ಮುಂಗಾರು ಮಳೆ ಮಾಯ; ಉಪಗ್ರಹ ಚಿತ್ರಗಳಲ್ಲಿ ಸ್ಪಷ್ಟ ದೇಶಾದ್ಯಂತ ಶೇ. 64 ಮಳೆ ಕೊರತೆ

ಸಾಂದರ್ಭಿಕ ಚಿತ್ರ | Photo Credit : PTI
ಹೊಸದಿಲ್ಲಿ, ಜೂ. 15: ದೇಶದ ಬಹುತೇಕ ಭಾಗಗಳಿಗೆ ಪ್ರವೇಶಿಸಿದ್ದ ನೈಋತ್ಯ ಮುಂಗಾರು ಇದ್ದಕ್ಕಿದ್ದಂತೆ ಕಣ್ಮರೆಯಾಗಿದೆ.
ನೈಋತ್ಯ ಮುಂಗಾರು ಮಳೆ ಗಣನೀಯವಾಗಿ ಕುಸಿದಿರುವುದನ್ನು ಭಾರತೀಯ ಹವಾಮಾನ ಇಲಾಖೆ (IMD) ದತ್ತಾಂಶ ಹಾಗೂ ಇತ್ತೀಚಿನ ಉಪಗ್ರಹ ಚಿತ್ರಗಳು ದೃಢಪಡಿಸಿವೆ.
ಜೂನ್ 4ರಿಂದ ಜೂನ್ 15ರವರೆಗಿನ ಅವಧಿಯಲ್ಲಿ ದೇಶಾದ್ಯಂತ ವಾಡಿಕೆಯಂತೆ 53.7 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಕೇವಲ 19.2 ಮಿ.ಮೀ. ಮಳೆಯಾಗಿದ್ದು, ಶೇ. 64ರಷ್ಟು ಮಳೆ ಕೊರತೆಯಾಗಿದೆ ಎಂದು IMD ತಿಳಿಸಿದೆ.
ಈ ತಿಂಗಳ ಆರಂಭದಲ್ಲಿ ದೇಶದ ಹಲವು ಭಾಗಗಳಿಗೆ ಮುಂಗಾರು ಪ್ರವೇಶಿಸಿತ್ತು. ಆದರೆ, ಈಗ ಮಧ್ಯ, ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ಮಳೆ ಕಡಿಮೆಯಾಗಿದೆ. ಮಳೆ ನಕ್ಷೆ ಈ ಕೊರತೆಯ ಬಗ್ಗೆ ಗಮನ ಸೆಳೆದಿದೆ. ಮುಂಗಾರು ಬಂದ ಮೇಲೂ ಮಳೆ ಕಡಿಮೆಯಾಗಿರುವುದು ಆತಂಕ ಮೂಡಿಸಿದೆ.
ಜೂನ್ 15ರಂದು ಇನ್ಸಾಟ್-3ಡಿಎಸ್ ಉಪಗ್ರಹ ಕೆಲವು ಚಿತ್ರಗಳನ್ನು ಸೆರೆಹಿಡಿದಿದೆ. ಈ ಚಿತ್ರಗಳು ಮುಂಗಾರು ಮಂದಗತಿಯನ್ನು ಸ್ಪಷ್ಟವಾಗಿ ತೋರಿಸುತ್ತವೆ. ಸಾಮಾನ್ಯವಾಗಿ ಸಕ್ರಿಯ ಮುಂಗಾರು ಇದ್ದಾಗ ದೊಡ್ಡ ಮಟ್ಟದಲ್ಲಿ ಮೋಡಗಳು ಕಾಣಿಸಬೇಕಿತ್ತು. ಆದರೆ, ಈಗ ದಕ್ಷಿಣ ಹಾಗೂ ಮಧ್ಯ ಭಾರತದ ಬಹುತೇಕ ಭಾಗಗಳಲ್ಲಿ ಮೋಡಗಳು ಕಂಡುಬಂದಿಲ್ಲ.
