ಮನಮೋಹನ್ ಸಿಂಗ್ ವಿರುದ್ಧ ಅಪಪ್ರಚಾರ ನಡೆಸಿದ್ದ ಮೋದಿ ಸರಕಾರ : ಸೋನಿಯಾ ಗಾಂಧಿ ವಾಗ್ದಾಳಿ

ಸೋನಿಯಾಗಾಂಧಿ | Photo Credit : PTI
ಹೊಸದಿಲ್ಲಿ,ಆ.11: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣದಲ್ಲಿ ಮಾಜಿ ಪ್ರಧಾನಿ ಮನಮೋಹನ್ಸಿಂಗ್ ಅವರಿಗೆ ಸುಪ್ರೀಂಕೋರ್ಟ್ ಕ್ಲೀನ್ಚಿಟ್ ನೀಡಿದ ಕೆಲವು ದಿನಗಳ ಬಳಿಕ , ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ದೇಶಕ್ಕೆ ಅವರ ಕೊಡುಗೆಯನ್ನು ಕೊಂಡಾಡಿದ್ದಾರೆ. ಮನಮೋಹನ್ಸಿಂಗ್ ವಿರುದ್ಧ ಅಪಪ್ರಚಾರ, ಘನತೆರಹಿತವಾಗಿ ನಿಂದನೆಯನ್ನು ಮಾಡುತ್ತಿದ್ದುದಕ್ಕಾಗಿ ನರೇಂದ್ರ ಮೋದಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮನಮೋಹನ್ಸಿಂಗ್ ಅವರ ಪ್ರಾಮಾಣಿಕತೆ ಹಾಗೂ ಉತ್ತರದಾಯಿತ್ವವು, ಮೋದಿ ಸರಕಾರವು ಕಾರ್ಯನಿರ್ವಹಿಸುತ್ತಿರುವ ರೀತಿಗಿಂತ ತೀರಾ ವಿಭಿನ್ನವಾಗಿದೆ. ಮನಮೋಹನ್ಸಿಂಗ್ ಅವರೊಬ್ಬ ಶಾಂತಸ್ವಭಾವದದ ಹಾಗೂ ಸಜ್ಜನ ವ್ಯಕ್ತಿ, ಆದರೆ ಅತ್ಯಂತ ಪರಿಣಾಮಕಾರಿ ಪ್ರಧಾನಿ ಎಂಬುದಾಗಿ ಇತಿಹಾಸ ಸ್ಮರಿಸಲಿದೆಯೆಂದು ಸೋನಿಯಾ ಬಣ್ಣಿಸಿದ್ದಾರೆ.
ಮಾಧ್ಯಮ, ನ್ಯಾಯಾಂಗ, ನಾಗರಿಕ ಸಮಾಜದಲ್ಲಿನ ವ್ಯಕ್ತಿಗಳು ಹಾಗೂ ನಿಶ್ಚಿತವಾಗಿಯೂ ಆರೆಸ್ಸೆಸ್ ಹಾಗೂ ಬಿಜೆಪಿಯಿಂದ ಮನಮೋಹನ್ಸಿಂಗ್ ವಿರುದ್ಧ ಅತ್ಯಂತ ಸಮನ್ವಯದ ಹಾಗೂ ಸಂಘಟಿತವಾದ ಲಾಬಿ ನಡೆದಿತ್ತು. ಇಂದು ಅವರ ಅವರ ನಕಲಿ ಧರ್ಮಯುದ್ಧವು ಅನಿವಾರ್ಯವಾಗಿ ಮುಕ್ತಾಯಗೊಂಡಿದೆ. ಪ್ರತಿಯೊಂದು ವಿಷಯದಲ್ಲೂ ಸಿಂಗ್ ಅವರನ್ನು ದೋಷಮುಕ್ತಗೊಳಿಸಲಾಗಿದೆ ಎಂದು ಸೋನಿಯಾ ಅವರು ‘ದಿ ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಗೆ ಬರೆದ ಲೇಖನದಲ್ಲಿ ತಿಳಿಸಿದ್ದಾರೆ.
2026ರ ಜುಲೈ 29 ಭಾರತದ ಇತ್ತೀಚಿನ ರಾಜಕೀಯ ಇತಿಹಾಸದಲ್ಲೇ ಮಹತ್ವದ ದಿನವಾಗಿದೆ. ಅಂದು, ಸುಪ್ರೀಂಕೋರ್ಟ್ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ ಡಾ.ಮನಮೋಹನ್ಸಿಂಗ್ ಅವರಿಗೆ ಕ್ಲೀನ್ಚಿಟ್ ನೀಡಿದ ಸಿಬಿಐನ ಕ್ರಮವನ್ನು ಎತ್ತಿಹಿಡಿದಿದೆ ಎಂದು ಸೋನಿಯಾ ಗಾಂಧಿ ಹೇಳಿದರು.
ಸಿಬಿಐನ ತನಿಖಾ ಮುಕ್ತಾಯ ವರದಿಯನ್ನು ಸಕಾರಣವಿಲ್ಲದೆ ತಿರಸ್ಕರಿಸಿದ ವಿಚಾರಣಾ ನ್ಯಾಯಾಲಯದ ಕ್ರಮವನ್ನು ಕೂಡಾ ಸುಪ್ರೀಂಕೋರ್ಟ್ ಟೀಕಿಸಿರುವ ಬಗ್ಗೆಯೂ ಸೋನಿಯಾ ಅವರು ಲೇಖನದಲ್ಲಿ ಗಮನಸೆಳೆದಿದ್ದಾರೆ.
ತನ್ನ ವಿರುದ್ಧ ವಾಗ್ದಾಳಿ ನಡೆಸಿದ ವಿದ್ಯಾರ್ಥಿಗಳನ್ನು ಕ್ಷಮಿಸುವುದಾಗಿ ಹೇಳಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರು, ಈ ಸದವಕಾಶವನ್ನು ಬಳಸಿಕೊಂಡು ಮನಮೋಹನ್ಸಿಂಗ್ ಅವರ ಗೌರವಕ್ಕೆ ಕುಂದುತರುವ ಅಪಪ್ರಚಾರ ಮಾಡಿದ್ದಕ್ಕಾಗಿ ತನಗೆ ತಾನೇ ಕ್ಷಮೆಯಾಚಿಸಲಿ. ಅತ್ಯಂತ ಅಸಾಧಾರಣ ಪ್ರಾಮಾಣಿಕತೆ ಹಾಗೂ ಸತ್ಯನಿಷ್ಠೆಯ ವ್ಯಕ್ತಿಯಾದ ಡಾ. ಮನಮೋಹನ್ಸಿಂಗ್ ವಿರುದ್ಧ ನಡೆದ ಅಪಪ್ರಚಾರವು, ಸಾರ್ವಜನಿಕ ಚರ್ಚೆಯ ಅತ್ಯಂತ ದುರಂತ ಅಧ್ಯಾಯವಾಗಿದೆ ಎಂದು ಸೋನಿಯಾಗಾಂಧಿ ಹೇಳಿದ್ದಾರೆ.






