ಕಾಂಗ್ರೆಸ್ ತೊರೆದು ಶಿಂದೆ ನೇತೃತ್ವದ ಶಿವಸೇನೆ ಸೇರ್ಪಡೆಯಾದ ಮಿಲಿಂದ್ ದಿಯೋರಾ
ದಿಯೋರಾರ ಈ ನಡೆಗೆ ಕಾರಣವಾದ ಒತ್ತಡಗಳೇನು?
ಮಿಲಿಂದ್ ದಿಯೋರಾ | Photo: PTI
ಮುಂಬೈ: ತಾನು ಕಾಂಗ್ರೆಸ್ ಪಕ್ಷವನ್ನು ತೊರೆಯಲಿದ್ದೇನೆ ಎಂಬ ವದಂತಿಗಳನ್ನು ಅಲ್ಲಗಳೆದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಿಲಿಂದ್ ದಿಯೋರಾ ರವಿವಾರ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದಾರೆ. ಅವರ ಈ ನಿರ್ಧಾರವು ಈಶಾನ್ಯ ರಾಜ್ಯಗಳಿಂದ ದೇಶಾದ್ಯಂತ ಹಾದು ಹೋಗಲಿರುವ ಕಾಂಗ್ರೆಸ್ ಯಾತ್ರೆಯ ದಿನದಂದೇ ಪ್ರಕಟಗೊಂಡಿದೆ.
ರವಿವಾರ ಇಂಫಾಲದಿಂದ ಪ್ರಾರಂಭಗೊಂಡಿರುವ ಭಾರತ್ ಜೋಡೊ ನ್ಯಾಯ ಯಾತ್ರೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿಯ ನಿರ್ದೇಶನದಂತೆ ಮಿಲಿಂದ್ ದಿಯೋರಾರ ನಿರ್ಗಮನ ಹಾಗೂ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಗೆ ಸೇರ್ಪಡೆಯಾಗುವ ನಾಟಕವು ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಜೈರಾಮ್ ರಮೇಶ್, ಇದೀಗ ಕಾಂಗ್ರೆಸ್ ನ ಮೈತ್ರಿ ಪಕ್ಷವಾಗಿರುವ ಉದ್ಧವ್ ಠಾಕ್ರೆ ಬಣದ ಶಿವಸೇನೆಗೆ ತಾವು ನಾಲ್ಕು ಬಾರಿ ಸ್ಪರ್ಧಿಸಿದ್ದ ಹಾಗೂ 2004ರಿಂದ 2014ರವರೆಗೆ ಪ್ರತಿನಿಧಿಸಿದ್ದ ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರವು ಹೋಗುವುದರ ಕುರಿತು ಮಿಲಿಂದ್ ದಿಯೋರಾ ಕಳವಳಗೊಂಡಿದ್ದರು ಎಂದು ಹೇಳಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ವಿಡಿಯೊವೊಂದರಲ್ಲಿ, ತಮ್ಮ ಬೆಂಬಲಿಗರು ಹಾಗೂ ಕಾರ್ಯಕರ್ತರಿಗೆ ಸಂಯಮದಿಂದಿರುವಂತೆ ಮಿಲಿಂದ್ ದಿಯೋರಾ ಸಲಹೆ ನೀಡಿದ್ದರು ಹಾಗೂ ಸ್ಥಾನ ಹಂಚಿಕೆ ಮಾತುಕತೆ ಅಂತಿಮಗೊಳ್ಳುವವರೆಗೂ ಶಿವಸೇನೆಯು ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದ ಮೇಲೆ ತನ್ನ ಹಕ್ಕು ಪ್ರತಿಪಾದಿಸಬಾರದು ಎಂದು ಸೂಚಿಸಿದ್ದರು.
