ವಿಜಯ್ ಪರ ಮತ ಚಲಾಯಿಸಲು ನಮ್ಮ ಶಾಸಕರಿಗೆ ಹಣದ ಆಮಿಷವೊಡ್ಡಲಾಗಿದೆ: ಪಳನಿಸ್ವಾಮಿ ಗಂಭೀರ ಆರೋಪ

ಎಡಪ್ಪಾಡಿ ಕೆ. ಪಳನಿಸ್ವಾಮಿ (Photo: PTI)
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ವಿಜಯ್ ರ ವಿಶ್ವಾಸ ಮತಯಾಚನೆಯ ವೇಳೆ ಕಲಾಪದಲ್ಲಿ ನಾಟಕೀಯ ಬೆಳವಣಿಗೆ ನಡೆದಿದ್ದು, ಎಐಎಡಿಎಂಕೆಯ ಒಂದು ಬಣ ಬಹಿರಂಗವಾಗಿ ಅವರಿಗೆ ಬೆಂಬಲ ಘೋಷಿಸಿತು. ಇದಕ್ಕೂ ಮುನ್ನ, ಟಿವಿಕೆ ಮುಖ್ಯಸ್ಥ ವಿಜಯ್ ಪರವಾಗಿ ಮತ ಚಲಾಯಿಸಲು ನಮ್ಮ ಶಾಸಕರಿಗೆ ಹಣದ ಆಮಿಷವೊಡ್ಡಲಾಗಿದೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಗಂಭೀರ ಆರೋಪ ಮಾಡಿದರು. ನಮ್ಮ ಪಕ್ಷದ 47 ಶಾಸಕರೂ ಟಿವಿಕೆಗೆ ಬೆಂಬಲಿಸುವುದನ್ನು ವಿರೋಧಿಸುತ್ತಾರೆ ಎಂದು ಘೋಷಿಸಿದರು. ಇದರ ಬೆನ್ನಿಗೇ, ಭಿನ್ನಮತೀಯರ ಬಣದ ನೇತೃತ್ವ ವಹಿಸಿದ್ದಾರೆ ಎಂದು ಹೇಳಲಾಗಿರುವ ವೇಲುಮಣಿ ಬಹಿರಂಗವಾಗಿಯೇ ವಿಜಯ್ ಗೆ ಬೆಂಬಲ ಘೋಷಿಸಿದರು.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಎರಡು ದಿನಗಳ ಬಳಿಕ, ಇಂದು ಮುಖ್ಯಮಂತ್ರಿ ವಿಜಯ್ ವಿಧಾನಸಭೆಯಲ್ಲಿ ವಿಶ್ವಾಂಸ ಮತ ಯಾಚಿಸಿದರು. ವಿಶ್ವಾಸ ಮತ ಯಾಚನೆಗೂ ಮುನ್ನ ಟಿವಿಕೆ ಬಳಿ ಎಐಎಡಿಎಂಕೆ ಬೆಂಬಲ ಹೊರತುಪಡಿಸಿ 119 ಶಾಸಕರ ಬೆಂಬಲವಿತ್ತು. ಆದರೆ, ಎಐಎಡಿಎಂಕೆಯ ಒಂದು ಬಣ ವಿಜಯ್ ಸರಕಾರಕ್ಕೆ ಬೆಂಬಲ ಘೋಷಿಸಿದ ಹಿನ್ನೆಲೆಯಲ್ಲಿ, ವಿಜಯ್ ಅವರ ಸರಕಾರ 144 ಶಾಸಕರ ಬೆಂಬಲದೊಂದಿಗೆ ವಿಶ್ವಾಸ ಮತ ಯಾಚನೆಯಲ್ಲಿ ಗೆಲುವು ಸಾಧಿಸಿತು.
ಆದರೆ, ವಿಶ್ವಾಸ ಮತ ಯಾಚನೆಯ ವೇಳೆ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಎಡಪ್ಪಾಡಿ ಕೆ. ಪಳನಿಸ್ವಾಮಿ, ಟಿವಿಕೆ ಮುಖ್ಯಸ್ಥ ವಿಜಯ್ ಪರ ಬೆಂಬಲ ಸೂಚಿಸಲು ನಮ್ಮ ಶಾಸಕರಿಗೆ ಹಣದ ಆಮಿಷವೊಡ್ಡಲಾಗಿದೆ, ಕುದುರೆ ವ್ಯಾಪಾರಕ್ಕೆ ಪ್ರಯತ್ನಿಸಲಾಗಿದೆ ಎಂದು ಆರೋಪಿಸಿದ್ದರಿಂದ, ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು.
“ಎಐಎಡಿಎಂಕೆ ಶಾಸಕರನ್ನು ಸೆಳೆಯಲು ಕುದುರೆ ವ್ಯಾಪಾರದ ಪ್ರಯತ್ನಗಳು ನಡೆಯುತ್ತಿವೆ. ಕೆಲವು ಶಾಸಕರು ಸಚಿವ ಸ್ಥಾನ ಪಡೆಯಬಹುದು ಹಾಗೂ ಸರಕಾರದಲ್ಲಿ ಭಾಗಿಯಾಗಬಹುದು ಎಂಬ ಮಾಹಿತಿ ನನಗೆ ದೊರೆತಿದೆ. ಶುದ್ಧ ಮತ್ತು ಪಾರದರ್ಶಕ ಸರಕಾರ ನಡೆಸಲು ಬಯಸಿದ್ದೇನೆ ಎಂದು ನೀವು ಹೇಳಿದಿರಿ. ನಾವೂ ಕೂಡಾ ಅದನ್ನೇ ಬಯಸುತ್ತೇವೆ” ಎಂದು ಅವರು ಮಾರ್ಮಿಕವಾಗಿ ಹೇಳಿದರು.
