ಪ್ರಧಾನಿ ಮೋದಿಯಿಂದ ಮಿಝೋರಾಂನ ಪ್ರಥಮ ರೈಲು ಮಾರ್ಗ ಉದ್ಘಾಟನೆ

Photo credit: PTI
ಐಜ್ವಾಲ್: ಪ್ರಧಾನಿ ನರೇಂದ್ರ ಮೋದಿ ಇಂದು (ಶನಿವಾರ) ಮಿಜೋರಾಂನ ಪ್ರಪ್ರಥಮ ರೈಲು ಮಾರ್ಗವನ್ನು ಉದ್ಘಾಟಿಸಿದರು. ಇದರೊಂದಿಗೆ, ಐಜ್ವಾಲ್-ದಿಲ್ಲಿ, ಐಜ್ವಾಲ್-ಗುವಾಹಟಿ, ಐಜ್ವಾಲ್-ಕೋಲ್ಕತ್ತಾ ಎಕ್ಸ್ ಪ್ರೆಸ್ ರೈಲುಗಳಿಗೆ ಅವರು ಹಸಿರು ನಿಶಾನೆ ತೋರಿಸಿದರು.
ಮಿಜೋರಾಂ ರಾಜಧಾನಿ ಐಜ್ವಾಲ್ ಗೆ ಸಂಪರ್ಕಿಸುವ ರೈಲು ಮಾರ್ಗವು ಕಣಿವೆಗಳ ನಡುವೆ ಅತ್ಯಧಿಕ ಸೇತುವೆ ಹಾಗೂ ಸುರಂಗಗಳೊಂದಿಗೆ ಸಿದ್ಧಗೊಂಡಿದೆ. ಐಜ್ವಾಲ್ ಕಡಿದಾದ ಬೆಟ್ಟಗಳ ಮೇಲೆ ಇರುವುದಿಂದ, ರೈಲು ಸಂಪರ್ಕ ಕಾಮಗಾರಿ ನಿಧಾನ ಗತಿಯಲ್ಲಿ ನಡೆದಿದ್ದು, 11 ವರ್ಷಗಳ ನಂತರ ಪೂರ್ಣಗೊಂಡಿದೆ.
ಇದು ಒಟ್ಟು 51.38 ಕಿಮೀ ಉದ್ದದ ಮಾರ್ಗವಾಗಿದ್ದು, ಇದರಲ್ಲಿ 45 ಸುರಂಗ ಮಾರ್ಗಗಳಿವೆ. ಅಲ್ಲದೆ, 55 ದೊಡ್ಡ ಸೇತುವೆಗಳು ಹಾಗೂ 87 ಸಣ್ಣ ಸೇತುವೆಗಳೂ ಇವೆ. 1.86 ಕಿಮೀ ಉದ್ದದ ಸುರಂಗವು ಅತ್ಯಂತ ದೊಡ್ಡ ಸುರಂಗ ಮಾರ್ಗವಾಗಿದ್ದರೆ, 114 ಮೀಟರ್ ಎತ್ತರದ ಸೇತುವೆಯು ದೊಡ್ಡ ಸೇತುವೆಯಾಗಿದೆ.
ಈಶಾನ್ಯ ಭಾರತದ ರಾಜ್ಯಗಳ ರಾಜಧಾನಿಗಳಿಗೆ ರೈಲು ಸಂಪರ್ಕ ಇರಲಿಲ್ಲ. ಹೀಗಾಗಿ, ಅರುಣಾಚಲ ಪ್ರದೇಶ ಹೊರತುಪಡಿಸಿ, ಉಳಿದ ಏಳು ರಾಜ್ಯಗಳ ರಾಜಧಾನಿಗಳಿಗೆ ರೈಲು ಸಂಪರ್ಕ ಕಲ್ಪಿಸುವ ಕಾಮಗಾರಿಗೆ 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.







