ಭಾರತಕ್ಕೆ ತೈಲ ಪೂರೈಕೆ ಮುಂದುವರಿಸುತ್ತೇವೆ: ರಶ್ಯ ಅಧ್ಯಕ್ಷ ಪುಟಿನ್

Photo credit: PTI
ಹೊಸದಿಲ್ಲಿ: ಭಾರತಕ್ಕೆ ಇಂಧನ ಪೂರೈಕೆಯನ್ನು ಮುಂದುವರಿಸಲು ನಾವು ಸಿದ್ಧರಿದ್ದೇವೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ದಿಲ್ಲಿಯ ಹೈದರಾಬಾದ್ ಹೌಸ್ನಲ್ಲಿ ದ್ವಿಪಕ್ಷೀಯ ಮಾತುಕತೆ ಬಳಿಕ ಪ್ರಧಾನಿ ನರೇಂದ್ರ ಮೋದಿ, ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ-ರಶ್ಯಾ 2030ರವರೆಗೆ ಆರ್ಥಿಕ ಸಹಕಾರಕ್ಕೆ ಒಪ್ಪಿಕೊಂಡಿವೆ ಎಂದು ಹೇಳಿದ್ದಾರೆ. ಕಳೆದ ಎಂಟು ದಶಕಗಳಿಂದ ಭಾರತ-ರಶ್ಯಾ ಸ್ನೇಹ ಸಂಬಂಧ ದೃಢವಾಗಿ ನಿಂತಿದೆ. ದ್ವಿಪಕ್ಷೀಯ ಸಂಬಂಧಗಳು ಹಲವಾರು ಐತಿಹಾಸಿಕ ಮೈಲಿಗಲ್ಲುಗಳನ್ನು ತಲುಪುತ್ತಿರುವ ಸಮಯದಲ್ಲಿ ವ್ಲಾದಿಮಿರ್ ಪುಟಿನ್ ಭಾರತಕ್ಕೆ ಭೇಟಿ ನೀಡುತ್ತಿರುವುದು ವಿಶೇಷವಾಗಿದೆ ಎಂದು ಹೇಳಿದರು.
ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ರಶ್ಯಾ ಬಹಳ ಹಿಂದಿನಿಂದಲೂ ಒಟ್ಟಾಗಿ ನಿಂತಿದೆ. ಉಕ್ರೇನ್ ವಿಷಯದಲ್ಲಿ ಭಾರತ ಸದಾ ಶಾಂತಿಯನ್ನು ಪ್ರತಿಪಾದಿಸುತ್ತಾ ಬಂದಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಕಳೆದ ವರ್ಷ ಭಾರತ-ರಷ್ಯಾ ವ್ಯಾಪಾರ ಶೇ. 12 ರಷ್ಟು ಬೆಳವಣಿಗೆ ಕಂಡಿದ್ದು, ಈ ವರ್ಷ ಮತ್ತಷ್ಟು ಬಲವಾಗುವ ಸಾಧ್ಯತೆ ಇದೆ. ತೈಲ, ಅನಿಲ, ಕಲ್ಲಿದ್ದಲು ಸೇರಿದಂತೆ ಭಾರತದ ಇಂಧನ ಅಗತ್ಯಗಳಿಗೆ ಬೇಕಾದ ಎಲ್ಲವನ್ನೂ ಸ್ಥಿರವಾಗಿ ಪೂರೈಕೆ ಮಾಡಲಾಗುತ್ತಿದೆ ಎಂದು ರಶ್ಯಾ ಅಧ್ಯಕ್ಷ ಪುಟಿನ್ ಹೇಳಿದರು.
ಗುರುವಾರ ಸಂಜೆ ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದಿಲ್ಲಿಗೆ ಆಗಮಿಸಿದ್ದರು. ಅವರಿಗೆ ರಾಷ್ಟ್ರಪತಿ ಭವನದಲ್ಲಿ ಭವ್ಯವಾದ ಸ್ವಾಗತ ನೀಡಲಾಗಿತ್ತು. ಈ ವೇಳೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಉಪಸ್ಥಿತರಿದ್ದರು. ಬಳಿಕ ಪುಟಿನ್ ರಾಜ್ಘಾಟ್ಗೆ ತೆರಳಿ ಮಹಾತ್ಮ ಗಾಂಧಿಯವರಿಗೆ ಪುಷ್ಪ ನಮನ ಸಲ್ಲಿಸಿದರು.