ಮಿಲಿಂದ್ ದಿಯೋರಾ 2014 ಹಾಗೂ 2019ರ ಚುನಾವಣೆಯಲ್ಲಿ ಶಿವಸೇನೆಯ ಅರವಿಂದ್ ಸಾವಂತ್ ಎದುರು ಪರಾಭವಗೊಂಡಿದ್ದರು. ಐದು ವರ್ಷಗಳ ಹಿಂದೆ ತಮ್ಮ ಕ್ಷೇತ್ರದಲ್ಲಿ ಮರಳಿ ಗೆಲುವು ಸಾಧಿಸಲು ಲೋಕಸಭಾ ಚುನಾವಣಾ ಪ್ರಚಾರ ನಡೆಯುವಾಗಲೇ ಮುಂಬೈ ಕಾಂಗ್ರೆಸ್ ಅಧ್ಯಕ್ಷ ಹುದ್ದೆಯನ್ನು ತರಾತುರಿಯಲ್ಲಿ ತೊರೆದಿದ್ದರು. ಉದ್ಧವ್ ಠಾಕ್ರೆಯೊಂದಿಗೆ ಉಳಿದಿರುವ ಕೆಲವೇ ಸಂಸದರ ಪೈಕಿ ಅರವಿಂದ್ ಸಾವಂತ್ ಕೂಡಾ ಒಬ್ಬರಾಗಿದ್ದು, ಇದೇ ಕಾರಣಕ್ಕೆ ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರವನ್ನು ತಮ್ಮ ಪಕ್ಷಕ್ಕೇ ಮೀಸಲಿಡಬೇಕು ಎಂದು ಮಾಜಿ ಮುಖ್ಯಮಂತ್ರಿಯೂ ಆದ ಉದ್ಧವ್ ಠಾಕ್ರೆ ಸ್ಥಾನ ಹಂಚಿಕೆ ಮಾತುಕತೆ ನಡುವೆ ಒತ್ತಡ ಹೇರಿದ್ದರು ಎಂದು ಹೇಳಲಾಗಿದೆ.
ಈ ವಿಷಯದಲ್ಲಿ ನಾನು ಮಧ್ಯಪ್ರವೇಶಿಸಬೇಕು ಎಂದು ಬಯಸಿದ್ದ ಮಿಲಿಂದ್ ದಿಯೋರಾ, ಈ ಕುರಿತು ರಾಹುಲ್ ಗಾಂಧಿ ಅವರಿಗೂ ಒಂದು ಮಾತು ಹೇಳಿ ಎಂದು ಮನವಿ ಮಾಡಿದ್ದರು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. “ಅವರು ನನ್ನೊಂದಿಗೆ ಶುಕ್ರವಾರ ಮಾತನಾಡಿದ್ದರು. ತಮ್ಮ ಕ್ಷೇತ್ರ ಕಳೆದು ಹೋಗುತ್ತಿದೆ ಎಂಬ ಸಂಗತಿಯನ್ನು ರಾಹುಲ್ ಗಾಂಧಿಗೆ ವಿವರಿಸಿ ಎಂದು ನನಗೆ ಮನವಿ ಮಾಡಿದ್ದರು. ಇದರಿಂದ ನನಗೆ ಕಳವಳವಾಗಿದೆ ಎಂದೂ ಹೇಳಿದ್ದರು. ಅವರು ನನಗೆ ಮಧ್ಯಾಹ್ನ 2.48ರ ವೇಳೆಗೆ ಸಂದೇಶ ಕಳಿಸಿದ್ದರು. ನಾನು ಅವರೊಂದಿಗೆ ಮಧ್ಯಾಹ್ನ 3.40 ಗಂಟೆಗೆ ಮಾತನಾಡಿದ್ದೆ. ರಾಹುಲ್ ಗಾಂಧಿಯನ್ನು ಭೇಟಿ ಮಾಡಿ, ಅವರಿಗೆ ಈ ಕುರಿತು ವಿವರಿಸಿ ಎಂದು ನಾನು ಅವರಿಗೆ ಹೇಳಿದ್ದೆ” ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರವು ಗಮನಾರ್ಹ ಸಂಖ್ಯೆಯ ಮುಸ್ಲಿಂ ಮತದಾರರೊಂದಿಗೆ ಮರಾಠಿ ಮತದಾರರನ್ನೂ ಹೊಂದಿದೆ. ಅಲ್ಲದೆ ಈ ಕ್ಷೇತ್ರವು ಕಾಸ್ಮೊಪಾಲಿಟನ್ ಸಂಸ್ಕೃತಿಯನ್ನು