ಸಿಎಂ ಆಗಬೇಕೆಂದರೆ ಶರದ್ ಪವಾರ್ ಅವರನ್ನು ಕರೆದುಕೊಂಡು ಬರಲು ಅಜಿತ್ ಗೆ ಷರತ್ತು ವಿಧಿಸಿದ ಮೋದಿ: ಕಾಂಗ್ರೆಸ್ ನಾಯಕನ ಆರೋಪ

ನರೇಂದ್ರ ಮೋದಿ , ಅಜಿತ್ ಪವಾರ್ | Photo : PTI
ಹೊಸದಿಲ್ಲಿ: ನೀವು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಬೇಕಾದರೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (NCP)ದ ಮುಖ್ಯಸ್ಥ ಶರದ್ ಪವಾರ್ ರನ್ನು ನಿಮ್ಮೊಂದಿಗೆ ಕರೆದುಕೊಂಡು ಬರಬೇಕು ಎಂಬ ಶರತ್ತನ್ನು ಪ್ರಧಾನಿ ನರೇಂದ್ರ ಮೋದಿ ಎನ್ಸಿಪಿಯ ವಿಭಜಿತ ಬಣದ ಮುಖ್ಯಸ್ಥ ಅಜಿತ್ ಪವಾರ್ ಗೆ ವಿಧಿಸಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ವಿಜಯ್ ವಡೆತ್ತಿವಾರ್ ಬುಧವಾರ ಹೇಳಿದ್ದಾರೆ.
‘‘ಮುಖ್ಯಮಂತ್ರಿಯಾಗಬೇಕೆಂಬ ನಿಮ್ಮ ಕನಸು ನನಸಾಗಬೇಕೆಂದು ನೀವು ಬಯಸುವುದಾದರೆ ಶರದ್ ಪವಾರ್ ರನ್ನು ನಿಮ್ಮ ಬಣಕ್ಕೆ ಕರೆತರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅಜಿತ್ ಪವಾರ್ಗೆ ಹೇಳಿದ್ದಾರೆ. ಅದಕ್ಕಾಗಿಯೇ ಅಜಿತ್ ಪವಾರ್, ಶರದ್ ಪವಾರ್ರನ್ನು ಪದೇ ಪದೇ ಭೇಟಿಯಾಗಿ ತನ್ನೊಂದಿಗೆ ಬರುವಂತೆ ಅಂಗಲಾಚುತ್ತಿರುವಂತೆ ಕಾಣುತ್ತಿದೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ವಡೆತ್ತಿವಾರ್ ಹೇಳಿದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ NCP ನಾಯಕಿ ಹಾಗೂ ಶರದ್ ಪವಾರ್ ಮಗಳು ಸುಪ್ರಿಯಾ ಸುಳೆ, ಈ ಬೆಳವಣಿಗೆಯ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ ಹಾಗೂ ತನಗೆ ಬಿಜೆಪಿಯಿಂದ ಯಾವುದೇ ಕೊಡುಗೆ ಬಂದಿಲ್ಲ ಎಂದಿದ್ದಾರೆ.
‘‘ಇವೆಲ್ಲವುಗಳ ಬಗ್ಗೆ ನನಗೆ ಏನೂ ಗೊತ್ತಿಲ್ಲ. ನಾನು ನನ್ನ ಕ್ಷೇತ್ರದ ಕೆಲಸದಲ್ಲಿ ತಲ್ಲೀನಳಾಗಿದ್ದೇನೆ. ಇಂಥ ಹೇಳಿಕೆಗಳಿಗೆ ಪವಾರ್ ಈಗಾಗಲೇ ಉತ್ತರಿಸಿದ್ದಾರೆ. ಈ ಬಗ್ಗೆ ಅವರು ಈಗಾಗಲೇ ಮಾತನಾಡಿದ್ದಾರೆ. ಅವರು ಸ್ವತಂತ್ರರಾಗಿದ್ದಾರೆ, ಅವರಿಗೆ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಸಾಮರ್ಥ್ಯವಿದೆ’’ ಎಂದು ಸುಳೆ ನುಡಿದರು.
ಶರದ್ ಪವಾರ್ರನ್ನು ಸೆಳೆದುಕೊಳ್ಳಲು ಬಿಜೆಪಿ ಮಾಡುತ್ತಿರುವ ಪ್ರಯತ್ನಗಳಿಗೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಪ್ರಶ್ನೆಗೆ, ‘‘ನನ್ನ ನಾಯಕ ಏನು ಹೇಳುತ್ತಾರೋ ಅದೇ ನನ್ನ ಪ್ರತಿಕ್ರಿಯೆ’’ ಎಂದು ಸುಳೆ ಹೇಳಿದರು.
ಬಿಜೆಪಿ ನೀಡುತ್ತಿರುವ ಇಂಥ ಕೊಡುಗೆಗಳ ಬಗ್ಗೆ ನಿಮಗೆ ತೃಪ್ತಿಯಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸುಳೆ, ‘‘ನಾನು ಗೊಂದಲದಲ್ಲಿದ್ದೇನೆ. ಯಾರೂ ನನಗೆ ಕೊಡುಗೆಗಳನ್ನು ನೀಡಿಲ್ಲ. ಹಾಗಾಗಿ, ನಾನು ನಿರಾಳವಾಗಿದ್ದೆನೆ’’ ಎಂದರು.
ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣದ ನಾಯಕ ಸುನಿಲ್ ತತ್ಕರೆ, ವಿಜಯ್ ವಡೆತ್ತಿವಾರ್ರ ಹೇಳಿಕೆಯನ್ನು ‘‘ಹಾಸ್ಯಾಸ್ಪದ’’ ಎಂದು ಬಣ್ಣಿಸಿದ್ದಾರೆ. ‘‘ಇಬ್ಬರು ನಾಯಕರು ಏನು ಚರ್ಚಿಸಿದರು ಎಂಬ ಬಗ್ಗೆ ನಾನು ಮಾತನಾಡಲು ಹೋಗುವುದಿಲ್ಲ. ಅದು ಅವರ ಕುಟುಂಬದ ವಿಷಯ. ನಾವು ಬಿಜೆಪಿಯೊಂದಿಗೆ ಕೈಜೋಡಿಸುವಾಗ, ಅವರಾಗಲಿ, ನಾವಾಗಲಿ ಯಾವುದೇ ಷರತ್ತು ಹಾಕಿಲ್ಲ. ದೇಶ ಮತ್ತು ರಾಜ್ಯದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ನಾವು ಬಿಜೆಪಿಯ ಜೊತೆ ಕೈಜೋಡಿಸಿದ್ದೇವೆ’’ ಎಂದು ಅವರು ಹೇಳಿದರು.







