ಭಾರತದ ಸ್ವದೇಶಿ ಸ್ಟೆಲ್ತ್ ಯುದ್ಧ ವಿಮಾನ ನಿರ್ಮಾಣಕ್ಕೆ ವೇಗ: ಮೂರು ಸಂಸ್ಥೆಗಳಿಂದ ಬಿಡ್ ಸಲ್ಲಿಕೆ
15,000 ಕೋಟಿ ರೂ. ವೆಚ್ಚದ AMCA ಯೋಜನೆ; 2034–35ರ ವೇಳೆಗೆ ಮೊದಲ ಬ್ಯಾಚ್ ಸಿದ್ಧವಾಗುವ ನಿರೀಕ್ಷೆ

Photo: x.com/JagranNews
ಹೊಸದಿಲ್ಲಿ: ಭಾರತದ ಐದನೇ ತಲೆಮಾರಿನ ಸ್ಟೆಲ್ತ್ ಯುದ್ಧ ವಿಮಾನ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಯೋಜನೆ ಮಹತ್ವದ ಹಂತ ತಲುಪಿದೆ. 15,000 ಕೋಟಿ ರೂ. ವೆಚ್ಚದ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್ಕ್ರಾಫ್ಟ್ (AMCA) ಯೋಜನೆಯಡಿ ಐದು ಮಾದರಿ ವಿಮಾನಗಳನ್ನು ನಿರ್ಮಿಸುವ ಜವಾಬ್ದಾರಿ ಪಡೆಯಲು ಮೂರು ಭಾರತೀಯ ಸಂಸ್ಥೆಗಳು ಬಿಡ್ ಸಲ್ಲಿಸಿವೆ. ರಕ್ಷಣಾ ಸಚಿವಾಲಯ ರಚಿಸಿರುವ ಉನ್ನತ ಮಟ್ಟದ ಸಮಿತಿ ಈ ಬಿಡ್ ಗಳ ಮೌಲ್ಯಮಾಪನ ನಡೆಸುತ್ತಿದೆ.
ಎಲ್ ಆ್ಯಂಡ್ ಟಿ ನೇತೃತ್ವದ ಒಕ್ಕೂಟ, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (TASL) ಮತ್ತು ಭಾರತ್ ಫೋರ್ಜ್ ನೇತೃತ್ವದ ಒಕ್ಕೂಟ ಬಿಡ್ ಸಲ್ಲಿಸಿರುವ ಮೂರು ಸ್ಪರ್ಧಿಗಳಾಗಿವೆ. ಎಲ್ ಆ್ಯಂಡ್ ಟಿ ಒಕ್ಕೂಟದಲ್ಲಿ ಬಿಇಎಲ್ (BEL) ಮತ್ತು ಡೈನಾಮ್ಯಾಟಿಕ್ ಸಂಸ್ಥೆಗಳು ಸೇರಿವೆ. ಭಾರತ್ ಫೋರ್ಜ್ ಒಕ್ಕೂಟದಲ್ಲಿ ಬಿಇಎಂಎಲ್ ಲಿಮಿಟೆಡ್ (BEML) ಮತ್ತು ಡೇಟಾ ಪ್ಯಾಟರ್ನ್ಸ್ ಸಂಸ್ಥೆಗಳು ಪಾಲುದಾರರಾಗಿವೆ. TASL ಮಾತ್ರ ಸ್ವತಂತ್ರವಾಗಿ ಬಿಡ್ ಸಲ್ಲಿಸಿದೆ.
ಮೂರೂ ಸಂಸ್ಥೆಗಳು ಅ. 30ರ ಗಡುವಿನೊಳಗೆ ಬಿಡ್ ಸಲ್ಲಿಸಿವೆ. ನ. 1ರಂದು ಬಿಡ್ ಗಳನ್ನು ತೆರೆಯಲಾಗಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯ ಪ್ರಯೋಗಾಲಯವಾದ ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ (ADA) AMCA ವಿಮಾನದ ವಿನ್ಯಾಸ ರೂಪಿಸಿದೆ. ಈ ವಿನ್ಯಾಸದ ಆಧಾರದಲ್ಲಿ ಐದು ಮಾದರಿ ವಿಮಾನಗಳನ್ನು ನಿರ್ಮಿಸಲು ಅಭಿವೃದ್ಧಿ ಮತ್ತು ಉತ್ಪಾದನಾ ಪಾಲುದಾರ (DCPP) ಸಂಸ್ಥೆಯನ್ನು ಆಯ್ಕೆ ಮಾಡುವುದು ಬಿಡ್ ಪ್ರಕ್ರಿಯೆಯ ಉದ್ದೇಶವಾಗಿದೆ.