ಹೊಂದಿದೆ. ಇದರೊಂದಿಗೆ ಶಿವಸೇನೆಯು ಅವಿಭಜಿತವಾಗಿದ್ದಾಗ ಈ ಕ್ಷೇತ್ರದ ಮತದಾರರು ಕಳೆದ ಎರಡು ಚುನಾವಣೆಯಲ್ಲಿ ಶಿವಸೇನೆ ಪರ ಮತ ಚಲಾಯಿಸಿದ್ದರು. ಬಹುಶಃ ಈ ಕಾರಣಕ್ಕಾಗಿಯೇ ಮಾಜಿ ಕೇಂದ್ರ ಸಚಿವರಾದ ಮಿಲಿಂದ್ ದಿಯೋರಾ ಬಿಜೆಪಿ ಸೇರ್ಪಡೆಯಾಗುವ ಬದಲು ಮುಖ್ಯಮಂತ್ರಿ ಏಕನಾಥ್ ಸಿಂದೆ ನೇತೃತ್ವದ ಶಿವಸೇನೆ ಸೇರ್ಪಡೆಯಾಗಿರುವ ಸಾಧ್ಯತೆ ಇದೆ. ಹೀಗಿದ್ದೂ, ಮಿಲಿಂದ್ ದಿಯೋರಾ ಅವರಿಗೆ ಈ ಕ್ಷೇತ್ರ ದೊರೆಯುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಮುಂಬೈ ದಕ್ಷಿಣ ಕ್ಷೇತ್ರದ ಮೇಲಿನ ತನ್ನ ಹಕ್ಕನ್ನು ಬಿಜೆಪಿ ಈಗಲೂ ಕೈಬಿಟ್ಟಿಲ್ಲ. ಸ್ಥಾನ ಹಂಚಿಕೆಯ ಮಾತುಕತೆ ಸಂದರ್ಭದಲ್ಲಿ ಬಿಜೆಪಿಯು ಹಾಲಿ ವಿಧಾನಸಭಾಧ್ಯಕ್ಷ ರಾಹುಲ್ ನಾರ್ವೇಕರ್ ಹಾಗೂ ಸಚಿವ ಮಂಗಲ್ ಪ್ರಭಾತ್ ಲೋಧಾ ಅವರ ಹೆಸರುಗಳನ್ನು ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಹರಿಬಿಟ್ಟಿದೆ. ಹಾಗೇನಾದರೂ ಆದರೆ, ಜೂನ್ ಮತ್ತು ಜುಲೈ ತಿಂಗಳಿನಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಯ ಮೂಲಕ ಮಿಲಿಂದ್ ದಿಯೋರಾ ಸಂಸತ್ತನ್ನು ಪ್ರವೇಶಿಸಬೇಕಾಗುತ್ತದೆ.
ತಮ್ಮ ತಂದೆ ಮುರಳಿ ದಿಯೋರಾ ಹಲವಾರು ಬಾರಿ ಪ್ರತಿನಿಧಿಸಿದ್ದ ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದಿಂದ 2004ರಲ್ಲಿ ಸ್ಪರ್ಧಿಸಿದ್ದ ಮಿಲಿಂದ್ ದಿಯೋರಾ, ಲೋಕಸಭೆಯನ್ನು ಪ್ರಥಮ ಬಾರಿಗೆ ಪ್ರವೇಶಿಸಿದ್ದರು. ಆ ಸಮಯದಲ್ಲಿ ಅವರು ಭಾರತದ ಅತ್ಯಂತ ಕಿರಿಯ ಸಂಸದ ಎಂಬ ಹಿರಿಮೆಗೆ ಪಾತ್ರರಾಗಿದ್ದರು ಹಾಗೂ ಜ್ಯೋತಿರಾದಿತ್ಯ ಸಿಂಧ್ಯಾ, ಆರ್.ಪಿ.ಎನ್.ಸಿಂಗ್, ಜಿತಿನ್ ಪ್ರಸಾದ್ ಹಾಗೂ ಸಚಿನ್ ಪೈಲಟ್ ರೊಂದಿಗೆ ರಾಹುಲ್ ಗಾಂಧಿ ತಂಡದಲ್ಲಿ ಗುರುತಿಸಿಕೊಂಡಿದ್ದರು. ಈ ಪೈಕಿ ಸಚಿನ್ ಪೈಲಟ್ ಹೊರತುಪಡಿಸಿ, ಉಳಿದೆಲ್ಲರೂ ಪಕ್ಷಾಂತರ ಮಾಡಿದ್ದಾರೆ.
