ಒಡಿಶಾ ಕರಾವಳಿಯಲ್ಲಿ ಕ್ಷಿಪಣಿ ಪರೀಕ್ಷೆ | 10 ಸಾವಿರಕ್ಕೂ ಅಧಿಕ ಜನರ ಸ್ಥಳಾಂತರ

PC : PTI
ಹೊಸದಿಲ್ಲಿ: ಕ್ಷಿಪಣಿ ಪರೀಕ್ಷೆಯ ಹಿನ್ನೆಲೆಯಲ್ಲಿ ಒಡಿಶಾ ಕರಾವಳಿಯ ಸಂಯೋಜಿತ ಪರೀಕ್ಷಾ ವಲಯ (ಐಟಿಆರ್)ಕ್ಕೆ ಸಮೀಪ ಇರುವ 10 ಸಾವಿರಕ್ಕೂ ಅಧಿಕ ಜನರನ್ನು ಬುಧವಾರ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.
ಸುರಕ್ಷಾ ಕ್ರಮದ ಭಾಗವಾಗಿ ಬಾಲಸೂರು ಜಿಲ್ಲಾಡಳಿತದ ಸಹಾಯದಿಂದ ರಕ್ಷಣಾ ಅಧಿಕಾರಿಗಳು ಸಂಯೋಜಿತ ರಕ್ಷಣಾ ವಲಯ (ಐಟಿಆರ್)ದ ಉಡಾವಣಾ ಸಂಕೀರ್ಣ 3ರ 3.5 ಕಿ.ಮೀ. ವ್ಯಾಪ್ತಿಯ ಒಳಗಿರುವ 10 ಗ್ರಾಮಗಳ ಮಕ್ಕಳು ಸೇರಿದಂತೆ 10,581 ಜನರನ್ನು ಜಾನುವಾರುಗಳೊಂದಿಗೆ ಸಮೀಪದಲ್ಲಿರುವ ಶಿಬಿರಗಳಿಗೆ ಸ್ಥಳಾಂತರಿಸಿದ್ದಾರೆ.
ಬರ್ಧಾನ್ಪುರದ 2127, ಜಯದೇವಕಸಬದ 2725, ಶಹಾಜಹಾನ್ನಗರದ 447ಕ್ಕೂ ಅಧಿಕ ಜನರನ್ನು ಬರ್ಧಾನ್ಪುರ ಬಹೋದ್ದೇಶಿತ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಭೀಮಪುರದ 1823, ಚಾಚೀನಾದ 479 ಹಾಗೂ ದೋಮುಹಾನ್ಪಟಣದ 41 ಜನರನ್ನು ಭೀಮ್ಪುರ ಬಹೋದ್ದೇಶಿತ ಶಿಬಿರಕ್ಕೆ ವರ್ಗಾಯಿಸಲಾಗಿದೆ. ಕಂಟಾರ್ದದ 391, ಖಡುಪಾಹಿಯ 803, ಟುಂಡಾರದ 408, ಕುಸುಮುಲಿಯ 1307 ಜನರನ್ನು ಕಲಾಮಾಟಿಯಾ ಬಹೋದ್ದೇಶಿತ ಶಿಬಿರಕ್ಕೆ ವರ್ಗಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಶಿಬಿರಗಳಲ್ಲಿ ಆರಾಮವಾಗಿ ತಂಗಲು ನಾವು ವಿಸ್ತೃತ ವ್ಯವಸ್ಥೆ ಮಾಡಿದ್ದೇವೆ. ಪೊಲೀಸ್ ಅಧಿಕಾರಿಗಳು ಮೂರು ಪ್ರತ್ಯೇಕ ತಂಡ ಅವರಿಗೆ ರಕ್ಷಣೆ ನೀಡಲಿದೆ. ಸ್ಥಳಾಂತರಗೊAಡ ಜನರಿಗೆ ವೈದ್ಯಕೀಯ ಸೌಲಭ್ಯ ನೀಡಲು ಮೂರು ವೈದ್ಯಕೀಯ ತಂಡಗಳನ್ನು ಸಿದ್ಧವಾಗಿ ಇರಿಸಲಾಗಿದೆ. ಇದಲ್ಲದೆ, ಪಶು ವೈದ್ಯರ ತಂಡ ಹಾಗೂ ಅಗ್ನಿ ಶಾಮಕ ದಳದ ಅಧಿಕಾರಿಗಳನ್ನು ಕೂಡ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಷ್ಕೃತ ಮಾರ್ಗಸೂಚಿಯ ಪ್ರಕಾರ ತಾತ್ಕಾಲಿಕವಾಗಿ ಸ್ಥಳಾಂತರಗೊಂಡ ಪ್ರತಿಯೊಬ್ಬರಿಗೆ ತಲಾ 300 ರೂ. ನೀಡಲಾಗುವುದು. ಹೆಚ್ಚುವರಿಯಾಗಿ ಆಹಾರಕ್ಕೆ ತಲಾ 100 ರೂ. ನೀಡಲಾಗುವುದು ಅಲ್ಲದೆ, ತಮ್ಮ ಜಾನುವಾರುಗಳಿಗೆ ಆಹಾರ ಒದಗಿಸಲು ಪ್ರತಿ ಕುಟುಂಬಕ್ಕೆ 100 ರೂ. ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಕರಾವಳಿಯಲ್ಲಿ 24 ಗಂಟೆಗಳ ಕಾಲ ಗಸ್ತು ನಡೆಸಲು ದೋಣಿಗಳಲ್ಲಿ ಪೊಲೀಸರನ್ನು ನಿಯೋಜಿಸಿರುವುದರಿಂದ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳದಂತೆ ಕೂಡ ಬಾಲಸೋರೆ ಹಾಗೂ ಭದ್ರಾಕ್ ಜಿಲ್ಲೆಗಳ ಮೀನುಗಾರರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