ಬೆಂಗಳೂರು ಮೂಲದ ADA ಈ ಯೋಜನೆಯನ್ನು ರೂಪಿಸಿದ್ದು, ಎರಡು ಇಂಜಿನ್ ಗಳನ್ನು ಹೊಂದಿರುವ ಐದು ಮಾದರಿ ವಿಮಾನಗಳ ನಿರ್ಮಾಣದ ಮೇಲ್ವಿಚಾರಣೆ ನಡೆಸಲಿದೆ.
ಎರಡು ಎಂಜಿನ್ಗಳ ಅಳವಡಿಕೆ ಸಾಧ್ಯತೆ
AMCA ವಿಮಾನಕ್ಕೆ ಎರಡು F414 (F414) ಇಂಜಿನ್ ಗಳನ್ನು ಅಳವಡಿಸುವ ಸಾಧ್ಯತೆಯಿದೆ. ಭಾರತದಲ್ಲಿ ಈ ಇಂಜಿನ್ ಗಳನ್ನು ಜಂಟಿಯಾಗಿ ಉತ್ಪಾದಿಸುವ ಸಂಬಂಧ ರಕ್ಷಣಾ ಸಾರ್ವಜನಿಕ ವಲಯದ ಸಂಸ್ಥೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಮತ್ತು ಅಮೆರಿಕದ ಜಿಇ (GE) ಕಂಪೆನಿ ನಡುವೆ ಒಪ್ಪಂದದ ಪ್ರಸ್ತಾವವಿದೆ. ಈ ಒಪ್ಪಂದ ಕಾರ್ಯರೂಪಕ್ಕೆ ಬಂದರೆ AMCA ವಿಮಾನಗಳಿಗೆ F414 ಇಂಜಿನ್ ಗಳನ್ನು ಬಳಸಬಹುದು. ಐದು ಮಾದರಿ ವಿಮಾನಗಳಿಗೆ ಒಟ್ಟು 15 ಇಂಜಿನ್ ಗಳ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ.
ಏಳು ವರ್ಷಗಳಲ್ಲಿ 1,800 ಪರೀಕ್ಷಾ ಹಾರಾಟ
AMCA ವಿಮಾನದ ಸಾಮರ್ಥ್ಯವನ್ನು ಖಚಿತಪಡಿಸಿಕೊಳ್ಳಲು ಐದು ಮಾದರಿ ವಿಮಾನಗಳು ಏಳು ವರ್ಷಗಳ ಅವಧಿಯಲ್ಲಿ ಒಟ್ಟು 1,800 ಪರೀಕ್ಷಾ ಹಾರಾಟಗಳನ್ನು ನಡೆಸುವ ನಿರೀಕ್ಷೆಯಿದೆ.
ಈ ಪರೀಕ್ಷೆಗಳ ಮೂಲಕ ವಿಮಾನದ ಹಾರಾಟ ನಿಯಂತ್ರಣ ವ್ಯವಸ್ಥೆ, ಶತ್ರುಗಳ ರಾಡಾರ್ ಗೆ ಸಿಗದೆ ಕಾರ್ಯಾಚರಿಸುವ ಸಾಮರ್ಥ್ಯ, ಸಂವೇದಕಗಳು, ರಾಡಾರ್, ಶಸ್ತ್ರಾಸ್ತ್ರಗಳ ಅಳವಡಿಕೆ ಮತ್ತು ಇಂಜಿನ್ ಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲಾಗುತ್ತದೆ.
