UPI ತೆರಿಗೆಯನ್ನು ತಕ್ಷಣ ಹಿಂಪಡೆಯಿರಿ: ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಆಗ್ರಹ

ಹೊಸದಿಲ್ಲಿ: ಯುಪಿಐ ಮೂಲಕ ಪಾವತಿಸಲಾಗುವ ನಿರ್ದಿಷ್ಟ ವ್ಯಾಪಾರಿ ವಹಿವಾಟುಗಳಿಗೆ ಶುಲ್ಕ ವಿಧಿಸುವ ಹೊಸ ನಿಯಮಾವಳಿಯನ್ನು ‘‘ಯುಪಿಐ ತೆರಿಗೆ’’ ಎಂಬುದಾಗಿ ಬಣ್ಣಿಸಿರುವ ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಅದನ್ನು ತಕ್ಷಣವೇ ಹಿಂಪಡೆಯುವಂತೆ ಬುಧವಾರ ಒತ್ತಾಯಿಸಿದ್ದಾರೆ.
ಹೊಸ ನಿಯಮಾವಳಿಯು ರೂ. 2,000ಕ್ಕಿಂತ ಹೆಚ್ಚಿನ ನಿರ್ದಿಷ್ಟ ವ್ಯಾಪಾರಿ ವಹಿವಾಟುಗಳ ಮೇಲೆ ಶೇಕಡಾ 0.4ರಷ್ಟು ಮರ್ಚಂಟ್ ಡಿಸ್ಕೌಂಟ್ ರೇಟ್ (ಎಮ್ಡಿಆರ್) ವಿಧಿಸುತ್ತದೆೆ; ಆದರೆ ಗ್ರಾಹಕರಿಗೆ ಯಾವುದೇ ಎಂಡಿಆರ್ ವಿಧಿಸಲಾಗುವುದಿಲ್ಲ ಎಂದು ಸರಕಾರ ಹೇಳುತ್ತದೆ.
‘‘ಮೋದಿ ಜೀ, ಯುಪಿಐ ತೆರಿಗೆಯನ್ನು ಈಗಲೇ ಹಿಂಪಡೆಯಿರಿ’’ ಎಂಬ ಅಡಿಬರಹದೊಂದಿಗೆ ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ವೀಡಿಯೊ ಸಂದೇಶವೊಂದನ್ನು ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಯುಪಿಐ ಪಾವತಿ ಮೇಲೆ ತೆರಿಗೆ ವಿಧಿಸುವ ಮೂಲಕ ಮತ್ತು ಅಮೆರಿಕಕ್ಕೆ ಅಪಾರ ಮೊತ್ತದ ಹಣವನ್ನು ನೀಡುವ ಮೂಲಕ ಪ್ರತಿಯೊಬ್ಬ ಭಾರತೀಯನ ಮೇಲೂ ತೆರಿಗೆ ಹೊರಿಸಿದ್ದಾರೆ ಎಂದು ಆರೋಪಿಸಿದರು.
ಸರಕಾರವು ರೂ. 2,000ಕ್ಕಿಂತ ಹೆಚ್ಚಿನ ವ್ಯಾಪಾರಿ ಯುಪಿಐ ಪಾವತಿಗಳಿಗೆ 0.4% ಎಂಡಿಆರ್ ನಿಗದಿಪಡಿಸಿದ್ದು, ರೂ. 75,000 ಮತ್ತು ಅದಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಗರಿಷ್ಠ 300 ರೂಪಾಯಿ ವಿಧಿಸಬಹುದಾಗಿದೆ. ಈ ಶುಲ್ಕವು ವ್ಯಾಪಾರಿಗಳಿಗೆ ಮಾತ್ರ ಅನ್ವಯಿಸುತ್ತದೆ ಹಾಗೂ ಗ್ರಾಹಕರಿಗೆ ನೇರವಾಗಿ ಅನ್ವಯಿಸುವುದಿಲ್ಲ ಎಂದು ಸರಕಾರ ಹೇಳಿಕೊಂಡಿದೆ. ಆದರೆ, ವ್ಯಾಪಾರಿಗಳು ಬೆಲೆಗಳನ್ನು ಹೆಚ್ಚಿಸುವ ಮೂಲಕ ಅಂತಿಮವಾಗಿ ಈ ಹೆಚ್ಚುವರಿ ಹೊರೆಯನ್ನು ಗ್ರಾಹಕರ ಮೇಲೆಯೇ ವರ್ಗಾಯಿಸಬಹುದು ಎಂದು ವಿಮರ್ಶಕರು ಹೇಳುತ್ತಾರೆ.