2004ರಲ್ಲಿ ಶೇ. 50.3 ಮತ ಗಳಿಕೆಯೊಂದಿಗೆ ಮಿಲಿಂದ್ ಪ್ರಥಮ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿದ್ದರು. ನಂತರ 2009ರಲ್ಲಿ ಶೇ. 42.5 ಮತ ಗಳಿಕೆಯೊಂದಿಗೆ ಮತ್ತೆ ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಅಲ್ಲಿಂದಾಚೆಗೆ ಅವರ ಮತ ಗಳಿಕೆಯ ಪ್ರಮಾಣ ಕುಸಿತವಾಗುತ್ತಲೇ ಸಾಗಿದ್ದು, 2014 ಹಾಗೂ 2019ರ ಚುನಾವಣೆಯಲ್ಲಿ ಕ್ರಮವಾಗಿ ಶೇ. 31.6 ಹಾಗೂ ಶೇ. 41ರಷ್ಟು ಮತ ಗಳಿಸಲಷ್ಟೇ ಅವರು ಶಕ್ತರಾಗಿದ್ದರು.
ಮಿಲಿಂದ್ ದಿಯೋರಾ ರಕ್ಷಣೆ, ನಾಗರಿಕ ವಿಮಾನ ಯಾನ, ಅಂದಾಜು, ನಗರಾಭಿವೃದ್ಧಿ ಹಾಗೂ ಮಾಹಿತಿ ತಂತ್ರಜ್ಞಾನ ಸಂಸದೀಯ ಸಮಿತಿಗಳಲ್ಲಿ ವಿವಿಧ ಹುದ್ದೆಗಳನ್ನು ಹೊಂದಿದ್ದರು ಹಾಗೂ ಕೇಂದ್ರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಬಂದರು ಖಾತೆಯ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಮುನ್ನೋಟ ಹೊಂದಿರುವ, ಉದ್ಯಮ ಸ್ನೇಹಿ ಹಾಗೂ ಕಾಸ್ಮೊಪಾಲಿಟನ್ ನಾಯಕ ತಾನು ಎಂಬಂತೆ ಅವರು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡರೂ, 2014ರಲ್ಲಿನ ನರೇಂದ್ರ ಮೋದಿ ಅಲೆಯೆದುರು ಅವರು ತಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ದೇಶದ ಬೃಹತ್ ಉದ್ಯಮಿಗಳ ಪೈಕಿ ಒಬ್ಬರಾದ ಮುಕೇಶ್ ಅಂಬಾನಿಯ ಬೆಂಬಲದ ಹೊರತಾಗಿಯೂ 2019ರ ಚುನಾವಣೆಯಲ್ಲೂ ಅವರು ಪರಾಭವಗೊಂಡರು. ಆ ಸಂದರ್ಭದಲ್ಲಿ ಮುಂಬೈ ಕಾಂಗ್ರೆಸ್ ಘಟಕದ ಮುಖ್ಯಸ್ಥರಾಗಿದ್ದ ಅವರು, ತಮ್ಮ ಕ್ಷೇತ್ರದಲ್ಲಿ ಮರಳಿ ಗೆಲುವು ಸಾಧಿಸಬೇಕು ಎಂಬ ಪ್ರಯತ್ನದತ್ತ ಗಮನ ಹರಿಸಿ, ಚುನಾವಣಾ ಪ್ರಚಾರದ ನಡುವೆಯೇ ತಮ್ಮ ಹುದ್ದೆಯನ್ನು ತರಾತುರಿಯಲ್ಲಿ ತೊರೆದಿದ್ದರು.
