಮಾಣವಚನಕ್ಕೆ ವಿರುದ್ಧವಾಗಿ ನಡೆದುಕೊಂಡರೆ, ಜನರು ಅವರನ್ನು ‘ಬ್ರಿಟಿಷ್ ಸಾಮ್ರಾಜ್ಯದ ದಮನಕಾರಿ ಅವಶೇಷ’ ಎಂದು ಪರಿಗಣಿಸಬಹುದು. ಇದರಿಂದ ನಾಗರಿಕ ಅಶಾಂತಿ ಉಂಟಾಗುವ ಸಾಧ್ಯತೆ ಇದೆ ಎಂದು ನ್ಯಾಯಾಲಯ ಎಚ್ಚರಿಸಿತ್ತು.
ಇಂತಹ ತಪ್ಪುಗಳು ಮುಂದುವರಿದರೆ ಉತ್ತರ ಪ್ರದೇಶವು ‘ಆರ್ವೆಲಿಯನ್ ಡಿಸ್ಟೋಪಿಯಾ’, ಅಂದರೆ ಸರ್ವಾಧಿಕಾರಿ ಮತ್ತು ದಮನಕಾರಿ ವ್ಯವಸ್ಥೆಯಾಗಿ ಬದಲಾಗಬಹುದು ಎಂದು ನ್ಯಾಯಪೀಠ ಎಚ್ಚರಿಸಿತ್ತು.
ಸರಿಯಾದ ಕಾರಣವಿಲ್ಲದೆ ಅಥವಾ ಕಾನೂನುಬದ್ಧ ಪ್ರಕ್ರಿಯೆ ಅನುಸರಿಸದೆ ನಾಗರಿಕರ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾದರೆ, ಅದನ್ನು ಸರಿಪಡಿಸಲು ನ್ಯಾಯಾಲಯ ‘ಕಠಿಣ ಆದೇಶ’ ನೀಡಬಹುದು ಎಂದು ಹೈಕೋರ್ಟ್ ಹೇಳಿತ್ತು.
ಅದರಂತೆ, ಚೌಧರಿ ಅವರಿಗೆ 5 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು. ಈ ಹಣವನ್ನು ಬಂಧನದ ಆದೇಶ ಹೊರಡಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ಮೇಧಾ ರೂಪಮ್ ಹಾಗೂ ಪ್ರಕರಣಕ್ಕೆ ಜವಾಬ್ದಾರರಾದ ಇತರ ಅಧಿಕಾರಿಗಳ ವೇತನದಿಂದ ವಸೂಲಿ ಮಾಡುವಂತೆ ಸೂಚಿಸಿತ್ತು.
ಈ ಆದೇಶದಿಂದ ತಮ್ಮ ವೇತನದಿಂದ ಪರಿಹಾರ ವಸೂಲಿ ಮಾಡುವಂತೆ ನೀಡಿರುವ ನಿರ್ದೇಶನ ಸೇರಿದಂತೆ ಹೈಕೋರ್ಟ್ ನ ತೀರ್ಪನ್ನು ಪ್ರಶ್ನಿಸಿ ಮೇಧಾ ರೂಪಮ್ ಅವರು ಇದೀಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ.