ಹೆಚ್ಚಿನ ಪ್ರಮಾಣದ ಮಳೆ ತರುವ ಮೋಡಗಳು ಹಿಮಾಲಯ ಪ್ರದೇಶ ಮತ್ತು ಈಶಾನ್ಯ ಭಾರತದಲ್ಲಿ ಮಾತ್ರ ಕಂಡುಬಂದಿವೆ. ಇದರೊಂದಿಗೆ ಸಿಂಧು-ಗಂಗಾ ಬಯಲು ಪ್ರದೇಶದ ಉತ್ತರ ಭಾಗಗಳಲ್ಲಿಯೂ ಕಾಣಿಸಿಕೊಂಡಿವೆ. ಆದರೆ, ಅರಬ್ಬಿ ಸಮುದ್ರದ ಮೇಲಿನ ಮುಂಗಾರು ಮೋಡಗಳು ದುರ್ಬಲ ಹಾಗೂ ವಿಚ್ಛಿದ್ರವಾದಂತೆ ಕಂಡುಬಂದಿವೆ.
ಮುಂಗಾರು ನಿಧಾನಗೊಂಡಿರುವುದು ಏಕೆ?
ಇತ್ತೀಚಿನ ದಿನಗಳಲ್ಲಿ ಮುಂಗಾರು ಕರ್ನಾಟಕ ಮತ್ತು ಮಹಾರಾಷ್ಟ್ರದ ಭಾಗಗಳಿಗೆ ಮುಂದುವರಿದಿದೆ. ತೆಲಂಗಾಣ, ಆಂಧ್ರಪ್ರದೇಶ ಮತ್ತು ಮಧ್ಯ ಭಾರತಕ್ಕೂ ಹರಡಿದೆ. ಆದರೆ, ಮುಂಗಾರು ಮಾರುತಗಳ ವೇಗ ಕಡಿಮೆಯಾಗಿದೆ.
ಹವಾಮಾನ ತಜ್ಞರ ಪ್ರಕಾರ, ಅರಬ್ಬಿ ಸಮುದ್ರ ಅಥವಾ ಬಂಗಾಳ ಕೊಲ್ಲಿಯಲ್ಲಿ ತೇವಾಂಶದ ಕೊರತೆಯಿಂದ ಈ ಸಮಸ್ಯೆ ಉಂಟಾಗಿಲ್ಲ. ಬದಲಾಗಿ, ಭೂಮಿಯಿಂದ ಕೆಲವು ಕಿಲೋಮೀಟರ್ ಎತ್ತರದಲ್ಲಿರುವ ವಾತಾವರಣದ ಬದಲಾವಣೆಗಳೇ ಇದಕ್ಕೆ ಕಾರಣ.
ದೇಶದ ಬಹುತೇಕ ಭಾಗಗಳಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಆದರೆ, ನೈಋತ್ಯ ಮುಂಗಾರು ಆಂಧ್ರಪ್ರದೇಶ, ಪಶ್ಚಿಮ ಬಂಗಾಳದ ಉಳಿದ ಭಾಗಗಳಲ್ಲಿ ಹಾಗೂ ತೆಲಂಗಾಣ, ಒಡಿಶಾ, ಜಾರ್ಖಂಡ್ ಮತ್ತು ಬಿಹಾರದ ಇನ್ನು ಕೆಲವು ಪ್ರದೇಶಗಳಲ್ಲಿ ವ್ಯಾಪಿಸಿದೆ.
ಮುಂದಿನ ನಾಲ್ಕೈದು ದಿನಗಳಲ್ಲಿ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಒಡಿಶಾ, ಜಾರ್ಖಂಡ್ ಮತ್ತು ಬಿಹಾರದ ಹೆಚ್ಚಿನ ಭಾಗಗಳಲ್ಲಿ ಹಾಗೂ ಛತ್ತೀಸ್ಗಢದ ಕೆಲವು ಭಾಗಗಳಲ್ಲಿ ಮುಂಗಾರು ವ್ಯಾಪಿಸಲು ವಾತಾವರಣ ಅನುಕೂಲಕರವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದು ಕೇವಲ ತಾತ್ಕಾಲಿಕ ಮುಂಗಾರು ವಿರಾಮವಾಗಿದ್ದು, ಈ ವಾರದ ಕೊನೆಯಲ್ಲಿ ಮುಂಗಾರು ಮಳೆ ಸುಧಾರಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.






