ಮಧ್ಯಪ್ರದೇಶ | ಪುರುಷರು ಮತ್ತು ಮಹಿಳೆಯರ ಮಧ್ಯೆ ಕಬಡ್ಡಿ ಪಂದ್ಯ : ವಿವಾದ

Photo | indiatoday
ಭೋಪಾಲ್ : ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಮಧ್ಯಪ್ರದೇಶದ ನಿವಾರಿ ಜಿಲ್ಲೆಯಲ್ಲಿ ಪುರುಷರ ಮತ್ತು ಮಹಿಳೆಯರ ನಡುವೆ ಕಬಡ್ಡಿ ಪಂದ್ಯವನ್ನು ಆಯೋಜಿಸಲಾಗಿದೆ. ಈ ಪಂದ್ಯದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಈ ಬೆಳವಣಿಗೆಯನ್ನು ಅಶಿಸ್ತಿನ ಕೃತ್ಯ ಎಂದು ಟೀಕಿಸಿದ ಕಾಂಗ್ರೆಸ್ ಆಯೋಜಕರ ನಡೆಯನ್ನು ಪ್ರಶ್ನಿಸಿದೆ.
ನಮ್ಮ ಒಪ್ಪಿಗೆಯೊಂದಿಗೆ ಆಡಲಾಗಿದೆ. ಅದರಲ್ಲಿ ಅನುಚಿತವಾದುದು ಏನೂ ಇಲ್ಲ ಎಂದು ಮಹಿಳಾ ಆಟಗಾರ್ತಿಯರು ಹೇಳಿದ್ದಾರೆ.
ನಾವು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಪುರುಷರೊಂದಿಗೆ ಕಬಡ್ಡಿ ಪಂದ್ಯಾಟವನ್ನು ಅಭ್ಯಾಸ ಮಾಡುತ್ತೇವೆ. ಇದರಲ್ಲಿ ಅಶಿಸ್ತಿನ ಪ್ರಶ್ನೆಯೇ ಇಲ್ಲ. ಕ್ರೀಡೆಗಳನ್ನು ರಾಜಕೀಯಗೊಳಿಸುವುದರಿಂದ ಕ್ರೀಡಾಪಟುಗಳ ನೈತಿಕ ಸ್ಥೈರ್ಯ ಕುಗ್ಗುತ್ತದೆ ಎಂದು ಕ್ರೀಡಾಪಟು ಓರ್ವರು ಹೇಳಿದ್ದಾರೆ.
ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ಕಾಂಗ್ರೆಸ್ ಪಕ್ಷ ಕ್ರೀಡೆಯನ್ನು ರಾಜಕೀಯಕ್ಕೆ ಎಳೆದು ತರುತ್ತಿದೆ ಎಂದು ಆರೋಪಿಸಿದೆ. "ವಿರೋಧ ಪಕ್ಷ ಅನಗತ್ಯವಾಗಿ ಕ್ರೀಡೆಗಳನ್ನು ರಾಜಕೀಯಗೊಳಿಸುತ್ತಿದೆ. ಆಟಗಳ ಉದ್ದೇಶ ಆಟಗಾರರ ಆತ್ಮವಿಶ್ವಾಸವನ್ನು ದುರ್ಬಲಗೊಳಿಸುವುದಲ್ಲ, ಶಿಸ್ತು ಮತ್ತು ತಂಡದ ಸ್ಪೂರ್ತಿಯನ್ನು ಬೆಳೆಸುವುದಾಗಿದೆ "ಎಂದು ಬಿಜೆಪಿ ನಾಯಕ ಅನಿಲ್ ಪಾಂಡೆ ಹೇಳಿದ್ದಾರೆ.





