ಉಗ್ರರನ್ನು ಶಿಕ್ಷಿಸುವ ಭದ್ರತಾ ಮಂಡಳಿ ಕರೆಗೆ ಅನುಸಾರವಾಗಿ ದಾಳಿ: ವಿಶ್ವಕ್ಕೆ ಸಂದೇಶ ರವಾನಿಸಿದ ಭಾರತ

PC: x.com/EconomicTimes
ಹೊಸದಿಲ್ಲಿ: ಪೆಹಲ್ಗಾಮ್ ದಾಳಿಕೋರರು ಮತ್ತು ಅವರ ಹಿಂದಿರುವವರನ್ನು ನ್ಯಾಯಾಲಯದ ಕಟಕಟೆಗೆ ತರುವ ಹಾಗೂ ಭಾರತದ ನೆಲದಲ್ಲಿ ಪಾಕಿಸ್ತಾನ ಮೂಲದ ಉಗ್ರಗಾಮಿ ಯೋಜಿತ ಕೃತ್ಯಗಳನ್ನು ತಡೆಯಬೇಕು ಎನ್ನುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೇಳಿಕೆಗೆ ಅನುಗುಣವಾಗಿ ಆಪರೇಷನ್ ಸಿಂಧೂರ ನಡೆಸಲಾಗಿದೆ ಎಂಬ ಸಂದೇಶವನ್ನು ಭಾರತ ಸರ್ಕಾರ ಅಂತರರಾಷ್ಟ್ರೀಯ ಸಮುದಾಯಕ್ಕೆ ರವಾನಿಸಿದೆ.
ಭಾರತದ ದಾಳಿಗಳು ಉದ್ವಿಗ್ನತೆಗೆ ಕಾರಣವಾಗುವಂಥದ್ದಲ್ಲ, ಜವಾಬ್ದಾರಿಯುತ, ಸಮತೋಲಿತ ಮತ್ತು ಪ್ರಮಾಣಾನುಸಾರ ದಾಳಿ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹೇಳಿಕೆ ನಿಡಿದ್ದಾರೆ. ಉಗ್ರರು ಪಾಕಿಸ್ತಾನವನ್ನು ಸಂಪರ್ಕಿಸಿರುವುದು ಮತ್ತು ಪಾಕಿಸ್ತಾನದಿಂದ ಉಗ್ರರಿಗೆ ಮಾಹಿತಿ ವಿನಿಮಯವಾಗಿರುವುದೂ ಸೇರಿದಂತೆ ಪಹಲ್ಗಾಮ್ ದಾಳಿಗೂ ಪಾಕಿಸ್ತಾನಕ್ಕೂ ಸಂಪರ್ಕ ಇದೆ ಎನ್ನುವುದಕ್ಕೆ ಸ್ಪಷ್ಟ ಪುರಾವೆ ಇದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ದ ರೆನಿಸ್ಟೆಂಟ್ ಫ್ರಂಟ್ (ಆರ್ ಟಿಎಫ್) ಪಹಲ್ಗಾಮ್ ದಾಳಿಯ ಹೊಣೆ ಹೊತ್ತಿದ್ದು, ಇದು ಲಷ್ಕರ್ ಇ ತೊಯ್ಬಾದ ಭಾಗವಾಗಿದೆ. ಭಾರತದ ಗುಪ್ತಚರ ವಿಭಾಗ ದಾಳಿಯ ಸಂಚುಕೋರರ ಹಾಗೂ ಅವರನ್ನು ಬೆಂಬಲಿಸಿದವರ ಸ್ಪಷ್ಟ ಚಿತ್ರಣವನ್ನು ಅಭಿವೃದ್ಧಿಪಡಿಸಿದೆ ಎಂದು ಮಿಸ್ರಿ ವಿವರಿಸಿದ್ದಾರೆ.
ದಾಳಿಗೆ ಪ್ರತಿಕ್ರಿಯೆ ನೀಡುವ, ಪೂರ್ವಾನುಮತಿ ಪಡೆದ ಮತ್ತು ಗಡಿಯಾಚೆಗಿನ ದಾಳಿ ಮಂದೆ ನಡೆಯದಂತೆ ತಡೆಯುವ ತನ್ನ ಹಕ್ಕನ್ನು ಭಾರತ ಚಲಾಯಿಸಿದೆ. ಭಾರತದ ಕಾರ್ಯಾಚರಣೆಯು ಉಗ್ರರ ಮೂಲಸೌಕರ್ಯವನ್ನು ಧ್ವಂಸಗೊಳಿಸುವ ಮತ್ತು ಭಾರತಕ್ಕೆ ಉಗ್ರರನ್ನು ಕಳುಹಿಸದಂತೆ ತಡೆಯುವ ಉದ್ದೇಶವನ್ನು ಹೊಂದಿದೆ ಎಂದು ಜೆಇಎಂ ಕೇಂದ್ರ ಕಚೇರಿ ಮೇಲೆ ನಡೆದ ದಾಳಿಯ ಬಗ್ಗೆ ಮಾಹಿತಿ ನೀಡಿದರು.







