ರೋಡ್ ಶೋ ಮಧ್ಯೆ ನಾಲ್ಕನೇ ಬಾರಿ ಆಂಬ್ಯುಲೆನ್ಸ್ ಗೆ ದಾರಿ ಬಿಟ್ಟು ಕೊಟ್ಟ ಪ್ರಧಾನಿ ಮೋದಿ

Photo : ANI video grab
ವಾರಣಾಸಿ: ಎರಡು ದಿನಗಳ ಭೇಟಿಗಾಗಿ ವಾರಣಾಸಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ರೋಡ್ ಶೋ ನಲ್ಲಿ ಬೆಂಗಾವಲು ಪಡೆಯನ್ನು ನಿಲ್ಲಿಸಿ ಆಂಬ್ಯುಲೆನ್ಸ್ ಸಾಗಲು ದಾರಿಮಾಡಿಕೊಟ್ಟಿರುವ ಘಟನೆ ರವಿವಾರ ವರದಿಯಾಗಿದೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆಂಬ್ಯುಲೆನ್ಸ್ ಸಾಗಲು ಅನುಕೂಲವಾಗುವಂತೆ ಪ್ರಧಾನಿಯವರ ಬೆಂಗಾವಲು ಪಡೆ ತನ್ನ ವೇಗವನ್ನು ಕಡಿಮೆ ಮಾಡಿದೆ. ತುರ್ತು ವಾಹನ ಸುಗಮವಾಗಿ ಸಾಗಿದ ನಂತರ, ಬೆಂಗಾವಲು ಪಡೆ ಸಾಗಿರುವುದು ದೃಶ್ಯಗಳಲ್ಲಿ ವರದಿಯಾಗಿದೆ.
ತನ್ನ ಬೆಂಗಾವಲು ಪಡೆಯನ್ನು ಹಿಂದಿಕ್ಕಿ ಆಂಬ್ಯುಲೆನ್ಸ್ ಸಾಗಲು ಪ್ರಧಾನಿ ದಾರಿ ಮಾಡಿಕೊಟ್ಟಿರುವುದು ಇದೇ ಮೊದಲಲ್ಲ. ವಾರಣಾಸಿ ಘಟನೆ ಸೇರಿದಂತೆ 4 ಬಾರಿ ಅವರು ಆಂಬ್ಯುಲೆನ್ಸ್ ಸಾಗಲು ದಾರಿಮಾಡಿಕೊಟ್ಟಿದ್ದಾರೆ.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ, ಗುಜರಾತ್ ನಲ್ಲಿ ರೋಡ್ ಶೋ ಮಧ್ಯೆ ಆಂಬ್ಯುಲೆನ್ಸ್ಗೆ ದಾರಿ ಮಾಡಿಕೊಡಲು ಪ್ರಧಾನಿಯವರ ಬೆಂಗಾವಲು ಪಡೆ ನಿಲ್ಲಿಸಿತ್ತು. ಅದೇ ವರ್ಷ ಅಹಮದಾಬಾದ್ನಿಂದ ಗಾಂಧಿನಗರಕ್ಕೆ ತೆರಳುತ್ತಿದ್ದಾಗ, ಪ್ರಧಾನಿ ಬೆಂಗಾವಲು ಪಡೆ ಆಂಬ್ಯುಲೆನ್ಸ್ಗೆ ದಾರಿ ಮಾಡಿಕೊಟ್ಟಿತ್ತು. ನವೆಂಬರ್ 2022 ರಲ್ಲಿ, ಹಿಮಾಚಲ ಪ್ರದೇಶದ ಕಾಂಗ್ರಾದಲ್ಲಿ ರ್ಯಾಲಿ ಯಿಂದ ಹಿಂದಿರುಗುವಾಗ ಆಂಬ್ಯುಲೆನ್ಸ್ಗೆ ದಾರಿ ಮಾಡಿಕೊಡಲು ಪ್ರಧಾನಿ ಮೋದಿ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿದ್ದರು.







