ಜಪಾನ್ ಗೆ ಭಾರತದ ನೂತನ ರಾಯಭಾರಿಯಾಗಿ ಕಾಸರಗೋಡು ಮೂಲದ ನಗ್ಮಾ ಮುಹಮ್ಮದ್ ಮಲಿಕ್ ನೇಮಕ

ನಗ್ಮಾ ಮುಹಮ್ಮದ್ ಮಲಿಕ್ (Photo:X)
ಹೊಸದಿಲ್ಲಿ, ಅ. 17: ಭಾರತ ಸರ್ಕಾರವು ಪ್ರಸ್ತುತ ಪೋಲೆಂಡ್ ನಲ್ಲಿ ಭಾರತದ ನೂತನ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿರುವ 1991 ಬ್ಯಾಚ್ ನ ಹಿರಿಯ ಐಎಫ್ಎಸ್ ಅಧಿಕಾರಿ ಭಾರತೀಯ ವಿದೇಶಾಂಗ ಸೇವಾ ಅಧಿಕಾರಿ ನಗ್ಮಾ ಮುಹಮ್ಮದ್ ಮಲಿಕ್ ಅವರನ್ನು ಜಪಾನ್ ನಲ್ಲಿನ ಭಾರತದ ನೂತನ ರಾಯಭಾರಿಯಾಗಿ ನೇಮಿಸಿದೆ.
ಕಾಸರಗೋಡು ಮೂಲದ ನಗ್ಮಾ ಮಲಿಕ್ ಅವರು ವಿದೇಶಾಂಗ ಸೇವೆಯಲ್ಲಿ ಮೂರು ದಶಕಗಳಿಗಿಂತ ಹೆಚ್ಚು ಕಾಲ ವಿವಿಧ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದು, ತಮ್ಮ ವೃತ್ತಿಜೀವನದಲ್ಲಿ ಅಪಾರ ರಾಜತಾಂತ್ರಿಕ ಅನುಭವವನ್ನು ಗಳಿಸಿದ್ದಾರೆ.
ದೀಪಾ ಗೋಪಾಲನ್ ವಾಧ್ವಾರ ಬಳಿಕ ಜಪಾನಿಗೆ ಭಾರತದ ಎರಡನೇ ಮಹಿಳಾ ರಾಯಭಾರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ.
ಅವರು ಶೀಘ್ರದಲ್ಲೇ ಟೋಕಿಯೊದಲ್ಲಿ ತಮ್ಮ ಹೊಸ ಹುದ್ದೆಯ ಕಾರ್ಯಭಾರ ವಹಿಸಿಕೊಳ್ಳಲಿದ್ದಾರೆ.
ತನ್ನ ವೃತ್ತಿಜೀವನದಲ್ಲಿ ಫ್ರಾನ್ಸ್, ನೇಪಾಳ, ಶ್ರೀಲಂಕಾ, ಥೈಲಂಡ್, ಟ್ಯುನಿಷಿಯಾ, ಬ್ರುನೈನಲ್ಲಿ ಸೇವೆ ಸಲ್ಲಿಸಿರುವ ಮಲಿಕ್ ಪ್ರಸ್ತುತ ಪೋಲಂಡ್ ನಲ್ಲಿ ಭಾರತೀಯ ರಾಯಭಾರಿಯಾಗಿದ್ದಾರೆ.
ನಗ್ಮಾ ಮಲಿಕ್ ಪ್ರಧಾನಿ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗ ರಷ್ಯಾ ಮತ್ತು ಆಫ್ರಿಕಾ ಸಂಬಂಧಗಳನ್ನು ನಿರ್ವಹಿಸಿದ್ದರು ಮತ್ತು ಶಿಷ್ಟಾಚಾರದ ಉಪ ಮುಖ್ಯಸ್ಥ ಹುದ್ದೆಗೆ ನೇಮಕಗೊಂಡಿದ್ದ ಮೊದಲ ಮಹಿಳೆಯಾಗಿದ್ದರು.
ಮಲಿಕ್ ಅವರು ಇಂಗ್ಲಿಷ್ ಸಾಹಿತ್ಯವನ್ನು ಓದುತ್ತಾರೆ, ಶಾಸ್ತ್ರೀಯ ನೃತ್ಯಾಭಾಸವನ್ನು ಮಾಡುತ್ತಾರೆ. ಇಂಗ್ಲೀಷ್, ಫ್ರೆಂಚ್, ಹಿಂದಿ, ಉರ್ದು ಮತ್ತು ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು.
ನಗ್ಮಾ ಮುಹಮ್ಮದ್ ಮಲಿಕ್, ಕಾಸರಗೋಡಿನ ಫೋರ್ಟ್ ರೋಡ್ನಲ್ಲಿ ವಾಸವಾಗಿದ್ದ ದಿವಂಗತ ಮುಹಮ್ಮದ್ ಹಬೀಬುಲ್ಲಾ ಮತ್ತು ಝುಲು ಬಾನು ದಂಪತಿಯ ಪುತ್ರಿ.
ಹಬೀಬುಲ್ಲಾ ಅವರು ಕೇಂದ್ರ ಸರಕಾರದ ಸಾಗರೋತ್ತರ ಸಂವಹನ ಇಲಾಖೆಯಲ್ಲಿ ಕೆಲಸಕ್ಕೆ ನಿಯುಕ್ತಿಗೊಂಡ ಬಳಿಕ ಕುಟುಂಬ ಸಮೇತ ಕಾಸರಗೋಡಿನಿಂದ ದಿಲ್ಲಿಗೆ ತೆರಳಿದ್ದರು. ನಗ್ಮಾ ಹುಟ್ಟಿ ಬೆಳೆದಿದ್ದು ದಿಲ್ಲಿಯಲ್ಲಿ. ಸೈಂಟ್ ಸ್ಟೀಫನ್ಸ್ ಕಾಲೇಜು ಮತ್ತು ದಿಲ್ಲಿಯ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಅಧ್ಯಯನ ಮಾಡಿದ ಅವರು, ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಮತ್ತು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
1991ರಲ್ಲಿ ವಿದೇಶಾಂಗ ಇಲಾಖೆಯಲ್ಲಿ ರಾಜತಾಂತ್ರಿಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಪ್ಯಾರಿಸ್ ನ ಯುನೆಸ್ಕೋ ಭಾರತೀಯ ಮಿಷನ್ ಗೆ ಮೊದಲ ನಿಯೋಜನೆಗೊಂಡ ನಂತರ ಅವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದರು.
ಪ್ರಧಾನಿಗಳಾದ ಐ.ಕೆ. ಗುಜ್ರಾಲ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಕಚೇರಿಯಲ್ಲಿ ಕಾರ್ಯನಿರ್ವಹಿಸಿದ್ದರು. ವಿದೇಶಾಂಗ ಇಲಾಖೆಯ ಶಿಷ್ಟಾಚಾರ ವಿಭಾಗದ ಉಪ ಮುಖ್ಯಸ್ಥೆಯಾದ ದೇಶದ ಪ್ರಪ್ರಥಮ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಯೂ ಇವರಿಗಿದೆ.
ನಗ್ಮಾ ಅವರು ಖ್ಯಾತ ಸಾಹಿತಿ ದಿವಂಗತ ಸಾರಾ ಅಬೂಬಕ್ಕರ್ ಅವರ ಅಣ್ಣನ ಪುತ್ರಿಯೂ ಆಗಿದ್ದಾರೆ.







