Madhya Pradesh | ಸ್ವಘೋಷಿತ ಗೋರಕ್ಷಕರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಧೀಶೆಯ ವಿರುದ್ಧ ಕೋಮು ಅಭಿಯಾನ; FIR ದಾಖಲು

Photo Credit : livelaw
ಭೋಪಾಲ್: ಗೋ ಕಳ್ಳಸಾಗಣೆ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಹತ್ಯೆಗೈದ ಪ್ರಕರಣದಲ್ಲಿ ಏಳು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಬಳಿಕ, ಮಧ್ಯಪ್ರದೇಶದ ನ್ಯಾಯಾಧೀಶೆ ತಬಸ್ಸುಮ್ ಖಾನ್ ಅವರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಆಧಾರಿತ ದಾಳಿ ನಡೆಸಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು livelaw.in ವರದಿ ಮಾಡಿದೆ.
ನರ್ಮದಾಪುರಂ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ತಬಸ್ಸುಮ್ ಖಾನ್ ಅವರು ಈ ತಿಂಗಳ ಆರಂಭದಲ್ಲಿ, 2022ರಲ್ಲಿ ಟ್ರಕ್ ಚಾಲಕ ಶೇಖ್ ಲಾಲಾ ನಝೀರ್ ಅಹ್ಮದ್ ಹತ್ಯೆ ಪ್ರಕರಣದಲ್ಲಿ ಏಳು ಮಂದಿಯನ್ನು ಅಪರಾಧಿಗಳೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದರು.
ತೀರ್ಪು ಪ್ರಕಟವಾದ ದಿನವೇ ಶಿಕ್ಷೆಗೆ ಗುರಿಯಾದವರ ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿದ್ದರು. ಅಪರಾಧಿಗಳನ್ನು ಜೈಲಿಗೆ ಕರೆದೊಯ್ಯುತ್ತಿದ್ದ ಪೊಲೀಸ್ ವಾಹನವನ್ನು ತಡೆಯಲು ಯತ್ನಿಸಿದ್ದರು ಎಂದು ವರದಿಯಾಗಿದೆ.
ತೀರ್ಪಿನ ಬಳಿಕ ನ್ಯಾಯಾಧೀಶೆಯ ಧಾರ್ಮಿಕ ಗುರುತನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವೀಡಿಯೋಗಳು ಮತ್ತು ಪೋಸ್ಟ್ಗಳು ವೈರಲ್ ಆಗತೊಡಗಿದವು. ಈ ಹಿನ್ನೆಲೆಯಲ್ಲಿ ಸಿಯೋನಿ ಮಾಲ್ವಾ ಪೊಲೀಸರು, ಅಪರಿಚಿತ ವ್ಯಕ್ತಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 302 ಮತ್ತು 196ರ ಅಡಿಯಲ್ಲಿ FIR ದಾಖಲಿಸಿದ್ದಾರೆ.
ಎಕ್ಸ್ ವೇದಿಕೆಯಲ್ಲಿ ವೈರಲ್ ಆಗಿರುವ ವೀಡಿಯೋವೊಂದರಲ್ಲಿ, ಗುಜರಾತ್ ನ ವಿಶಾಲ್ ಸಿಂಗ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬ ನ್ಯಾಯಾಧೀಶೆಯ ವಿರುದ್ಧ ಕೋಮು ನಿಂದನೆಗಳನ್ನು ಬಳಸಿರುವುದು ಮತ್ತು ಶಿಕ್ಷೆಗೆ ಗುರಿಯಾದವರನ್ನು 10 ದಿನಗಳೊಳಗೆ ಬಿಡುಗಡೆ ಮಾಡುವಂತೆ ಒತ್ತಾಯಿಸಿರುವುದು ಕಂಡುಬಂದಿದೆ ಎಂದು ವರದಿಯಾಗಿದೆ.
ಮತ್ತೊಂದು ವೀಡಿಯೋದಲ್ಲಿ, ಪಂಜಾಬ್ ನ ಮೊಹಾಲಿ ಮೂಲದವರು ಎಂದು ಹೇಳಲಾಗುತ್ತಿರುವ ಕೆಲವರು ನ್ಯಾಯಾಧೀಶೆಯ ಪ್ರತಿಕೃತಿಯನ್ನು ದಹಿಸಿ, ಅಪರಾಧಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿರುವುದು ಕಂಡುಬಂದಿದೆ.
'ಹಿಂದೂನೇಷನ್' ಎಂಬ ಎಕ್ಸ್ ಖಾತೆಯಲ್ಲಿ ಪ್ರಕಟಿಸಲಾದ ಪೋಸ್ಟ್ನಲ್ಲಿ, ನ್ಯಾಯಾಧೀಶೆ ತಬಸ್ಸುಮ್ ಖಾನ್ ಅವರು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸ್ವಘೋಷಿತ ಗೋರಕ್ಷಕರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಅವರನ್ನು ಅಮಾನತುಗೊಳಿಸಿ, ಶಿಕ್ಷೆಗೆ ಗುರಿಯಾದವರನ್ನು ಬಿಡುಗಡೆ ಮಾಡಬೇಕು ಹಾಗೂ ನ್ಯಾಯಾಧೀಶೆಯ ಅಧಿಕಾರಾವಧಿಯ ಎಲ್ಲ ತೀರ್ಪುಗಳನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಲಾಗಿದೆ.
