ಯಾವುದೇ ಮಗುವಿಗೆ ಪಾಲಕರ ವಾತ್ಸಲ್ಯವನ್ನು ನಿರಾಕರಿಸುವಂತಿಲ್ಲ: ಮುಂಬೈ ಕೋರ್ಟ್

ಮುಂಬೈ ಕೋರ್ಟ್ | PTI
ಮುಂಬೈ,ಆ.17: ಏಳು ವರ್ಷದ ಮಗುವಿಗೆ ಅದರ ನೈಸರ್ಗಿಕ ಪಾಲಕರ ವಾತ್ಸಲ್ಯ ಲಭಿಸುವುದನ್ನು ನಿರಾಕರಿಸಲು ಸಾಧ್ಯವಿಲ್ಲವೆಂದು ಸ್ಥಳೀಯ ನ್ಯಾಯಾಲಯವೊಂದು ಪ್ರತಿಪಾದಿಸಿದೆ. ಇನ್ನೊಂದು ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳನ್ನು ಅಪಹರಿಸಿದ ಆರೋಪದಲ್ಲಿ ಬಂಧಿತಳಾಗಿರುವ ಮಹಿಳೆಗೆ ಜಾಮೀನು ನೀಡಿದ ಸಂದರ್ಭ ಅದು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಆರೋಪಿ ಮಹಿಳೆಗೆ ಏಳು ವರ್ಷದ ಹೆಣ್ಣು ಮಗುವಿದೆ. ತಾಯಿಯ ಬಂಧನವಾದಾಗಿನಿಂದ ಈ ಪುಟ್ಟ ಬಾಲಕಿಯನ್ನು ಮುಂಬೈನ ಅಂಧೇರಿಯಲ್ಲಿರುವ ಬಾಲಭವನದಲ್ಲಿ ಇರಿಸಲಾಗಿದೆ.
2013ರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳನ್ನು ಈ ಮಹಿಳೆ ಹಾಗೂ ಆಕೆಯ ಪತಿ ಅಪಹರಿಸಿದ್ದರೆನ್ನಲಾಗಿದೆ. ಸುಮಾರು ಒಂದು ದಶಕದ ಬಳಿಕ 2022ರಲ್ಲಿ ಮಗು ಪತ್ತೆಯಾಗಿದ್ದು, ಪೊಲೀಸರು ಆರೋಪಿ ದಂಪತಿಯನ್ನು ಬಂಧಿಸಿದ್ದರು.
ಕಳೆದ ವಾರ ಆರೋಪಿ ಮಹಿಳೆಗೆ , ದಿಂಡೋಶಿ ನ್ಯಾಯಾಲಯದ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶರಾದ ಎಸ್.ಎಂ. ತಕಾಲಿಕರ್ ಅವರು ಜಾಮೀನು ನೀಡಿದ ಸಂದರ್ಭದಲ್ಲಿ, ಆರೋಪಿಗೆ 7 ವರ್ಷದ ಸ್ವಂತ ಹೆಣ್ಣು ಮಗುವಿದ್ದು, ಅದು ಮೂರು ವರ್ಷಗಳಿಂದ ಹೆತ್ತವರನ್ನು ಭೇಟಿಯಾಗದೆ ಇರುವುದನ್ನು ಗಮನಕ್ಕೆ ತೆಗೆದುಕೊಂಡರು. ‘‘ ಮಗುವನ್ನು ಬಾಲಭವನದಲ್ಲಿ ದಾಖಲಿಸಲಾಗಿದ್ದು, ಅದು ಆಕೆಯ ಪಾಲನೆ ಹಾಗೂ ರಕ್ಷಣೆಯನ್ನು ಮಾಡುತ್ತಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಆದರೆ ಏಳು ವರ್ಷದ ಪ್ರಾಯದ ಮಗುವಿಗೆ ಅದರ ನೈಜ ಪಾಲಕರ ಪ್ರೀತಿ ದೊರೆಯುವುದನ್ನು ನಿರಾಕರಿಸಲು ಸಾಧ್ಯವಿಲ್ಲ ’’ಎಂದು ನ್ಯಾಯಾಧೀಶರು ಅಭಿಪ್ರಾಯಿಸಿದರು.
ಕಳೆದ ಮೂರು ವರ್ಷೆಗಳಿಂದ ಆರೋಪಿ ಮಹಿಳೆಯು ನ್ಯಾಯಾಲಯದಲ್ಲಿ ವಿಚಾರಣೆಯಿಲ್ಲದೆ ಜೈಲಿನಲ್ಲೇ ಇದ್ದುದರಿಂದ, ಆಕೆಯು ಮಗುವಿನ ಸಾಂಗತ್ಯದಿಂದ ವಂಚಿತಳಾಗಿದ್ದಾಳೆ ಎಂದು ನ್ಯಾಯಾಲಯ ಹೇಳಿದೆ.
2013ರ ಜನವರಿ 22ರಂದು ಮಹಿಳೆಯೊಬ್ಬರು, ತನ್ನ ಏಳು ವರ್ಷದ ಮಗುವೊಂದು ಶಾಲೆಯಿಂದ ಮನೆಗೆ ಬರುತ್ತಿದ್ದಾಗ ಕಾಣೆಯಾಗಿದ್ದಾಳೆಂದು ಮುಂಬೈಯ ಡಿ.ಎನ್.ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಸುಮಾರು ಹತ್ತು ವರ್ಷಗಳ ಕಾಲ ಮಗುವಿನ ಸುಳಿವೇ ಲಭ್ಯವಾಗಿರಲಿಲ್ಲ.
2022ರ ಆಗಸ್ಟ್ 3ರಂದು, ಕಾಣೆಯಾದ ಮಗುವಿನ ತಾಯಿಯ ನೆರೆಮನೆಯವರೊಬ್ಬರಿಗೆ ಮಹಿಳೆಯಿಂದ ವೀಡಿಯೊ ಕರೆ ಬಂದಿದ್ದು, ಅದರಲ್ಲಿ ನಾಪತ್ತೆಯಾದ ಬಾಲಕಿಯನ್ನು ತೋರಿಸಲಾಗಿತ್ತು. ನೆರೆಮನೆಯಾತ ಮಗುವನ್ನು ಗುರುತಿಸಿದ್ದು, ಅದರಂತೆ ಪೊಲೀಸರು ಆರೋಪಿಗಳ ಮನೆಯಿರುವ ಸ್ಥಳವನ್ನು ಪತ್ತೆಹಚ್ಚಿ, ಅವರನ್ನು ಬಂಧಿಸಿದ್ದರು ಮತ್ತು ಬಾಲಕಿಯನ್ನು ರಕ್ಷಿಸಿದ್ದರು.







