ನಮೀಬಿಯಾದಲ್ಲಿ ಮತ್ತೆ ಗೆಲುವಿನ ಅಂಚಿನಲ್ಲಿ ʼಅಡಾಲ್ಫ್ ಹಿಟ್ಲರ್ʼ!

Photo: Wikipedia
ವಿಂಡ್ಹೋಕ್: ಜರ್ಮನ್ ನ ನಾಝೀ ನಾಯಕ ಅಡಾಲ್ಫ್ ಹಿಟ್ಲರ್ ಅವರ ಹೆಸರೆಂದರೆ ಜಗತ್ತಿನಲ್ಲಿ ಇವತ್ತಿಗೂ ದ್ವೇಷ, ತಿರಸ್ಕಾರ ಮತ್ತು ಕಳಂಕದ ಸಂಕೇತ. 1945ರಲ್ಲಿ ಜರ್ಮನಿಯ ಅಡಾಲ್ಫ್ ಹಿಟ್ಲರ್ ನಿಧನ ಹೊಂದಿದ್ದಾರೆ. ಆದರೆ ಅದೇ ಹೆಸರು ನಮೀಬಿಯಾದಲ್ಲಿ ಭಿನ್ನ ಪ್ರತಿಕ್ರಿಯೆ ಹುಟ್ಟುಹಾಕಿದೆ. ಅಡಾಲ್ಫ್ ಹಿಟ್ಲರ್ ಉನೋನಾ ಎಂಬ ರಾಜಕಾರಣಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎರಡನೇ ಬಾರಿ ಭಾರೀ ಬಹುಮತದಿಂದ ಗೆಲ್ಲುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.
ಸ್ವಾಪೋ ಪಕ್ಷದ ಅಭ್ಯರ್ಥಿಯಾಗಿರುವ 59 ವರ್ಷದ ಉನೋನಾ, ಓಂಪುಂಡ್ಜಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು ಮತ ಎಣಿಕೆಯ ಪ್ರಾಥಮಿಕ ಅಂಕಿ ಅಂಶಗಳ ಪ್ರಕಾರ ಅವರು ಎದುರಾಳಿಗಳಿಗಿಂತ ಮುನ್ನಡೆ ಸಾಧಿಸಿದ್ದಾರೆ. 2020ರಲ್ಲಿ ಇದೇ ಹೆಸರಿನ ಕಾರಣಕ್ಕೆ ಅವರು ಅಂತಾರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆದಿದ್ದರು. ಐದು ವರ್ಷಗಳ ನಂತರವೂ ಅದೇ ಕಾರಣದಿಂದ ಅವರು ಮತ್ತೆ ಸುದ್ದಿಯಲ್ಲಿದ್ದಾರೆ.
ನಮೀಬಿಯಾ ಒಮ್ಮೆ ನೈಋತ್ಯ ಆಫ್ರಿಕಾ ಎಂಬ ಹೆಸರಿನಲ್ಲಿ ಜರ್ಮನ್ ವಸಾಹತುಶಾಹಿ ಆಳ್ವಿಕೆಗೆ ಒಳಪಟ್ಟಿತ್ತು. 1904 ರಿಂದ 1908ರ ನಡುವೆ ಹೆರೆರೊ ಮತ್ತು ನಮಕ್ವಾ ಸಮುದಾಯದ 60,000ರಿಂದ 100,000 ಜನರನ್ನು ಜರ್ಮನ್ ಪಡೆಗಳು ನರಮೇಧ ಮಾಡಿದ್ದವು. ಇಂದಿಗೂ ಜರ್ಮನ್ ಹೆಸರುಗಳು ಮತ್ತು ಪ್ರಭಾವ ಈ ದೇಶದಲ್ಲಿ ಕಾಣಸಿಗುತ್ತವೆ.
ಜರ್ಮನ್ ಮಾಧ್ಯಮಕ್ಕೆ ನೀಡಿದ್ದ ಸಂದರ್ಶನದಲ್ಲಿ ಉನೋನಾ, ತನ್ನನ್ನು “ಅಡಾಲ್ಫ್ ಉನೋನಾ” ಎಂದು ಕರೆಸಿಕೊಳ್ಳಲು ಇಷ್ಟಪಡುತ್ತೇನೆಂದು ತಿಳಿಸಿದ್ದರು. “ಬಾಲ್ಯದಲ್ಲಿ ಇದು ಸಾಮಾನ್ಯ ಹೆಸರು ಆಗಿತ್ತು. ಹದಿಹರೆಯದಲ್ಲಿ ಮಾತ್ರ ಹಿಟ್ಲರ್ ನ ಇತಿಹಾಸ ತಿಳಿಯಿತು,” ಎಂದು ಅವರು ಹೇಳಿದ್ದಾರೆ. ತಮ್ಮ ಅಧಿಕೃತ ದಾಖಲೆಗಳಲ್ಲಿ ಅದೇ ಹೆಸರು ಇರುವುದರಿಂದ ಈಗ ಬದಲಾಯಿಸಲು ಹೋಗುವುದು ತುಂಬಾ ತಡವಾಗಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.
ಸೌಜನ್ಯ: indianexpress.com







