ಅಸ್ಸಾಂ | ಕಳ್ಳತನದ ಶಂಕೆಯಲ್ಲಿ ಇಬ್ಬರು ಬಾಲಕರ ಮೇಲೆ ಗುಂಪಿನಿಂದ ಹಲ್ಲೆ: ಗಾಯಗಳಿಗೆ ಉಪ್ಪು ಹಾಕಿ ಚಿತ್ರಹಿಂಸೆ

ಗುವಾಹಟಿ: ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ಕಳ್ಳತನದ ಶಂಕೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕರ ಮೇಲೆ ಗುಂಪೊಂದು ಹಲ್ಲೆ ನಡೆಸಿ ಅಮಾನವೀಯವಾಗಿ ಚಿತ್ರಹಿಂಸೆ ನೀಡಿರುವ ಬಗ್ಗೆ ವರದಿಯಾಗಿದೆ.
ಈ ಕುರಿತ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲ್ಲೆಗೊಳಗಾದವರನ್ನು ಸಯಾನ್ ಸೈಕಿಯಾ (15) ಮತ್ತು ಕಾಂತು ಸಹಾನಿ (17) ಎಂದು ಗುರುತಿಸಲಾಗಿದೆ.
ಸರುಪಥರ್ನ ಗೆಲಾಬಿಲ್ ಪ್ರದೇಶದಲ್ಲಿ ಘಟನೆ ನಡೆದಿದೆ. ಇಬ್ಬರು ಯುವಕರನ್ನು ಕ್ರೂರವಾಗಿ ಥಳಿಸಿ, ಗಾಯಗಳಿಗೆ ಉಪ್ಪು ಮತ್ತು ಮೆಣಸಿನ ನೀರು ಹಾಕಿ ಅಮಾನವೀಯವಾಗಿ ಚಿತ್ರಹಿಂಸೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಗಾಯಾಳು ಬಾಲಕರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಗಳಲ್ಲಿ ಓರ್ವ ಸ್ಥಳೀಯ ಬಿಜೆಪಿ ನಾಯಕ ಎಂದು ಹೇಳಲಾಗಿದ್ದು, ಮತ್ತೋರ್ವ ಅಸ್ಸಾಂ ವಿದ್ಯಾರ್ಥಿ ಒಕ್ಕೂಟದ (ಎಎಎಸ್‌ಯು) ಜೊತೆ ಸಂಬಂಧ ಹೊಂದಿದ್ದಾನೆ ಎಂದು ಹೇಳಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಘಟನೆಯನ್ನು ಖಂಡಿಸಿದ್ದಾರೆ. ದಾಳಿಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ನಾವು ಖಂಡಿತವಾಗಿಯೂ ಸಂಪೂರ್ಣ ತನಿಖೆ ನಡೆಸುತ್ತೇವೆ ಮತ್ತು ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.







