CREDನಲ್ಲಿ 8,550 ಕೋಟಿ ರೂಪಾಯಿ ಹೂಡಿಕೆ ಮಾಡಿದ ಮೆಟಾ; ವಾಟ್ಸಾಪ್ ಮುಖ್ಯಸ್ಥರಾಗಿ ಕುನಾಲ್ ಶಾ ನೇಮಕ

ಕುನಾಲ್ ಶಾ | Photo Credit : ndtv
ಹೊಸದಿಲ್ಲಿ: ಮೆಟಾ ಪ್ಲಾಟ್ಫಾರ್ಮ್ಸ್ ತನ್ನ ಸರಣಿ–H ನಿಧಿ ಸಂಗ್ರಹಣೆಯ ಭಾಗವಾಗಿ ಭಾರತೀಯ ಫಿನ್ಟೆಕ್ ಸ್ಟಾರ್ಟ್ಅಪ್ CREDನಲ್ಲಿ 900 ಮಿಲಿಯನ್ ಡಾಲರ್ (ಸುಮಾರು 8,550 ಕೋಟಿ ರೂಪಾಯಿ) ಹೂಡಿಕೆ ಮಾಡಿದೆ. ಇದೇ ವೇಳೆ, CRED ಸಂಸ್ಥಾಪಕ ಕುನಾಲ್ ಶಾ ಅವರನ್ನು ವಾಟ್ಸಾಪ್ ನ ಹೊಸ ಮುಖ್ಯಸ್ಥರನ್ನಾಗಿ ನೇಮಿಸಿರುವುದಾಗಿ ಕಂಪೆನಿ ಪ್ರಕಟಿಸಿದೆ.
ಒಪ್ಪಂದದ ಪ್ರಕಾರ, ಮೆಟಾ CREDನಲ್ಲಿ ಸುಮಾರು ಶೇ. 20ರಷ್ಟು ಅಲ್ಪಸಂಖ್ಯಾತ ಪಾಲನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಈ ಹೂಡಿಕೆಯೊಂದಿಗೆ ಕಂಪೆನಿಯ ಮೌಲ್ಯಮಾಪನವು ಸುಮಾರು 4.5 ಬಿಲಿಯನ್ ಡಾಲರ್ (43,239 ಕೋಟಿ ರೂಪಾಯಿ) ಆಗಿದೆ. ನಿಧಿ ಸಂಗ್ರಹಣೆಯು ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಷೇರು ಖರೀದಿಗಳನ್ನು ಒಳಗೊಂಡಿದೆ.
ನಾಯಕತ್ವ ಬದಲಾವಣೆಯ ಭಾಗವಾಗಿ, ಕುನಾಲ್ ಶಾ ಅವರು CREDನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಹುದ್ದೆಯಿಂದ ಕೆಳಗಿಳಿಯಲಿದ್ದು, ಮೆಟಾದ ಜಾಗತಿಕ ನಾಯಕತ್ವ ತಂಡವನ್ನು ಸೇರಲಿದ್ದಾರೆ. ಅವರು ಕಳೆದ ಏಳು ವರ್ಷಗಳಿಂದ ವಾಟ್ಸಾಪ್ ಗೆ ನೇತೃತ್ವ ನೀಡುತ್ತಿದ್ದ ವಿಲ್ ಕ್ಯಾಥ್ಕಾರ್ಟ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಕ್ಯಾಥ್ಕಾರ್ಟ್ ಅವರು ಕೃತಕ ಬುದ್ಧಿಮತ್ತೆ (AI) ಉಪಕ್ರಮಗಳ ಮೇಲೆ ಕೇಂದ್ರೀಕರಿಸುವ ಹೊಸ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ವಾಟ್ಸಾಪ್ನ ಮುಂದಿನ ಹಂತದ ಬೆಳವಣಿಗೆಯನ್ನು ಮುನ್ನಡೆಸುವ ಜವಾಬ್ದಾರಿಯನ್ನು ಶಾ ವಹಿಸಿಕೊಳ್ಳಲಿದ್ದಾರೆ. ಜಾಹೀರಾತು ಮತ್ತು ಶುಲ್ಕ ಆಧಾರಿತ ಸೇವೆಗಳ ಮೂಲಕ ಆದಾಯದ ಮೂಲಗಳನ್ನು ವಿಸ್ತರಿಸುವತ್ತ ಅವರು ಗಮನಹರಿಸಲಿದ್ದಾರೆ ಎಂದು ಮೆಟಾ ತಿಳಿಸಿದೆ.
CREDನಲ್ಲಿ ಹೂಡಿಕೆ ಮಾಡಿದ್ದರೂ, ಅದರ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಮೆಟಾ ಪಡೆಯುವುದಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ.
