ಪತ್ರಿಕೋದ್ಯಮ ಕೋರ್ಸ್ ಗೆ ರಾಮಾಯಣ, ಮಹಾಭಾರತ ಸೇರಿಸಿದ ಮೀರಠ್ ವಿವಿ

PC: x.com/bstvlive
ಮೀರಠ್: ಮೀರಠ್ ವಿಶ್ವವಿದ್ಯಾನಿಲಯ ಎಂದು ಜನಪ್ರಿಯವಾಗಿರುವ ಚೌಧರಿ ಚರಣ್ ಸಿಂಗ್ ವಿಶ್ವವಿದ್ಯಾನಿಲಯ (ಸಿಸಿಎಸ್ಯು) ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ಕೋರ್ಸ್ ಗೆ 'ಭಾರತೀಯ ಸಂಚಾರ ಕೆ ಪ್ರರೂಪ್ (ಭಾರತದ ಸಂಪರ್ಕ ಮಾದರಿಗಳು) ಎಂಬ ಹೊಸ ವಿಷಯವನ್ನು ಸೇರಿಸಿದೆ. ಇದು ರಾಮಾಯಣ ಮತ್ತು ಮಹಾಭಾರತದಂಥ ಪುರಾಣಗಳಲ್ಲಿ ಉಲ್ಲೇಖಿಸಿರುವ ಸಂಪರ್ಕ ವಿಧಾನಗಳ ಬಗ್ಗೆ ಜ್ಞಾನವನ್ನು ಬೆಳೆಸಿಕೊಳ್ಳಲು ನೆರವಾಗಲಿದೆ ಎಂದು ವಿವಿ ಅಧಿಕಾರಿಯೊಬ್ಬರು ಸಮರ್ಥಿಸಿಕೊಂಡಿದ್ದಾರೆ.
ಭಾರತದ ಪ್ರಾಚೀನ ಬೌದ್ಧಿಕ ಪರಂಪರೆಯನ್ನು ಸಮಕಾಲೀನ ಪತ್ರಿಕೋದ್ಯಮ ಶಿಕ್ಷಣದ ಜತೆ ಜೋಡಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಲಕ್ ಸ್ಕೂಲ್ ಆಫ್ ಜರ್ನಲಿಸಂ ಅಂಡ್ ಮಾಸ್ ಕಮ್ಯುನಿಕೇಶನ್ ನ ನಿರ್ದೇಶಕ ಪ್ರೊಫೆಸರ್ ಪ್ರಶಾಂತ್ ಕುಮಾರ್ ಹೇಳಿದ್ದಾರೆ.
ಅಂಧ ದೊರೆ ದೃತರಾಷ್ಟ್ರನಿಗೆ ಕುರುಕ್ಷೇತ್ರ ಯುದ್ಧವನ್ನು ದಿವ್ಯ ದೃಷ್ಟಿಯ ಮೂಲಕ ಸಂಜಯ ಬೋಧಿಸಿರುವುದು ನೇರ ಪ್ರಸಾರದ ವರದಿಗಾರಿಕೆಗೆ ಉತ್ತಮ ಉದಾಹರಣೆ ಎಂದು ಅವರು ಹೇಳಿದ್ದಾರೆ. ಅಂತೆಯೇ ಸೀತೆಯನ್ನು ಬಂಧನದಲ್ಲಿ ಇಟ್ಟಿದ್ದ ಅವಧಿಯಲ್ಲಿ ರಾಮ ಮತ್ತು ಸೀತೆಯ ನಡುವೆ ಸಂವಹನ ಸಂಪರ್ಕ ಸೇತುವಾಗಿ ಹನುಮಂತ ಹೇಗೆ ಕಾರ್ಯನಿರ್ವಹಿಸಿದ ಎನ್ನುವುದನ್ನು ಕೂಡಾ ವಿದ್ಯಾರ್ಥಿಗಳು ಕಲಿಯಲಿದ್ದಾರೆ ಎಂದು ವಿವರಿಸಿದರು.
ನಮ್ಮದೇ ದೇಶದಲ್ಲಿ ಸಾಕಷ್ಟು ಸಂಶೋಧನೆ ಮತ್ತು ಕಾರ್ಯಗಳ ಸಮೃದ್ಧಿ ಇದ್ದರೂ ನಾವು ಪಾಶ್ಚಿಮಾತ್ಯ ವಿಧಾನವನ್ನು ಇನ್ನೂ ಕಲಿಯುತ್ತಿದ್ದೇವೆ. ಇನ್ನು ಮುಂದೆ ನಮ್ಮದೇ ಪರಂಪರೆಯ ಬಗ್ಗೆ ನಾವು ಗಮನ ಹರಿಸಲಿದ್ದು, ನಮಗಿಂತ ಉತ್ತಮವಾಗಿ ನಮ್ಮ ಸಂಸ್ಕೃತಿಯನ್ನು ಬೇರಾರೂ ಅರ್ಥ ಮಾಡಿಕೊಳ್ಳಲಾರರು ಎಂದು ಸಮರ್ಥಿಸಿಕೊಂಡಿದ್ದಾರೆ.
ಭಗವದ್ಗೀತೆಯನ್ನು ಹಲವು ದೇಶಗಳು ಮ್ಯಾನೇಜ್ ಮೆಂಟ್ ಶಿಕ್ಷಣಕ್ಕೆ ಬೋಧಿಸುತ್ತಿವೆ ಎನ್ನುವುದನ್ನು ಅವರು ಉಲ್ಲೇಖಿಸಿದರು. ಪ್ರಾಚೀನ ಭಾರತೀಯ ಸಂಪರ್ಕ ವಿಧಾನಗಳು, ಸಾವಿರಾರು ವರ್ಷ ಹಳೆಯದಾದರೂ ಇಂದಿಗೂ ಇದು ಪ್ರಸ್ತುತ; ಭವಿಷ್ಯದಲ್ಲೂ ಇದು ಪ್ರಸ್ತುತವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.







