ವಿಶ್ವಕಪ್ ಟ್ರೋಫಿ ಮೇಲೆ ಕಾಲಿರಿಸಿದ ಮಿಚೆಲ್ ಮಾರ್ಷ್ ವಿರುದ್ಧ ಉತ್ತರ ಪ್ರದೇಶದಲ್ಲಿ ದೂರು ದಾಖಲು

Photo: X/@mufaddal_vohra
ಹೊಸದಿಲ್ಲಿ: ಗುಜರಾತ್ನ ಅಹ್ಮದಾಬಾದ್ನಲ್ಲಿ ನಡೆದ ವಿಶ್ವಕಪ್ ಫೈನಲ್ನಲ್ಲಿ ಭಾರತವನ್ನು ಮಣಿಸಿ ಐಸಿಸಿ ಪುರುಷರ ವಿಶ್ವಕಪ್ 2023 ಅನ್ನು ತನ್ನದಾಗಿಸಿಕೊಂಡ ಆಸ್ಟ್ರೇಲಿಯಾ ತಂಡದ ಆಟಗಾಲ ಮಿಚೆಲ್ ಮಾರ್ಷ್ ಅವರು ಪಂದ್ಯದ ನಂತರ ವಿಶ್ವಕಪ್ ಟ್ರೋಫಿ ಮೇಲೆ ಕಾಲನ್ನಿರಿಸಿದ ಫೋಟೋ ವಿವಾದಕ್ಕೀಡಾಗಿರುವ ಬೆನ್ನಲ್ಲೇ ಆರ್ಟಿಐ ಕಾರ್ಯಕರ್ತ ಪಂಡಿತ್ ಕೇಶವ್ ಎಂಬವರು ದಾಖಲಿಸಿದ ದೂರಿನ ಆಧಾರದಲ್ಲಿ ಮಾರ್ಷ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು livemint.com ವರದಿ ಮಾಡಿದೆ. ಮಾರ್ಷ್ ತಮ್ಮ ಕೃತ್ಯದ ಮೂಲಕ ಭಾರತದ ಕ್ರಿಕೆಟ್ ಅಭಿಮಾನಿಗಳ ಭಾವನೆಗಳಿಗೆ ನೋವುಂಟು ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಅಲಿಗಡದಲ್ಲಿ ದೂರು ದಾಖಲಾಗಿದೆ.
ಪಂಡಿತ್ ಕೇಶವ್ ಅವರು ತಮ್ಮ ದೂರಿನ ಒಂದು ಪ್ರತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಕಳುಹಿಸಿದ್ದು ಮುಂದೆ ಮಾರ್ಷ್ ಅವರಿಗೆ ಭಾರತದಲ್ಲಿ ಕ್ರಿಕೆಟ್ ಆಡಲು ಅವಕಾಶ ನೀಡಬಾರದೆಂದು ಕೋರಿದ್ದಾರೆ.
ಮಾರ್ಷ್ ಅವರ ಈ ಫೋಟೋ ಸಾಮಾಜಿಕ ಜಾಲತಾಣಿಗರ ಆಕ್ರೋಶಕ್ಕೂ ಗುರಿಯಾಗಿದ್ದು ತಮ್ಮ ನಡೆಯ ಮೂಲಕ ಅವರು ಟ್ರೋಫಿ ಹಾಗೂ ಕ್ರಿಕೆಟ್ ಕ್ರೀಡೆಗೆ ಅಗೌರವ ತೋರಿದ್ದಾರೆಂದು ಹಲವರು ಹೇಳಿದ್ದಾರೆ.
ಮಾರ್ಷ್ ಅವರ ನಡೆ ತಮಗೆ ಅಸಮಾಧಾನ ತಂದಿದೆ ಎಂದು ಭಾರತದ ಬೌಲರ್ ಮುಹಮ್ಮದ್ ಶಮಿ ಕೂಡ ಹೇಳಿದ್ದಾರೆ.