ಇನ್ನೊಂದು ವೀಡಿಯೋದಲ್ಲಿ, ಶಿಕ್ಷೆಗೆ ಗುರಿಯಾದವರ ಬಿಡುಗಡೆಗೆ ಒತ್ತಾಯಿಸಿ ಸ್ವಘೋಷಿತ ಗೋರಕ್ಷಕರ ಮೆರವಣಿಗೆ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಕೆಲ ಸಾಮಾಜಿಕ ಜಾಲತಾಣ ಜನರು, ನ್ಯಾಯಾಧೀಶೆ ಧರ್ಮದ ಆಧಾರದ ಮೇಲೆ ತೀರ್ಪು ನೀಡಿದ್ದಾರೆ ಎಂದು ಆರೋಪಿಸಿ, ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.
ಸಿಯೋನಿ ಮಾಲ್ವಾ ಪ್ರದೇಶದ ವಕೀಲರು ಸೇರಿದಂತೆ ಹಲವರು, ನ್ಯಾಯಾಂಗ ಅಧಿಕಾರಿಯ ವಿರುದ್ಧ ನಡೆಯುತ್ತಿರುವ ಈ ಆನ್ಲೈನ್ ಕಿರುಕುಳವನ್ನು ಖಂಡಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯಸಭಾ ಸದಸ್ಯ ಹಾಗೂ ಕಾಂಗ್ರೆಸ್ ನಾಯಕ ಪವನ್ ಖೇರಾ, "ಈ ಪ್ರಕರಣದ ಎಲ್ಲ ಅಪರಾಧಿಗಳು ಹಿಂದೂ ಪುರುಷರು. ಆದರೆ, ಅವರನ್ನು ಅವರ ಧರ್ಮದ ಕಾರಣಕ್ಕೆ ಶಿಕ್ಷಿಸಲಾಗಿಲ್ಲ. ತನಿಖೆಯಲ್ಲಿ ಅವರು ಗಲಭೆ, ಕೊಲೆಯತ್ನ ಮತ್ತು ಕೊಲೆ ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಕಾರಣ ಶಿಕ್ಷೆ ವಿಧಿಸಲಾಗಿದೆ. ಆದರೆ, ಕೆಲವರು ನ್ಯಾಯಾಧೀಶೆ ಮುಸ್ಲಿಂ ಮಹಿಳೆ ಎಂಬ ಕಾರಣಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.
ನ್ಯಾಯಾಧೀಶೆಯ ವಿರುದ್ಧ ದ್ವೇಷ ಹರಡುವವರ ವಿರುದ್ಧ ತ್ವರಿತ ಕಾನೂನು ಕ್ರಮ ಏಕೆ ಕೈಗೊಳ್ಳಲಾಗಿಲ್ಲ ಎಂದು ಖೇರಾ ಪ್ರಶ್ನಿಸಿದ್ದಾರೆ.
ಹಿರಿಯ ವಕೀಲ ವಿವೇಕ್ ಥಂಖಾ, ನ್ಯಾಯಾಧೀಶೆಯ ಮೇಲಿನ ದಾಳಿಯನ್ನು ಖಂಡಿಸಿ, "ಕಾನೂನಿನ ಆಡಳಿತವನ್ನು ಎತ್ತಿಹಿಡಿಯುವ ನ್ಯಾಯಾಧೀಶರನ್ನು ಗೌರವಿಸಿ ರಕ್ಷಿಸಬೇಕು. ವಿಶೇಷವಾಗಿ ಕೆಳ ಹಂತದ ನ್ಯಾಯಾಂಗ ಅಧಿಕಾರಿಗಳ ಸುರಕ್ಷತೆ ಖಾತರಿಪಡಿಸಬೇಕಾಗಿದೆ" ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ಉನ್ನತ ನ್ಯಾಯಾಂಗ ಮತ್ತು ಸರ್ಕಾರದ ಮೌನ ಆಘಾತಕಾರಿ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರಕರಣವು 2022ರ ಆಗಸ್ಟ್ 2 ಮತ್ತು 3ರ ಮಧ್ಯರಾತ್ರಿ ನಡೆದ ಘಟನೆಗೆ ಸಂಬಂಧಿಸಿದೆ. ಮಧ್ಯಪ್ರದೇಶದ ನರ್ಡರ್ವಾಡಾದಿಂದ ಮಹಾರಾಷ್ಟ್ರಕ್ಕೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಶೇಖ್ ಲಾಲಾ ನಝೀರ್ ಅಹ್ಮದ್ ಮತ್ತು ಅವರ ಸಹಚರ ಶೇಖ್ ಮುಷ್ತಾಕ್ ಅವರನ್ನು ಸಿಯೋನಿ ಮಾಲ್ವಾದ ಬರಾಖಂಡ್ ಗ್ರಾಮದ ಬಳಿ ತಡೆಹಿಡಿಯಲಾಗಿತ್ತು. ಗ್ರಾಮಸ್ಥರ ಗುಂಪೊಂದು ಲಾಠಿಗಳು ಮತ್ತು ಮರದ ಕೋಲುಗಳಿಂದ ಹಲ್ಲೆ ನಡೆಸಿದ್ದು, ನಝೀರ್ ಅಹ್ಮದ್ ಮೃತಪಟ್ಟಿದ್ದರು. ಶೇಖ್ ಮುಷ್ತಾಕ್ ಗಾಯಗೊಂಡಿದ್ದರು.






