ಮೋದಿ ‘ಅತ್ಯಂತ ಯುವ ವಿರೋಧಿ’ ಪ್ರಧಾನಿ : ರಾಹುಲ್ ಗಾಂಧಿ ಟೀಕೆ

Photo credit: X/@RahulGandhi
ಹೊಸದಿಲ್ಲಿ,ಜು.20: ನರೇಂದ್ರ ಮೋದಿಯವರು ದೇಶದ ಇತಿಹಾಸದಲ್ಲೇ ‘ಅತ್ಯಂತ ಯುವ ವಿರೋಧಿ’ ಪ್ರಧಾನಿಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಬಣ್ಣಿಸಿದ್ದಾರೆ. ಪ್ರಸ್ತುತ ಸರ್ಕಾರವು ಯುವಜನರನ್ನು ಕೈಬಿಟ್ಟಿರುವುದು ಮಾತ್ರವಲ್ಲದೆ ಅವರ ಮೇಲೆಯೇ ಮುಗಿಬೀಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ಅವರು ಎಷ್ಟು ‘ಯುವ ವಿರೋಧಿ’ ಎಂದರೆ ವಿಫಲರಾಗಿರುವ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಪಡೆಯಲು ಕೂಡ ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ರಾಹುಲ್ ಎಕ್ಸ್ನಲ್ಲಿ ಗೇಲಿ ಮಾಡಿದ್ದಾರೆ.
‘152 ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. 7.5 ಕೋಟಿ ವಿದ್ಯಾರ್ಥಿಗಳು ಬಲಿಪಶುಗಳಾಗಿದ್ದಾರೆ. ಆದರೂ ಒಬ್ಬನೇ ಒಬ್ಬ ಅಪರಾಧಿಗೆ ಶಿಕ್ಷೆಯಾಗಿಲ್ಲ. ಹಾಗಾದರೆ ಶಿಕ್ಷೆ ಅನುಭವಿಸಿದವರು ಯಾರು? ಕಷ್ಟಪಟ್ಟು ಓದಿದ ದೇಶದ ಯುವಜನರು’ ಎಂದು ಅವರು ಕಿಡಿಕಾರಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ ಅಪರಾಧಿಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ ? ಆದರೆ ನ್ಯಾಯಸಮ್ಮತವಾದ ವಿಷಯಗಳನ್ನು ಪ್ರಸ್ತಾವಿಸುವ ವಿದ್ಯಾರ್ಥಿಗಳನ್ನು ಎಳೆದೊಯ್ದು, ಥಳಿಸಲಾಗುತ್ತಿದೆ. ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.