“ನಾವು ವಿಶ್ವಾಸ ಮತ ನಿರ್ಣಯವನ್ನು ವಿರೋಧಿಸುತ್ತೇವೆ. ಎಲ್ಲ ಎಐಎಡಿಎಂಕೆ ಶಾಸಕರು ವಿಶ್ವಾಸ ಮತ ನಿರ್ಣಯದ ವಿರುದ್ಧ ಮತ ಚಲಾಯಿಸಲಿದ್ದಾರೆ” ಎಂದು ಅವರು ಘೋಷಿಸಿದರು. “ಎಲ್ಲ ಪಕ್ಷಗಳಿಗೂ ವಿಭಿನ್ನ ಅಭಿಪ್ರಾಯಗಳಿವೆ. ನಾವು ಗೆಲುವು ಸಾಧಿಸಲು ಎಐಎಡಿಎಂಕೆ ಮೈತ್ರಿಕೂಟಕ್ಕೆ ಮತ ಪಡೆದಿದ್ದೇವೆ. 47 ಶಾಸಕರು ಎರಡು ಎಲೆಯ ಚಿಹ್ನೆಯ ಮೇಲೆ ಗೆಲುವು ಸಾಧಿಸಿದ್ದಾರೆ. ಸುಮಾರು ಶೇ. 66ರಷ್ಟು ಜನರು ಟಿವಿಕೆಗೆ ಮತ ಚಲಾಯಿಸಿಲ್ಲ” ಎಂದೂ ಅವರು ಹೇಳಿದರು.
ಆದರೆ, ಎಡಪ್ಪಾಡಿ ಕೆ. ಪಳನಿಸ್ವಾಮಿಯ ಬಳಿಕ ಎಐಎಡಿಎಂಕೆ ಶಾಸಕ ವೇಲುಮಣಿಗೆ ಮಾತನಾಡಲು ಸ್ಪೀಕರ್ ಅವಕಾಶ ನೀಡಿದಾಗ ಪರಿಸ್ಥಿತಿ ಅನಿರೀಕ್ಷಿತ ತಿರುವು ಪಡೆಯಿತು. ಈ ನಡೆಯನ್ನು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿಯೂ ಆದ ಎಡಪ್ಪಾಡಿ ಕೆ. ಪಳನಿಸ್ವಾಮಿ ಬಲವಾಗಿ ವಿರೋಧಿಸಿದರು. ಒಂದೇ ಪಕ್ಷದ ಇಬ್ಬರು ಪ್ರತ್ಯೇಕ ನಾಯಕರು ಏಕಕಾಲದಲ್ಲಿ ಮಾತನಾಡುವಂತಿಲ್ಲ ಎಂದು ಪಳನಿಸ್ವಾಮಿ ಬಣದ ಶಾಸಕರು ವಾದಿಸಿದರು.
ಆಗ, “ವೇಲುಮಣಿ ನಿನ್ನೆ ಕೂಡಾ ಮಾತನಾಡಿದ್ದರು. ಇಂದೂ ಕೂಡಾ ಮಾತನಾಡಲು ಬಯಸಿದ್ದಾರೆ” ಎಂದು ಸ್ಪೀಕರ್ ಉತ್ತರಿಸಿದರು. ಚರ್ಚೆಯ ವೇಳೆ ಯಾರು ಮಾತನಾಡಬೇಕು ಎಂದು ನಾನು ನಿರ್ಧರಿಸುವುದು ಪೂರ್ವಗ್ರಹವಾಗುತ್ತದೆ ಎಂದೂ ಅವರು ಹೇಳಿದರು.
ಪಳನಿಸ್ವಾಮಿಯ ಪಕ್ಷದ ನಿಲುವಿಗೆ ಸಂಪೂರ್ಣ ವ್ಯತಿರಿಕ್ತವಾಗಿ ಮಾತನಾಡಿದ ವೇಲುಮಣಿ, ವಿಜಯ್ ಗೆ ಬಹಿರಂಗವಾಗಿ ಬೆಂಬಲ ಘೋಷಿಸಿದರು. “ಜನರ ಬಯಕೆಯನ್ನು ಗೌರವಿಸಿ, ಮುಖ್ಯಮಂತ್ರಿ ಮಂಡಿಸಿರುವ ವಿಶ್ವಾಸ ಮತ ನಿರ್ಣಯಕ್ಕೆ ಎಐಎಡಿಎಂಕೆ ಬೆಂಬಲಿಸಲಿದೆ” ಎಂದು ಅವರು ಹೇಳಿದರು.
ಬಳಿಕ, ಟಿವಿಕೆ ಸರಕಾರಕ್ಕೆ ಬೆಂಬಲ ಘೋಷಿಸಿದ ವೇಲುಮಣಿಗೆ ಮುಖ್ಯಮಂತ್ರಿ ವಿಜಯ್ ಕೃತಜ್ಞತೆ ಸಲ್ಲಿಸಿದರು.






