ಪ್ರಧಾನಿ ಮೋದಿ ಬಿಹಾರ ಭೇಟಿ ಮಧ್ಯೆ ಎಕ್ಸ್ನಲ್ಲಿ #ModiFailsBihar ಹ್ಯಾಶ್ಟ್ಯಾಗ್ ಟ್ರೆಂಡಿಂಗ್

Credit: X/@BiharKaVoice
ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಬಿಹಾರಕ್ಕೆ ಭೇಟಿ ಮಧ್ಯೆ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ #ModiFailsBihar ಎಂಬ ಹ್ಯಾಶ್ಟ್ಯಾಗ್ ಟ್ರೆಂಡಿಂಗ್ನಲ್ಲಿದೆ. ರಾಜ್ಯದ ಜನರ ಭರವಸೆಗಳನ್ನು ಈಡೇರಿಸುವಲ್ಲಿ ಪ್ರಧಾನಿ ಮೋದಿ ವಿಫಲರಾಗಿದ್ದಾರೆ ಎಂದು ಸಾವಿರಾರು ಬಳಕೆದಾರರು ಎಕ್ಸ್ನಲ್ಲಿ ನಿರಾಶೆ ವ್ಯಕ್ತಪಡಿಸಿದ್ದಾರೆ.
ಮೋದಿ ಪಾಟ್ನಾಗೆ ತೆರಳುವುದಕ್ಕೆ ಕೆಲವೇ ಗಂಟೆಗಳ ಮೊದಲು ಈ ಬೆಳವಣಿಗೆ ನಡೆದಿದೆ. ಮೋದಿ ಸರಕಾರ ಅಧಿಕಾರಕ್ಕೆ ಬಂದು 11 ವರ್ಷಗಳು ಕಳೆದಿವೆ. ಆದರೆ ಬಿಹಾರಕ್ಕೆ ಏನು ಸಿಕ್ಕಿದೆ? ಖಾಲಿ ಭರವಸೆಗಳು ಮಾತ್ರ ಸಿಕ್ಕಿದೆ ಎಂದು ಹಲವರು ಎಕ್ಸ್ನಲ್ಲಿ #ModiFailsBihar ಹ್ಯಾಶ್ಟ್ಯಾಗ್ನೊಂದಿಗೆ ಪೋಸ್ಟ್ ಮಾಡಿದ್ದಾರೆ.
ಬಿಹಾರದ ಜನರಿಗೆ ಉದ್ಯೋಗಗಳಿಲ್ಲ, ಎಕ್ಸ್ಪ್ರೆಸ್ ವೇ ಇಲ್ಲ, ಜವಳಿ ಪಾರ್ಕ್ ಇಲ್ಲ, ಐಟಿ ಪಾರ್ಕ್ಗಳಿಲ್ಲ, ಉತ್ಪಾದನೆ ಇಲ್ಲ, ಗ್ರೀನ್ಫೀಲ್ಡ್ ವಿಮಾನ ನಿಲ್ದಾಣವಿಲ್ಲ ಎಂದು ಎಕ್ಸ್ನಲ್ಲಿ ಬರೆಯಲಾಗಿದೆ.
ಬಿಹಾರದಂತಹ ಹಿಂದುಳಿದ ಪ್ರದೇಶಗಳನ್ನು ಬಿಟ್ಟು ಪ್ರಧಾನಿ ತಮ್ಮ ತವರು ರಾಜ್ಯ ಗುಜರಾತ್ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ನಮಗೆ ಡಬಲ್ ಎಂಜಿನ್ ಸರಕಾರ ಅಭಿವೃದ್ಧಿಯ ಭರವಸೆ ನೀಡಿತ್ತು. ಆದರೆ ಬಿಹಾರ ಇನ್ನೂ ಏಕೆ ಹಿಂದುಳಿದಿದೆ? ಪ್ರತಿ ಚುನಾವಣೆಗೂ ಮೊದಲು ನಮಗೆ ಘೋಷಣೆಗಳು ಮಾತ್ರ ಸಿಗುತ್ತಿವೆ ಎಂದು ಎಕ್ಸ್ ಬಳಕೆದಾರರೋರ್ವರು ಬರೆದುಕೊಂಡಿದ್ದಾರೆ.
ʼಪಾಟ್ನಾದಲ್ಲಿ ಹೊಸ ಟರ್ಮಿನಲ್ ನಿರ್ಮಾಣ ಸ್ವಾಗತಾರ್ಹ. ಆದರೆ, ಬಿಹಾರದ ಯುವಕರು ಇನ್ನೂ ಉದ್ಯೋಗಗಳಿಗಾಗಿ ವಲಸೆ ಹೋಗುತ್ತಿದ್ದಾರೆ ಎಂಬ ಅಂಶವನ್ನು ಇದು ಗೌಪ್ಯವಾಗಿಡುವುದಿಲ್ಲʼ ಎಂದು ಮತ್ತೋರ್ವ ಎಕ್ಸ್ ಬಳಕೆದಾರರು ಬರೆದುಕೊಂಡಿದ್ದಾರೆ.