ಈ ಸೋಲುಗಳು ಅವರ ರಾಜಕೀಯ ವೃತ್ತಿ ಜೀವನಕ್ಕೆ ಹಿನ್ನಡೆಯನ್ನುಂಟು ಮಾಡಿದವು ಹಾಗೂ ಇದರೊಂದಿಗೆ ಅವರು ಮುಂಬೈ ಕಾಂಗ್ರೆಸ್ ಅನ್ನು ಪುನಶ್ಚೇತನಗೊಳಿಸುವಲ್ಲೂ ವಿಫಲರಾದರು. ಮಿಲಿಂದ್ ದಿಯೋರಾ ಅವರನ್ನು ಇತ್ತೀಚೆಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಜಂಟಿ ಖಜಾಂಚಿಯನ್ನಾಗಿ ನೇಮಕ ಮಾಡಿದರೂ, ರಾಷ್ಟ್ರ ಮಟ್ಟದ ಕಾಂಗ್ರೆಸ್ ನಲ್ಲಿ ತಮಗೊಂದು ದೊಡ್ಡ ಅವಕಾಶವನ್ನು ನಿರ್ಮಿಸಿಕೊಳ್ಳುವಲ್ಲೂ ಅವರು ವಿಫಲರಾಗಿದ್ದರು.
ಉದ್ಯಮ ನಾಯಕರು ಹಾಗೂ ದಿಲ್ಲಿ ರಾಜಕೀಯ ವಲಯಗಳಲ್ಲಿ ಆಳವಾದ ಸಂಪರ್ಕಗಳನ್ನು ಹೊಂದಿರುವ ಮಿಲಿಂದ್ ದಿಯೋರಾ ಸೇರ್ಪಡೆಯಿಂದ ಶಿಂದೆ ನೇತೃತ್ವದ ಶಿವಸೇನೆಗೆ ಅತ್ಯಗತ್ಯವಾಗಿದ್ದ ಆತ್ಮೀಯ ಮುಖವೊಂದು ದೊರೆತಂತಾಗಿದೆ. ಮಿಲಿಂದ್ ದಿಯೋರಾ ಸಚಿವರಾಗಿದ್ದಾಗ ಹಾಗೂ ನಂತರ ಆರ್ಥಿಕ ವಿಚಾರಗಳ ಕುರಿತು ಉದಾರಿ ದನಿಯಾಗಿದ್ದರು.
ಈ ನಡುವೆ, ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮಿಲಿಂದ್ ದಿಯೋರಾ ಅವರಿಗೆ ಮುಂಬೈ ಕಾಂಗ್ರೆಸ್ ಮುಖ್ಯಸ್ಥ ವರ್ಷ ಗಾಯಕ್ವಾಡ್ ಮನವಿ ಮಾಡಿದ್ದರೂ, ಅವರು ತಮ್ಮ ನಿರ್ಧಾರ ಬದಲಿಸುವ ಸಾಧ್ಯತೆ ತೀರಾ ಕಡಿಮೆ. ಮುಂಬೈನ ಕನಿಷ್ಠ 10 ಮಂದಿ ಮಾಜಿ ಕಾರ್ಪೊರೇಟರ್ ಗಳು ಹಾಗೂ ದಕ್ಷಿಣ ಮುಂಬೈನ ನಾಯಕರೊಂದಿಗೆ ಕಾಂಗ್ರೆಸ್ ಪಕ್ಷವನ್ನು ತೊರೆಯುವ ತಮ್ಮ ನಿರ್ಧಾರದಿಂದಾಗಿ, ಅವರೀಗ ಆಡಳಿತಾರೂಢ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ.
ಸೌಜನ್ಯ: indianexpress.com