ರಾತ್ರಿ ವೇಳೆ ಅಪರಿಚಿತ ಮಹಿಳೆಗೆ ʼನೀವು ತೆಳ್ಳಗಿದ್ದೀರಿ, ನನಗೆ ಇಷ್ಟʼ ಎಂದು ಸಂದೇಶ ಕಳುಹಿಸುವುದು ಅಶ್ಲೀಲತೆಗೆ ಸಮಾನ: ಮುಂಬೈ ನ್ಯಾಯಾಲಯ

ಸಾಂದರ್ಭಿಕ ಚಿತ್ರ
ಮುಂಬೈ: ರಾತ್ರಿ ವೇಳೆ ಅಪರಿಚಿತ ಮಹಿಳೆಗೆ ʼನೀವು ತೆಳ್ಳಗಿದ್ದೀರಿ, ತುಂಬಾ ಸ್ಮಾರ್ಟ್ ಮತ್ತು ಫೇರ್ ಆಗಿ ಕಾಣುತ್ತಿದ್ದೀರಿ, ಸುಂದರವಾಗಿ ಕಾಣುತ್ತಿದ್ದೀರಿ, ನನಗೆ ನೀವು ಇಷ್ಟʼ ಎಂಬಂತಹ ಸಂದೇಶಗಳನ್ನು ಕಳುಹಿಸುವುದು ಅಶ್ಲೀಲವಾಗಿದೆ ಎಂದು ಮುಂಬೈನ ದಿಂಡೋಶಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಮಾಜಿ ಕಾರ್ಪೊರೇಟರ್ ಓರ್ವರಿಗೆ ವಾಟ್ಸಾಪ್ನಲ್ಲಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯ ಶಿಕ್ಷೆಯನ್ನು ಎತ್ತಿಹಿಡಿಯುವಾಗ ದಿಂಡೋಶಿ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಡಿ ಜಿ ಧೋಬ್ಲೆ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ʼದೂರುದಾರರಿಗೆ ರಾತ್ರಿ 11 ರಿಂದ 12.30ರ ನಡುವೆ ಪೋಟೊಗಳು ಮತ್ತು ಸಂದೇಶಗಳನ್ನು ಕಳುಹಿಸಲಾಗಿದೆ ಎಂದು ನ್ಯಾಯಾಲಯ ಗಮನಿಸಿದೆ. ನೀವು ತೆಳ್ಳಗಿದ್ದೀರಿ, ನೀವು ತುಂಬಾ ಸ್ಮಾರ್ಟ್ ಆಗಿ ಕಾಣುತ್ತಿದ್ದೀರಿ, ನೀವು ಸುಂದರವಾಗಿದ್ದೀರಿ, ನನ್ನ ವಯಸ್ಸು 40 ವರ್ಷ, ನೀವು ಮದುವೆಯಾಗಿದ್ದೀರಾ ಅಥವಾ ಇಲ್ಲವೇ?, ನಾನು ನಿಮ್ಮನ್ನು ಇಷ್ಟಪಡುತ್ತೇನೆʼ ಎಂಬಂತಹ ಸಂದೇಶ ಕಳಹಿಸಿರುವುದನ್ನು ನ್ಯಾಯಾಲಯ ಗಮನಿಸಿದೆ.
ಯಾವುದೇ ವಿವಾಹಿತ ಮಹಿಳೆ ಅಥವಾ ಅವರ ಪತಿ ಅಂತಹ ವಾಟ್ಸಾಪ್ ಸಂದೇಶಗಳು ಮತ್ತು ಅಶ್ಲೀಲ ಫೋಟೋಗಳನ್ನು ಸಹಿಸುವುದಿಲ್ಲ, ಅದರಲ್ಲೂ ವಿಶೇಷವಾಗಿ ದೂರುದಾರರು ಮತ್ತು ಸಂದೇಶ ಕಳಹಿಸಿದವರು ಅಪರಿಚಿತರಾಗಿದ್ದಾಗ ಇದು ಸಾಧ್ಯವೇ ಇಲ್ಲ. ಇಂತಹ ಸಂದೇಶಗಳು ಮಹಿಳೆಯ ಘನತೆಗೆ ಧಕ್ಕೆ ಉಂಟು ಮಾಡುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಇದಕ್ಕೆ ಮೊದಲು 2022ರಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆರೋಪಿಯನ್ನು ದೋಷಿ ಎಂದು ಘೋಷಿಸಿ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿತು. ನಂತರ ಅವರು ಈ ನಿರ್ಧಾರವನ್ನು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ರಾಜಕೀಯ ದ್ವೇಷದ ಕಾರಣದಿಂದಾಗಿ ಪ್ರಕರಣದಲ್ಲಿ ನನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಆರೋಪಿ ಹೇಳಿಕೊಂಡಿದ್ದಾನೆ.
ಆರೋಪಿಯು ಮಹಿಳೆಗೆ ಅಶ್ಲೀಲ ವಾಟ್ಸಾಪ್ ಸಂದೇಶಗಳು ಮತ್ತು ಪೋಟೊಗಳನ್ನು ಕಳುಹಿಸಿದ್ದಾನೆ ಎಂದು ಪ್ರಾಸಿಕ್ಯೂಷನ್ ಸಾಬೀತುಪಡಿಸಿದೆ ಎಂದು ನ್ಯಾಯಾಲಯ ಹೇಳಿದೆ. ಆದ್ದರಿಂದ, ಆರೋಪಿಯನ್ನು ವಿಚಾರಣಾ ನ್ಯಾಯಾಲಯ ಅಪರಾಧಿ ಎಂದು ಘೋಷಿಸಿದೆ ಎಂದು ಸೆಷನ್ಸ್ ನ್ಯಾಯಾಧೀಶರು ಗಮನಿಸಿದರು.







