ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕಾರ : ಫಲಿತಾಂಶ ಪ್ರಕಟನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ

ಮೀನಾಕ್ಷಿ ನಟರಾಜನ್ | Photo Credit : PTI
ಹೊಸದಿಲ್ಲಿ, ಜೂ. 11: ತನ್ನ ರಾಜ್ಯಸಭಾ ನಾಮಪತ್ರವನ್ನು ಚುನಾವಣಾಧಿಕಾರಿ ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಕೊಂಡಿದೆ. ಆದರೆ, ರಾಜ್ಯಸಭಾ ಚುನಾವಣಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಅದು ನಿರಾಕರಿಸಿದೆ.
ಚುನಾವಣಾ ಫಲಿತಾಂಶ ಘೋಷಿಸದಂತೆ ತಡೆಯುವ ಯಾವುದೇ ಮಧ್ಯಂತರ ಆದೇಶವನ್ನು ನೀಡಲು ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಅತುಲ್ ಎಸ್. ಚಂದೂರ್ಕರ್ ಅವರನ್ನೊಳಗೊಂಡ ನ್ಯಾಯಪೀಠವು ನಿರಾಕರಿಸಿತು. 2000ದಲ್ಲಿ, ಭಾರತೀಯ ಚುನಾವಣಾ ಆಯೋಗ ಮತ್ತು ಅಶೋಕ್ ಕುಮಾರ್ ನಡುವಿನ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಹೇಳಿತು. ಚುನಾವಣಾ ಪ್ರಕ್ರಿಯೆ ಪ್ರಾರಂಭವಾದ ನಂತರ ಪ್ರಕ್ರಿಯೆಯಲ್ಲಿ ನ್ಯಾಯಾಲಯಗಳು ಸಾಮಾನ್ಯವಾಗಿ ಹಸ್ತಕ್ಷೇಪ ಮಾಡಬಾರದು ಎಂಬುದಾಗಿ ಸುಪ್ರೀಂ ಕೋರ್ಟ್ ಹೇಳಿತ್ತು.
ಮೀನಾಕ್ಷಿ ನಟರಾಜನ್ ಪರ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಫಲಿತಾಂಶ ಘೋಷಿಸದಂತೆ ಅಧಿಕಾರಿಗಳನ್ನು ನಿರ್ಬಂಧಿಸಿ ತುರ್ತು ಮಧ್ಯಂತರ ಆದೇಶ ನೀಡುವಂತೆ ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ‘‘ಕ್ಷಮಿಸಿ, ನಾವು ಹಾಗೆ ಮಾಡಲು ಸಾಧ್ಯವಿಲ್ಲ. ನಿಮ್ಮ ಅರ್ಜಿಯಲ್ಲಿರುವ ಎಲ್ಲಾ ಲೋಪದೋಷಗಳು ಸರಿಯಾದರೆ, ಅದರ ವಿಚಾರಣೆಯನ್ನು ನಾವು ನಾಳೆ ಮಾಡುತ್ತೇವೆ’’ ಎಂದು ಹೇಳಿತು.
ಗುರುವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ನಟರಾಜನ್ ಅವರ ಉಮೇದುವಾರಿಕೆ ತಿರಸ್ಕೃತಗೊಂಡಿರುವುದರಿಂದ, ನಾಮಪತ್ರ ಹಿಂಪಡೆಯುವ ಗಡುವು ಮುಗಿದ ತಕ್ಷಣ, ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂಬುದಾಗಿ ಚುನಾವಣಾಧಿಕಾರಿ ಘೋಷಿಸಬಹುದು ಎಂಬ ಕಾಂಗ್ರೆಸ್ನ ಕಳವಳದ ನಡುವೆ ನ್ಯಾಯಾಲಯದ ಈ ಆದೇಶ ಬಂದಿದೆ.
ಜನತಾ ಪ್ರಾತಿನಿಧ್ಯ ಕಾಯ್ದೆಯ ಪರಿಚ್ಛೇದ 33ಎ ಅಡಿಯಲ್ಲಿ ಮಾಹಿತಿ ಬಹಿರಂಗಪಡಿಸುವುದಕ್ಕೆ ಸಂಬಂಧಿಸಿದ ಗಂಭೀರ ಕಾನೂನು ಸಮಸ್ಯೆಯನ್ನು ಈ ವಿಷಯ ಒಳಗೊಂಡಿದೆ ಎಂದು ಹೇಳಿದ ಸಿಂಘ್ವಿ, ನ್ಯಾಯಾಲಯದ ತುರ್ತು ಹಸ್ತಕ್ಷೇಪವನ್ನು ಕೋರಿದರು.
‘‘ನ್ಯಾಯಾಲಯದಲ್ಲಿ ಯಾವುದೇ ಮೊಕದ್ದಮೆ ಇಲ್ಲದಿದ್ದರೂ ನನ್ನ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಅವರು ಹೀಗೆ ಮಾಡಲು ಹೇಗೆ ಸಾಧ್ಯ’’ ಎಂದು ಸಿಂಘ್ವಿ ಪ್ರಶ್ನಿಸಿದರು.
ಆದರೆ, ಚುನಾವಾಣಾ ವಿಷಯಗಳಲ್ಲಿ ನ್ಯಾಯಾಂಗ ಮಧ್ಯಪ್ರವೇಶಕ್ಕೆ ಸಂಬಂಧಿಸಿದ ನೀತಿ ಅಶೋಕ್ ಕುಮಾರ್ ಪ್ರಕರಣದಲ್ಲಿ ಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಹೇಳಿತು. ಚುನಾವಣಾ ಪ್ರಕ್ರಿಯೆ ನಡೆಯುತ್ತಿರುವಾಗ, ನ್ಯಾಯಾಲಯಗಳು ಸಾಮಾನ್ಯವಾಗಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಪೀಠ ಹೇಳಿತು.