ನಿರ್ದಿಷ್ಟ ಯುಪಿಐ ವಹಿವಾಟುಗಳ ಮೇಲೆ ಎಂಡಿಆರ್ ಶುಲ್ಕಗಳನ್ನು ವಿಧಿಸಲು ಅನುಮತಿಸುವ ಸರಕಾರದ ಹೊಸ ನಿಯಮಾವಳಿಯ ವಿಚಾರವಾಗಿ ಪ್ರಧಾನಿಯವರನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ, ಮೋದಿ ಅಮೆರಿಕ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೆ ಶರಣಾಗಿದ್ದಾರೆ ಎಂದು ಆರೋಪಿಸಿದರು.
ಮೋದಿಯವರನ್ನು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೊಂದಿಗೆ ಹೋಲಿಕೆ ಮಾಡಿದ ರಾಹುಲ್,‘‘ನೀವು ಎಡಪಂಥೀಯರೋ, ಬಲಪಂಥೀಯರೋ ಎಂಬ ಪ್ರಶ್ನೆಗೆ, ನಾನು ಎಡಕ್ಕೂ ಹೋಗುವುದಿಲ್ಲ, ಬಲಕ್ಕೂ ಹೋಗುವುದಿಲ್ಲ, ನೇರವಾಗಿ ನಿಲ್ಲುತ್ತೇನೆ ಎಂದು ಇಂದಿರಾ ಗಾಂಧಿ ಉತ್ತರಿಸಿದ್ದರು’’ ಎಂದು ಹೇಳಿದರು.
ಮೋದಿಯವರನ್ನು ಲೇವಡಿ ಮಾಡುತ್ತಾ, ‘‘ಮೋದಿಜಿಯವರು ಸಂಪೂರ್ಣವಾಗಿ ವಿಭಿನ್ನ. ಅವರು ಎಡವೂ ಅಲ್ಲ, ಬಲವೂ ಅಲ್ಲ. ಅವರು ನೇರವಾಗಿ ಮಲಗಿ ಡೊನಾಲ್ಡ್ ಟ್ರಂಪ್ ಮುಂದೆ ಸಾಷ್ಟಾಂಗ ನಮಸ್ಕಾರ ಹಾಕಲು ನಿರ್ಧರಿಸಿದ್ದಾರೆ’’ ಎಂದು ರಾಹುಲ್ ಹೇಳಿದರು.
ಜನವಿರೋಧಿ ನಿಲುವು: ಪ್ರತಿಪಕ್ಷದ ಸಂಸದರಿಂದ ವಿರೋಧ
2,000 ರೂ.ಗಿಂತ ಹೆಚ್ಚಿನ ವ್ಯಾಪಾರಿ ವಹಿವಾಟುಗಳಿಗೆ ಮಾಡುವ ಯುಪಿಐ ಪಾವತಿಗಳಿಗೆ ಶುಲ್ಕ ವಿಧಿಸುವ ಕೇಂದ್ರ ಸರಕಾರದ ನಿರ್ಧಾರವನ್ನು ಸಂಸದೀಯ ಸಮಿತಿ ಸಭೆಯೊಂದರಲ್ಲಿ ಪ್ರತಿಪಕ್ಷಗಳಿಗೆ ಸೇರಿದ ಹೆಚ್ಚಿನ ಸಂಸದರು ವಿರೋಧಿಸಿದ್ದಾರೆ.
ಸರಕಾರದ ಈ ಕ್ರಮವು ‘‘ಜನವಿರೋಧಿ’’ಯಾಗಿದ್ದು, ದೇಶದ ಎಲ್ಲಾ ಜನರ ಮೇಲೆ ಇದು ಪರಿಣಾಮ ಬೀರುತ್ತದೆ ಎಂದು ಹಣಕಾಸು ಕುರಿತ ಸಂಸದೀಯ ಸ್ಥಾಯಿ ಸಮಿತಿಯ ಸಭೆಯಲ್ಲಿ ಅವರು ಹೇಳಿದ್ದಾರೆ.
ಹಿಂದೆ ಸರಿಯಲು ನಿರಾಕರಿಸಿದ ಕೇಂದ್ರ
ರೂ. 2,000ಕ್ಕಿಂತ ಅಧಿಕ ಮೊತ್ತದ ಯುಪಿಐ ಪಾವತಿಗೆ ಶುಲ್ಕ ವಿಧಿಸುವ ತನ್ನ ನಿರ್ಧಾರದಿಂದ ಹಿಂದೆ ಸರಿಯಲು ಕೇಂದ್ರ ಸರಕಾರ ನಿರಾಕರಿಸಿದೆ.
ಪ್ರತಿಪಕ್ಷಗಳ ತೀವ್ರ ವಿರೋಧದ ಹೊರತಾಗಿಯೂ, ಈ ವಿಷಯದಲ್ಲಿ ಯಾವುದೇ ಮರುಪರಿಶೀಲನೆ ಇಲ್ಲ ಎಂದು ಸರಕಾರಿ ಮೂಲಗಳು ಬುಧವಾರ ಸ್ಪಷ್ಟಪಡಿಸಿವೆ.