2020ರಿಂದ CREDನಲ್ಲಿ ಕಾರ್ಯತಂತ್ರ ಮತ್ತು ಹಣಕಾಸು ಮೇಲ್ವಿಚಾರಣೆ ನಡೆಸುತ್ತಿದ್ದ ಮಿಟೆನ್ ಸಂಪತ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮಧ್ಯಂತರ ಸಿಇಒ ಆಗಿ ನೇಮಿಸಲಾಗಿದೆ. ಕಂಪೆನಿಯು ಭವಿಷ್ಯದ ಆರಂಭಿಕ ಸಾರ್ವಜನಿಕ ಷೇರು ಬಿಡುಗಡೆ (IPO)ಗೆ ಸಿದ್ಧತೆ ನಡೆಸುತ್ತಿದ್ದು, ದೀರ್ಘಾವಧಿಯ ನಾಯಕತ್ವ ರಚನೆ ಕುರಿತು ಮಂಡಳಿ ಮತ್ತು ನಿರ್ವಹಣಾ ತಂಡ ಕೆಲಸ ಮಾಡುತ್ತಿದೆ ಎಂದು ತಿಳಿಸಿದೆ.
2018ರಲ್ಲಿ ಆರಂಭವಾದ CRED, ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಬಿಲ್ ಪಾವತಿ, ಸಾಲ, ವಿಮೆ ಹಾಗೂ ಇತರೆ ಹಣಕಾಸು ಸೇವೆಗಳನ್ನು ಒದಗಿಸುತ್ತಿದೆ. ಕಂಪೆನಿಯು ಪ್ರಸ್ತುತ 1.7 ಕೋಟಿ ಬಳಕೆದಾರರನ್ನು ಹೊಂದಿದ್ದು, ದೇಶದ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗಳಲ್ಲಿ ಶೇ. 40ಕ್ಕೂ ಹೆಚ್ಚು ವಹಿವಾಟುಗಳು ಅದರ ವೇದಿಕೆಯ ಮೂಲಕ ನಡೆಯುತ್ತವೆ ಎಂದು ಹೇಳಿದೆ.
CRED ಮೂಲಕ ವಿವಿಧ ಹಣಕಾಸು ಸಂಸ್ಥೆಗಳು ನೀಡಿರುವ ಸಾಲಗಳ ಮೊತ್ತವು 24,000 ಕೋಟಿ ರೂಪಾಯಿಗೆ ತಲುಪಿದೆ. ಕಂಪನಿಯು ವರ್ಷಕ್ಕೆ ಸುಮಾರು 3,200 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದು, ಲಾಭದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದೆ.
ಹೊಸ ಬಂಡವಾಳವನ್ನು ವ್ಯವಹಾರ ವಿಸ್ತರಣೆ ಮತ್ತು ಹಣಕಾಸು ಸೇವೆಗಳ ಕ್ಷೇತ್ರದಲ್ಲಿ ತನ್ನ ಚಟುವಟಿಕೆಗಳನ್ನು ಹೆಚ್ಚಿಸಲು ಬಳಸಲಾಗುವುದು ಎಂದು ಕಂಪನಿ ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕುನಾಲ್ ಶಾ,"ಆರಂಭದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ CRED ಸ್ಥಾಪಿಸಲಾಗಿತ್ತು. ಇಂದು ಅದು ಲಕ್ಷಾಂತರ ಸದಸ್ಯರನ್ನು ಹೊಂದಿರುವ ಸಂಸ್ಥೆಯಾಗಿ ಬೆಳೆದಿದ್ದು, ಮುಂದೆಯೂ ಇದೇ ಬೆಳವಣಿಗೆ ಮುಂದುವರಿಯಲಿದೆ ಎಂಬ ವಿಶ್ವಾಸವಿದೆ", ಎಂದು ಹೇಳಿದ್ದಾರೆ.
CRED ತನ್ನ ವ್ಯವಹಾರವನ್ನು ಇನ್ನಷ್ಟು ವಿಸ್ತರಿಸಲು ಉತ್ತಮ ಅವಕಾಶಗಳನ್ನು ಹೊಂದಿದೆ. ಷೇರು ಮಾರುಕಟ್ಟೆಗೆ ಪ್ರವೇಶಿಸುವ ಮುನ್ನ ಸಂಸ್ಥೆಯ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸುವತ್ತ ಗಮನ ಹರಿಸಲಾಗುವುದು ಎಂದು ಮಧ್ಯಂತರ ಸಿಇಒ ಮಿಟೆನ್ ಸಂಪತ್ ತಿಳಿಸಿದ್ದಾರೆ.






