ಪಹಲ್ಗಾಮ್ ದಾಳಿ | ಸರ್ವ ಪಕ್ಷಗಳ ಸಭೆಯಲ್ಲಿ ಭದ್ರತಾ ಲೋಪವನ್ನು ಒಪ್ಪಿಕೊಂಡ ಕೇಂದ್ರ ಸರಕಾರ : ವರದಿ
ಹಿಂದೂ-ಮುಸ್ಲಿಂ ಸಮಸ್ಯೆಯಾಗಿ ಬಿಂಬಿಸದಂತೆ ಸಭೆಯಲ್ಲಿ ಆಗ್ರಹಿಸಿದ ವಿಪಕ್ಷಗಳ ನಾಯಕರು

P
ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದನಾ ದಾಳಿಗೆ ಭದ್ರತಾ ಲೋಪವೇ ಕಾರಣ ಎಂದು ಕೇಂದ್ರ ಸರಕಾರ ಗುರುವಾರ ಒಪ್ಪಿಕೊಂಡಿದೆ. ಟೂರ್ ಆಪರೇಟರ್ಗಳು ಸ್ಥಳೀಯ ಆಡಳಿತದ ಗಮನಕ್ಕೆ ತರದೆ ಪ್ರವಾಸಿಗರಿಗೆ ಮಾರ್ಗವನ್ನು ತೆರೆದಿದ್ದರು. ಈ ಕಾರಣದಿಂದಾಗಿ ಆ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿರಲಿಲ್ಲ ಎಂದು ಸರ್ವಪಕ್ಷಗಳ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಗೆ ಕೇಂದ್ರ ಸರಕಾರ ತಿಳಿಸಿರುವ ಬಗ್ಗೆ ThePrint ವರದಿ ಮಾಡಿದೆ.
ಸರ್ವಪಕ್ಷ ಸಭೆಯಲ್ಲಿ ಪಹಲ್ಗಾಮ್ನಲ್ಲಿ ಭದ್ರತಾ ಲೋಪಗಳನ್ನು 'ಸುರಕ್ಷತಾ ನಿಯಮಗಳ ಉಲ್ಲಂಘನೆ' ಎಂದು ಸರಕಾರ ಒಪ್ಪಿಕೊಂಡಿದೆ. ಸಂಭಾವ್ಯ ಗುಪ್ತಚರ ಮತ್ತು ಭದ್ರತಾ ಲೋಪಗಳ ಬಗ್ಗೆ ವಿರೋಧ ಪಕ್ಷದ ನಾಯಕರ ಆರೋಪಗಳಿಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಅಮಿತ್ ಶಾ, ʼನಾವು ದಾಳಿಯನ್ನು ತಡೆಯಲು ಸಾಧ್ಯವಾಗದ ಕಾರಣ ಸಭೆಯನ್ನು ಕರೆದಿದ್ದೇವೆʼ ಎಂದು ಹೇಳಿದ್ದಾರೆ.
ಅಮರನಾಥ ಯಾತ್ರೆಯ ಪ್ರಾರಂಭದ ವೇಳೆ ಜೂನ್ನಲ್ಲಿ ಈ ಮಾರ್ಗವನ್ನು ಸಾಮಾನ್ಯವಾಗಿ ಪ್ರವಾಸಿಗರಿಗೆ ತೆರೆಯಲಾಗುತ್ತದೆ. ಆದರೆ, ಅಧಿಕಾರಿಗಳಿಗೆ ಅರಿವಿಲ್ಲದೆ ಎಪ್ರಿಲ್ 20ರಂದು ಈ ಬಾರಿ ಮಾರ್ಗವನ್ನು ತೆರೆಯಲಾಗಿದೆ ಎಂದು ಸಭೆಯಲ್ಲಿ ಹೇಳಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗೃಹ ಸಚಿವರಾದ ಅಮಿತ್ ಶಾ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ದಾಳಿ ನಡೆದ ಸ್ಥಳದಲ್ಲಿ ಭದ್ರತಾ ಸಿಬ್ಬಂದಿಯ ಸಂಪೂರ್ಣ ಅನುಪಸ್ಥಿತಿಯನ್ನು ರಾಹುಲ್ ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಂಸತ್ತಿನ ಅನೆಕ್ಸ್ನಲ್ಲಿ ನಡೆದ ಸಭೆಯಲ್ಲಿ ಗುಪ್ತಚರ ಬ್ಯೂರೋದ ನಿರ್ದೇಶಕರು ಪಹಲ್ಗಾಮ್ ನಲ್ಲಿ ಏನಾಯ್ತು ಎಂಬ ಬಗ್ಗೆ 15 ನಿಮಿಷಗಳ ಪ್ರೆಸೆಂಟೇಷನ್ ಸಹ ನೀಡಿದ್ದಾರೆ.
