ಭಯದಿಂದಲೇ ಮೋದಿ ಜಾತಿಗಣತಿಗೆ ಒಪ್ಪಿಕೊಂಡಿದ್ದಾರೆ: ರಾಹುಲ್ ಗಾಂಧಿ

Photo | PTI
ಬಿಹಾರ: ದೇಶದಾದ್ಯಂತ ಜಾತಿಗಣತಿ ನಡೆಯಬೇಕೆಂದು ಅವಕಾಶ ವಂಚಿತ ಸಮುದಾಯಗಳ ಬಗ್ಗೆ ವಿರೋಧ ಪಕ್ಷಗಳು ಧ್ವನಿಯೆತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಜಾತಿಗಣತಿ ನಡೆಸಲು ಒಪ್ಪಿಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಬಿಹಾರದ ದರ್ಭಾಂಗಾ ಜಿಲ್ಲೆಯ ಅಂಬೇಡ್ಕರ್ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನಿಮಗೆಲ್ಲರಿಗೂ ತಿಳಿದಿರುವಂತೆ ನನ್ನ ಕಾರನ್ನು ಮಿಥಿಲಾ ವಿಶ್ವವಿದ್ಯಾಲಯದ ಗೇಟ್ನಲ್ಲಿ ಪೊಲೀಸರು ತಡೆಯಲು ಪ್ರಯತ್ನಿಸಿದ್ದರು. ಆದರೆ, ನಾನು ಸುಮ್ಮನಾಗಲಿಲ್ಲ. ನಾನು ಕಾರಿನಿಂದ ಕೆಳಗಿಳಿದು ಕಾಲ್ನಡಿಗೆಯಲ್ಲಿ ತೆರಳಿ ‘ಶಿಕ್ಷಾ ನ್ಯಾಯ ಸಂವಾದ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ’ ಎಂದು ಹೇಳಿದರು.
ಬಿಹಾರ ಸರಕಾರ ನನ್ನನ್ನು ತಡೆಯಲು ಏಕೆ ಸಾಧ್ಯವಾಗಲಿಲ್ಲ ಎಂದು ನಿಮಗೆ ಅರ್ಥವಾಗಿದೆಯೇ? ನೀವು ಕೊಟ್ಟ ಅಪಾರ ಶಕ್ತಿಯಿಂದಾಗಿ ನಾನು ಮುನ್ನಡೆಯುತ್ತಿದ್ದೇನೆ. ನರೇಂದ್ರ ಮೋದಿ ತಲೆಬಾಗಬೇಕಾಗಿರುವ ಶಕ್ತಿಯೂ ನೀವಾಗಿದ್ದೀರಿ ಎಂದು ಹೇಳಿದರು.
ʼನೀವು ಸಂವಿಧಾನವನ್ನು ಹಣೆಗೆ ಒತ್ತಿಕೊಳ್ಳಬೇಕು ಮತ್ತು ದೇಶದಾದ್ಯಂತ ಜಾತಿಗಣತಿ ನಡೆಸಬೇಕು ಎಂದು ನಾವು ಮೋದಿ ಅವರಿಗೆ ಹೇಳಿದೆವು, ಅವರು ಹಾಗೆಯೇ ಮಾಡಿದರು. ಒಂದು ವೇಳೆ ಅವರು ಆ ರೀತಿ ಮಾಡದಿದ್ದರೆ ದೇಶದ ಯುವ ಜನತೆ ಆಕ್ರೋಶ ವ್ಯಕ್ತಪಡಿಸಬಹುದೆಂದು ಭಯದಿಂದಲೇ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿದ್ದಾರೆ. ಬಿಜೆಪಿ ಸರಕಾರ ಅಂಬಾನಿ, ಅದಾನಿ ಸೇರಿದಂತೆ ಕಾರ್ಪೊರೇಟ್ ಸಮುದಾಯದ ಹಿತಾಸಕ್ತಿಗಳನ್ನು ಪೂರೈಸುತ್ತಿದೆ ಎನ್ನುವುದು ಸತ್ಯ. ಬದಲಾಗಿ ದಲಿತರು, ಒಬಿಸಿಗಳು ಮತ್ತು ಬುಡಕಟ್ಟು ಜನಾಂಗದವರು ಅಥವಾ ಮಧ್ಯಮ ವರ್ಗದವರಿಗೆ ಅನುಕೂಲ ಮಾಡುತ್ತದೆ ಎಂಬುದು ಸುಳ್ಳು ಎಂದು ಹೇಳಿದರು.