ವಿಮಾನದ ಪ್ರಮುಖ ವೈಶಿಷ್ಟ್ಯಗಳಲ್ಲಿ ಶಸ್ತ್ರಾಸ್ತ್ರಗಳನ್ನು ಹೊರಗೆ ಕಾಣದಂತೆ ಒಳಗಿನ ವಿಶೇಷ ವಿಭಾಗಗಳಲ್ಲಿ ಇರಿಸುವ ವ್ಯವಸ್ಥೆ, ಆಫ್ಟರ್ಬರ್ನರ್ ಬಳಸದೆ ಶಬ್ದದ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಹಾರುವ ಸೂಪರ್ಕ್ರೂಸ್ ಸಾಮರ್ಥ್ಯ, ಕೃತಕ ಬುದ್ಧಿಮತ್ತೆ (AI) ಆಧಾರಿತ ಸುಧಾರಿತ ವಿಮಾನ ತಂತ್ರಜ್ಞಾನ ಮತ್ತು ಮುಂದಿನ ತಲೆಮಾರಿನ ಸಂವೇದಕಗಳ ಸಂಯೋಜನೆ ಸೇರಿವೆ.
2034–35ರ ವೇಳೆಗೆ ಮೊದಲ ಬ್ಯಾಚ್
AMCA ವಿಮಾನದ ಮೊದಲ ಬ್ಯಾಚ್ 2034 ಅಥವಾ 2035ರ ವೇಳೆಗೆ ಸಿದ್ಧವಾಗುವ ನಿರೀಕ್ಷೆಯಿದೆ. ಇದರಿಂದ ಭಾರತೀಯ ವಾಯುಪಡೆಗೆ ಸ್ವದೇಶಿ ಐದನೇ ತಲೆಮಾರಿನ ಯುದ್ಧ ವಿಮಾನಗಳು ಲಭ್ಯವಾಗಲಿವೆ.
ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳ ಸ್ಕ್ವಾಡ್ರನ್ ಗಳ ಸಂಖ್ಯೆ ಆತಂಕಕಾರಿ ಮಟ್ಟಕ್ಕೆ ಇಳಿದಿದೆ. ಅನುಮೋದಿತ 42.5 ಸ್ಕ್ವಾಡ್ರನ್ ಗಳ ಬಲಕ್ಕೆ ಹೋಲಿಸಿದರೆ ಪ್ರಸ್ತುತ ಸಂಖ್ಯೆ 29ಕ್ಕೆ ಕುಸಿದಿದೆ. ಈ ಕೊರತೆಯನ್ನು ನೀಗಿಸುವುದೂ AMCA ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಸಂಕೀರ್ಣವಾದ ಈ ವಿಮಾನ ಅಭಿವೃದ್ಧಿ ಯೋಜನೆಯ ಔಪಚಾರಿಕತೆಗಳನ್ನು ಪೂರ್ಣಗೊಳಿಸಲು ಬಿಡ್ ಸಲ್ಲಿಸಿದ ಸಂಸ್ಥೆಗಳು ಹೆಚ್ಚಿನ ಸಮಯ ಕೋರಿದ್ದವು. ಹೀಗಾಗಿ, ಬಿಡ್ ಸಲ್ಲಿಕೆಯ ಅಂತಿಮ ಗಡುವನ್ನು ಆ. 27ರಿಂದ ಅ. 30ರವರೆಗೆ ವಿಸ್ತರಿಸಲಾಗಿತ್ತು.
ಚೀನಾ ಈಗಾಗಲೇ ಚೆಂಗ್ಡು J-20 ಮತ್ತು ಶೆನ್ಯಾಂಗ್ J-35 ಎಂಬ ಎರಡು ಐದನೇ ತಲೆಮಾರಿನ ಸ್ಟೆಲ್ತ್ ಯುದ್ಧ ವಿಮಾನಗಳನ್ನು ನಿರ್ವಹಿಸುತ್ತಿದೆ. ಪಾಕಿಸ್ತಾನವೂ ಚೀನಾದಿಂದ 40 J-35 ಸ್ಟೆಲ್ತ್ ವಿಮಾನಗಳನ್ನು ಖರೀದಿಸಲು ಯೋಜಿಸಿದೆ. ಈ ಬೆಳವಣಿಗೆಗಳ ನಡುವೆ ಭಾರತದ AMCA ಯೋಜನೆಗೆ ಹೆಚ್ಚಿನ ಮಹತ್ವ ಬಂದಿದೆ.







