‘ನನ್ನೊಂದಿಗೆ ಮುಖಾಮುಖಿ ಚರ್ಚೆಗೆ ಬಂದರೆ ಮೋದಿ ಪ್ರಧಾನಿ ಹುದ್ದೆಯಲ್ಲಿ ಉಳಿಯುವುದಿಲ್ಲ’: ರಾಹುಲ್ ಗಾಂಧಿ
ಅದಾನಿ ಅಥವಾ ಮೋಹನ್ ಭಾಗವತ್ ತೀರ್ಪುಗಾರರಾಗಿದ್ದರೂ ಆಗಬಹುದು ಎಂದ ವಿಪಕ್ಷ ನಾಯಕ

ರಾಹುಲ್ ಗಾಂಧಿ (Photo: PTI)
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮುಖಾಮುಖಿ ಚರ್ಚೆಗೆ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಬಹಿರಂಗ ಸವಾಲು ಹಾಕಿದ್ದಾರೆ. ತಮ್ಮೊಂದಿಗೆ ನೇರ ಚರ್ಚೆಗೆ ಕುಳಿತರೆ ಮೋದಿ ಅವರು ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುವುದಿಲ್ಲ ಎಂದು ಹೇಳಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ಶುಕ್ರವಾರ ನಡೆದ ‘ಆಸ್ಕ್ ಮಿ’ ಸಂವಾದದಲ್ಲಿ, ಸಂಸತ್ತಿನಲ್ಲಿ ಚರ್ಚೆ ನಡೆಸಲು ಬಿಜೆಪಿ ಸಿದ್ಧವಿರುವಾಗ ಸಾರ್ವಜನಿಕ ಚರ್ಚೆಗೆ ಏಕೆ ಒತ್ತಾಯಿಸುತ್ತಿದ್ದೀರಿ ಎಂಬ ಪ್ರಶ್ನೆ ರಾಹುಲ್ ಗಾಂಧಿ ಅವರಿಗೆ ಎದುರಾಯಿತು.
ಇದಕ್ಕೆ ಉತ್ತರಿಸಿದ ಅವರು, ಲೋಕಸಭೆಯಲ್ಲಿ ಪ್ರಮುಖ ವಿಷಯಗಳ ಬಗ್ಗೆ ಮಾತನಾಡಲು ತಮಗೆ ಅವಕಾಶ ನೀಡುತ್ತಿಲ್ಲ. ತಮ್ಮ ಮೈಕ್ರೊಫೋನ್ ಕೂಡ ಆಫ್ ಮಾಡಲಾಗಿತ್ತು ಎಂದು ಆರೋಪಿಸಿದರು.
"ಕೃಷಿ ಮಸೂದೆಗಳು, ಮತ ಕಳ್ಳತನ, ಚೀನಾ ವಿಷಯ, ಜನರಲ್ ನರವಾಣೆ ಅವರ ಪುಸ್ತಕ ಹಾಗೂ ಎಫ್ಸ್ಟೀನ್ ಪ್ರಕರಣದ ಬಗ್ಗೆ ಮಾತನಾಡಲು ನೀವು ನನಗೆ ಅವಕಾಶ ನೀಡಲಿಲ್ಲ. ನನಗೆ ಮುಖಾಮುಖಿ ಚರ್ಚೆ ಬೇಕು. ಸುದೀರ್ಘ ಭಾಷಣಗಳನ್ನು ಒಳಗೊಂಡ ಚರ್ಚೆ ನನಗೆ ಬೇಡ," ಎಂದು ರಾಹುಲ್ ಗಾಂಧಿ ಹೇಳಿದರು.
ಸುದೀರ್ಘ ಭಾಷಣಗಳ ಬದಲಿಗೆ ಪ್ರಧಾನಿ ಮೋದಿ ಮತ್ತು ತಾವು ಒಂದೇ ಮೇಜಿನ ಎದುರು ಕುಳಿತು ಪರಸ್ಪರ ನೇರವಾಗಿ ಪ್ರಶ್ನಿಸುವ, ಆರೋಪಗಳಿಗೆ ಉತ್ತರಿಸುವ ರೀತಿಯ ಚರ್ಚೆ ನಡೆಯಬೇಕು ಎಂಬುದು ತಮ್ಮ ನಿಲುವು ಎಂದು ಅವರು ಸ್ಪಷ್ಟಪಡಿಸಿದರು.