ಅಮರನಾಥ ಯಾತ್ರೆಯ ಸಂದರ್ಭದಲ್ಲಿ ಅಂದರೆ ಸಾಮಾನ್ಯವಾಗಿ ಜೂನ್ನಲ್ಲಿ ಪವಿತ್ರ ಕ್ಷೇತ್ರಕ್ಕೆ ತೆರಳುವ ಯಾತ್ರಾರ್ಥಿಗಳು ಈ ಸ್ಥಳದಲ್ಲಿ ವಿಶ್ರಾಂತಿ ಪಡೆಯುವುದರಿಂದ ಈ ಮಾರ್ಗವನ್ನು ಜೂನ್ನಲ್ಲಿ ತೆರೆಯಲಾಗುತ್ತದೆ, ಆದರೆ ಈ ಬಾರಿ, ಎಪ್ರೀಲ್ನಲ್ಲಿಯೇ ಸ್ಥಳಕ್ಕೆ ಹೋಗಲು ಆಸಕ್ತಿ ಹೊಂದಿರುವ ಪ್ರವಾಸಿಗರಿಗೆ ಬುಕಿಂಗ್ ಸ್ವೀಕರಿಸಲು ಸ್ಥಳೀಯ ಪ್ರವಾಸ ನಿರ್ವಾಹಕರು ಪ್ರಾರಂಭಿಸಿದರು. ಏಪ್ರಿಲ್ 20 ರಿಂದ ಪ್ರವಾಸಿಗರು ಅಲ್ಲಿಗೆ ಹೋಗಲು ಪ್ರಾರಂಭಿಸಿದರು. ಈ ಬೆಳವಣಿಗೆಯ ಬಗ್ಗೆ ಸ್ಥಳೀಯ ಅಧಿಕಾರಿಗಳು ತಿಳಿದಿರಲಿಲ್ಲ ಎಂದು ಸಭೆಯಲ್ಲಿ ಸರಕಾರ ನಮಗೆ ತಿಳಿಸಿದೆ ಎಂದು ಆಪ್ ನಾಯಕ, ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ದಿ ಪ್ರಿಂಟ್ಗೆ ತಿಳಿಸಿದ್ದಾರೆ.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪ್ರತಿಪಕ್ಷಗಳು ಕೇಂದ್ರ ಸರಕಾರದ ಜೊತೆಗಿದೆ. ಈ ಹೋರಾಟದಲ್ಲಿ ರಾಷ್ಟ್ರವು ಸಂಪೂರ್ಣ ಒಗ್ಗಟ್ಟಾಗಿರಬೇಕು ಎಂದು ತೃಣಮೂಲ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ಸಂಸದ ಸುದೀಪ್ ಬಂಡೋಪಾಧ್ಯಾಯ ಹೇಳಿದ್ದು,ಆದಷ್ಟು ಬೇಗ ಎಲ್ಲ ರಾಜಕೀಯ ಪಕ್ಷಗಳ ಮುಖ್ಯಸ್ಥರ ಸಭೆ ಕರೆಯುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದರು.
ಬಿಜೆಪಿಯು ಈ ವಿಷಯವನ್ನು ಹಿಂದೂ-ಮುಸ್ಲಿಂ ಸಮಸ್ಯೆಯಾಗಿ ಏಕೆ ಪರಿಗಣಿಸುತ್ತಿದೆ ಎಂದು ಸುದೀಪ್ ಬಂಡೋಪಾಧ್ಯಾಯ ಪ್ರಶ್ನಿಸಿದ್ದಾರೆ. ಪಹಲ್ಗಾಮ್ ದಾಳಿಯನ್ನು ಹಿಂದೂ-ಮುಸ್ಲಿಂ ವಿಷಯವನ್ನಾಗಿ ಪರಿವರ್ತಿಸುವ ಪ್ರಯತ್ನಗಳಿಂದ ದೂರವಿರುವಂತೆ ಆಗ್ರಹಿಸಿದ್ದಾರೆ.
ಪ್ರಧಾನಿಯವರ ನಿರ್ಧಾರಗಳು ಅಂತಿಮವಾಗಿರುವುದರಿಂದ ಪ್ರಧಾನಿಗಳು ಇಂತಹ ಪ್ರಮುಖ ಸಭೆಗಳಿಗೆ ಹಾಜರಾಗುವುದು ಮುಖ್ಯವಾಗಿತ್ತು ಎಂದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಭೆಗೆ ಗೈರಾಗಿರುವ ಬಗ್ಗೆ ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.
ಎಎಪಿಯ ಸಂಜಯ್ ಸಿಂಗ್ ಕೂಡ ಸಭೆಯಲ್ಲಿ ಭಾಗವಹಿಸುವ ಬದಲು ಬಿಹಾರದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ಪ್ರಧಾನಿಯವರ ನಿರ್ಧಾರವನ್ನು ಪ್ರಶ್ನಿಸಿದ್ದಾರೆ. ದಾಳಿ ನಡೆದ ಸ್ಥಳಕ್ಕೆ ತ್ವರಿತ ಪ್ರತಿಕ್ರಿಯೆ ತಂಡವನ್ನು ಕಳುಹಿಸುವಲ್ಲಿ ವಿಳಂಬವಾಗಿರುವುದಕ್ಕೆ ಕಾರಣವೇನೆಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಸಭೆಯಲ್ಲಿ ಕೇಳಿದ್ದಾರೆ.







