VB-G RAM-G ಕಾಯ್ದೆ ವಿರುದ್ಧ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ ಎಂ.ಕೆ.ಸ್ಟಾಲಿನ್

Photo | NDTV
ಚೆನ್ನೈ: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಜಾರಿಗೆ ತಂದಿರುವ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಾದ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಹಿಂಪಡೆಯಬೇಕು ಹಾಗೂ ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಜಾರಿಗೆ ತಂದಿದ್ದ ಮನರೇಗಾ ಯೋಜನೆಯನ್ನು ಮರುಜಾರಿಗೊಳಿಸಬೇಕು ಎಂದು ಆಗ್ರಹಿಸಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಶುಕ್ರವಾರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದರು.
ನಿರ್ಣಯವನ್ನು ಸದನದಲ್ಲಿ ಓದಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಈ ಯೋಜನೆಯ ಹಣಕಾಸು ಸ್ವರೂಪವನ್ನು ಮರಳಿ ವಾಪಸ್ ತರಬೇಕು ಎಂದು ಆಗ್ರಹಿಸಿದರು. ಮುಖ್ಯವಾಗಿ ಈ ಯೋಜನೆಯ ಸ್ವರೂಪವು ಹೂಡಿಕೆಯ ರಚನೆಯಡಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದ್ದು, ಬಹುತೇಕ ರಾಜ್ಯಗಳು ಶೇ. 40ರಷ್ಟು ವೇತನವನ್ನು ಪಾವತಿಸಬೇಕಾಗುತ್ತದೆ ಎಂದು ಗಮನ ಸೆಳೆದರು.
ಈ ಬದಲಾವಣೆಯಿಂದಾಗಿ ರಾಜ್ಯಗಳ ಹಣಕಾಸು ಸಂಪನ್ಮೂಲಗಳು ಅಂದಾಜು 56 ಕೋಟಿ ರೂ. ಅನ್ನು ಭರಿಸಬೇಕಾಗುತ್ತದೆ ಎಂದು ವಿಪಕ್ಷಗಳ ಆಡಳಿತವಿರುವ ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿವೆ.
ಇಂದು ತಮಿಳುನಾಡಿನಲ್ಲಿ ಬಿಜೆಪಿಯ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹೊತ್ತಿನಲ್ಲೇ ತಮಿಳುನಾಡು ವಿಧಾನಸಭೆಯಲ್ಲಿ ಈ ನಿರ್ಣಯ ಮಂಡನೆಯಾಗಿರುವುದು ಗಮನಾರ್ಹವಾಗಿದೆ. ಬಿಜೆಪಿಯು ಡಿಎಂಕೆಯ ಬದ್ಧ ವೈರಿ ಎಐಎಡಿಎಂಕೆಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಎಪ್ರಿಲ್ ನಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ.
ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ವಿರೋಧಿಸಿ ನಿರ್ಣಯ ಅಂಗೀಕರಿಸಿರುವ ಮೂರನೆಯ ವಿಪಕ್ಷಗಳ ಆಡಳಿತವಿರುವ ರಾಜ್ಯವಾಗಿ ತಮಿಳುನಾಡು ಹೊರ ಹೊಮ್ಮಿದೆ. ಇದಕ್ಕೂ ಮುನ್ನ, ಡಿಸೆಂಬರ್ 30ರಂದು ಪಂಜಾಬ್ ಸರಕಾರ, ಜನವರಿ 2ರಂದು ತೆಲಂಗಾಣ ಸರಕಾರ ಈ ಕಾಯ್ದೆಯ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ್ದವು. ಈ ವಾರ ಕರ್ನಾಟಕ ಸರಕಾರ ಕೂಡಾ ಇದೇ ಬಗೆಯ ನಿರ್ಣಯ ಅಂಗೀಕರಿಸಲಿದೆ ಎಂದು ನಿರೀಕ್ಷಿಸಲಾಗಿದೆ.