"ನರೇಂದ್ರ ಮೋದಿ ನನ್ನ ವಿರುದ್ಧ ಆರೋಪಗಳನ್ನು ಮಾಡಲಿ ಮತ್ತು ನಾನು ಅವರ ವಿರುದ್ಧ ಆರೋಪಗಳನ್ನು ಮಾಡುತ್ತೇನೆ. ಅವರು ಬರಲಿ; ಒಂದು ಮೇಜಿನ ಎರಡು ಬದಿಗಳಲ್ಲಿ ನಾವು ಕುಳಿತುಕೊಳ್ಳೋಣ. ಒಂದು ಕಡೆ ನರೇಂದ್ರ ಮೋದಿ ಜಿ ಇರುತ್ತಾರೆ, ಇನ್ನೊಂದು ಕಡೆ ನಾನು ಇರುತ್ತೇನೆ" ಎಂದು ಸವಾಲು ಹಾಕಿದರು.
ಚರ್ಚೆಗೆ ತೀರ್ಪುಗಾರರನ್ನಾಗಿ ಅದಾನಿ ಸಮೂಹದ ಅಧ್ಯಕ್ಷ ಗೌತಮ್ ಅದಾನಿ ಅಥವಾ RSS ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ನೇಮಿಸಿದರೂ ತಮಗೆ ಯಾವುದೇ ಅಭ್ಯಂತರವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.
"ಆದರೆ, ನನ್ನೊಂದಿಗೆ ಮುಖಾಮುಖಿ ಚರ್ಚೆ ನಡೆಸಿದ ನಂತರ ಪ್ರಧಾನಿ ತಮ್ಮ ಹುದ್ದೆಯಲ್ಲಿ ಉಳಿಯುವುದಿಲ್ಲ ಎಂದು ನಾನು ಖಾತರಿ ನೀಡುತ್ತೇನೆ," ಎಂದು ಅವರು ಪ್ರತಿಪಾದಿಸಿದರು.
ಹಿಂದೆಯೂ ಹಲವು ಬಾರಿ ಸವಾಲು
ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಅವರು ಈ ಹಿಂದೆಯೂ ಹಲವು ಬಾರಿ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಪ್ರಧಾನಿ ಒಬ್ಬ "ದೇಶದ್ರೋಹಿ" ಎಂದು ಸಾಬೀತುಪಡಿಸಲು ತಮಗೆ ಕೇವಲ ಐದು ನಿಮಿಷ ಸಾಕು ಎಂದೂ ಹಿಂದೆ ಹೇಳಿದ್ದರು.
ಆದರೆ, ಬಿಜೆಪಿ ನಾಯಕರು ರಾಹುಲ್ ಗಾಂಧಿ ಅವರ ಸವಾಲನ್ನು ತಳ್ಳಿಹಾಕಿದ್ದಾರೆ. ಸಂಸತ್ತಿನಲ್ಲಿ ನಡೆಯುವ ಚರ್ಚೆಗಳಿಂದ ರಾಹುಲ್ ಗಾಂಧಿ ಅವರೇ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಸಂಸತ್ತು ಈಗಾಗಲೇ ಚರ್ಚೆಗೆ ಸೂಕ್ತ ವೇದಿಕೆಯಾಗಿದೆ ಎಂದು ಹೇಳಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರು ಸ್ವಲ್ಪ ಗಂಭೀರತೆ ಮತ್ತು ಜವಾಬ್ದಾರಿಯನ್ನು ಪ್ರದರ್ಶಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಂಸತ್ತು ಚರ್ಚೆಗೆ ಲಭ್ಯವಿರುವಾಗ, ಪ್ರಧಾನಿ ಅವರನ್ನೇ ಚರ್ಚೆಯ ಸ್ಥಳವನ್ನು ಆಯ್ಕೆ ಮಾಡುವಂತೆ ರಾಹುಲ್ ಗಾಂಧಿ ಕೇಳುತ್ತಿರುವುದೇಕೆ ಎಂದೂ ನಿರ್ಮಲಾ ಸೀತಾರಾಮನ್ ಪ್ರಶ್ನಿಸಿದ್ದಾರೆ.






