ಬ್ಯಾಂಕುಗಳ ‘ವಿದೇಶೀಕರಣ’ ವಿರುದ್ಧ ವಿತ್ತಸಚಿವೆಗೆ ಸಂಸದ ಜಾನ್ ಬ್ರಿಟ್ಟಾಸ್ ಪತ್ರ

ಜಾನ್ ಬ್ರಿಟ್ಟಾಸ್(X \@JohnBrittas ) , ನಿರ್ಮಲಾ ಸೀತಾರಾಮನ್(PTI)
ಹೊಸದಿಲ್ಲಿ: ಸಿಪಿಎಂ ಸಂಸದ ಜಾನ್ ಬ್ರಿಟ್ಟಾಸ್ ಅವರು ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯ ಹೆಚ್ಚುತ್ತಿರುವ ‘ವಿದೇಶೀಕರಣ’ದ ವಿರುದ್ಧ ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.
ಬ್ರಿಟ್ಟಾಸ್ ತನ್ನ ಪತ್ರದಲ್ಲಿ ಶತಮಾನದಷ್ಟು ಹಳೆಯದಾದ ಕೆಥೋಲಿಕ್ ಸಿರಿಯನ್ ಬ್ಯಾಂಕ್ನಲ್ಲಿ ಶೇ.51ರಷ್ಟು ಪಾಲು ಬಂಡವಾಳದ ಸ್ವಾಧೀನಕ್ಕೆ ಕೆನಡಾದ ಹೂಡಿಕೆ ಸಂಸ್ಥೆ ಫೇರ್ಫ್ಯಾಕ್ಸ್ ಗ್ರೂಪ್ಗೆ ಅವಕಾಶ ನೀಡಿರುವ ನಿದರ್ಶನವನ್ನು ಎತ್ತಿ ತೋರಿಸಿದ್ದಾರೆ.
ಇದು ಖಾಯಂ ಉದ್ಯೋಗ ಕುಸಿತಗಳು,ಗುತ್ತಿಗೆ ಉದ್ಯೋಗಗಳ ಹೆಚ್ಚಳ, ವೇತನ ಪರಿಷ್ಕರಣೆಗೆ ನಿರಾಕರಣೆ ಮತ್ತು ಸಾಮಾಜಿಕ ಬ್ಯಾಂಕಿಂಗ್ನ ಕುಗ್ಗುವಿಕೆಗೆ ಕಾರಣವಾಗಿದೆ ಎಂದು ಬೆಟ್ಟು ಮಾಡಿರುವ ಬ್ರಿಟ್ಟಾಸ್, ಈ ನಿರ್ಧಾರವನ್ನು ತಕ್ಷಣ ಮರುಪರಿಶೀಲಿಸುವಂತೆ ಆಗ್ರಹಿಸಿದ್ದಾರೆ.
ಕೆಥೋಲಿಕ್ ಸಿರಿಯನ್ ಬ್ಯಾಂಕ್ 1920ರಲ್ಲಿ ಕೇರಳದ ತ್ರಿಶೂರಿನಲ್ಲಿ ಸ್ಥಾಪನೆಗೊಂಡಿತ್ತು. 2018ರಲ್ಲಿ,ಭಾರತೀಯ ಬ್ಯಾಂಕಿಂಗ್ ಇತಿಹಾಸದಲ್ಲಿ ಮೊದಲ ಬಾರಿಗೆ ಆರ್ಬಿಐ ಮತ್ತು ಕೇಂದ್ರ ಸರಕಾರ ಫೇರ್ಫ್ಯಾಕ್ಸ್ ಗ್ರೂಪ್ ತನ್ನ ಮಾರಿಷಿಯಸ್ ಹೋಲ್ಡಿಂಗ್ ಕಂಪನಿಯ ಮೂಲಕ ಬ್ಯಾಂಕಿನ ಶೇ.51ರಷ್ಟು ಪಾಲು ಬಂಡವಾಳವನ್ನು ಸ್ವಾಧೀನ ಪಡಿಸಿಕೊಳ್ಳಲು ಅನುಮತಿ ನೀಡಿದ್ದವು.





