ಮೀನಾಕ್ಷಿ ನಾಮಪತ್ರ ತಿರಸ್ಕಾರ: ಕಾಂಗ್ರೆಸ್ ನಿಯೋಗ ಭೇಟಿಗೆ ಚುನಾವಣಾ ಆಯೋಗ ಒಪ್ಪಿಗೆ

Photo Credit: PTI
ಹೊಸದಿಲ್ಲಿ: ಕಾಂಗ್ರೆಸ್ ನಾಯಕಿ ಮೀನಾಕ್ಷಿ ನಟರಾಜನ್ ಅವರು ರಾಜ್ಯಸಭಾ ಚುನಾವಣೆಗೆ ಸ್ಪರ್ಧಿಸಲು ಬಯಸಿ ಸಲ್ಲಿಸಿದ ನಾಮಪತ್ರವನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಧರಣಿ ನಡೆಸುತ್ತಿರುವ ಕಾಂಗ್ರೆಸ್ ಮುಖಂಡರ ನಿಯೋಗವನ್ನು ಭೇಟಿ ಮಾಡಿ ಚರ್ಚಿಸಲು ಚುನಾವಣಾ ಆಯೋಗ ಮುಂದಾಗಿದೆ.
ಮಧ್ಯಪ್ರದೇಶದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಮೀನಾಕ್ಷಿ ಸಲ್ಲಿಸಿದ ನಾಮಪತ್ರದ ಜತೆಗೆ ನೀಡಿದ ಅಫಿಡವಿಟ್ನಲ್ಲಿ ಕೆಲ ಮಾಹಿತಿಗಳನ್ನು ಮುಚ್ಚಿಡಲಾಗಿದೆ ಎಂಬ ಆರೋಪದಲ್ಲಿ ಮಂಗಳವಾರ ನಾಮಪತ್ರ ತಿರಸ್ಕರಿಸಲಾಗಿತ್ತು. ಇದನ್ನು ಪ್ರತಿಭಟಿಸಿ ಕಾಂಗ್ರೆಸ್ ಮುಖಂಡರು ಧರಣಿ ನಡೆಸುತ್ತಿದ್ದಾರೆ. ಇದಕ್ಕೆ ಸ್ಪಂದಿಸಿರುವ ಚುನಾವಣಾ ಆಯೋಗ ಬುಧವಾರ ಮಧ್ಯಾಹ್ನ 12 ಗಂಟೆಗೆ ಪಕ್ಷದ ನಿಯೋಗದ ಮುಖಂಡರ ಭೇಟಿಗೆ ಅವಕಾಶ ಮಾಡಿಕೊಟ್ಟಿದೆ.
"09.06.2026ರ ದಿನಾಂಕದ ಪತ್ರದಲ್ಲಿ ಉಲ್ಲೇಖಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ಪತ್ರದಲ್ಲಿ ಮಾಡಿಕೊಂಡ ಮನವಿಯನ್ನು ಚುನಾವಣಾ ಆಯೋಗ ಪರಿಗಣಿಸಿ, ಭಾರತ ರಾಷ್ಟ್ರೀಯ ಕಾಂಗ್ರೆಸ್ನ ನಿಯೋಗವನ್ನು ಚರ್ಚೆಗಾಗಿ 10.06.2026ರಂದು ಬುಧವಾರ ಮಧ್ಯಾಹ್ನ 12.00 ಗಂಟೆಗೆ ಹೊಸದಿಲ್ಲಿಯ ಅಶೋಕ ರಸ್ತೆಯ ನಿರ್ವಚನ ಸೌಧದಲ್ಲಿ ಭೇಟಿ ಮಾಡಲು ಅವಕಾಶ ಕಲ್ಪಿಸಿದೆ" ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಬಿಜೆಪಿಯ ಮೂರನೇ ಅಭ್ಯರ್ಥಿಯಾಗಿ ಕಣದಲ್ಲಿರುವ ಮಹೇಶ್ ಕೇವಟ್ ಅವರ ದೂರಿನ ಮೇರೆಗೆ ಮೀನಾಕ್ಷಿ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿತ್ತು. ತೆಲಂಗಾಣದಲ್ಲಿ ಮೀನಾಕ್ಷಿ ವಿರುದ್ಧ ಬಾಕಿ ಇರುವ ಅಪರಾಧ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ಅವರು ಮುಚ್ಚಿಟ್ಟಿದ್ದಾರೆ ಎನ್ನುವುದು ಬಿಜೆಪಿಯ ಆರೋಪವಾಗಿದೆ.






