Mumbai | ಬಿಜೆಪಿ ಆಕ್ಷೇಪಕ್ಕೆ ಮಣಿದು ದಿಯಾ ಮಿರ್ಝಾ ಅವರ ಪಟಾಕಿ ವಿರೋಧಿ ಸಂದೇಶದ ವೀಡಿಯೊ ಡಿಲೀಟ್: ಹೈಕೋರ್ಟ್ ಆದೇಶಕ್ಕೂ ಬಗ್ಗದ ಬಿಎಂಸಿ!
ಗುರುವಾರದ ಗಡುವು ಮುಗಿದರೂ ಪಾಲಿಕೆಯಿಂದ ಕ್ರಮವಿಲ್ಲ

ದಿಯಾ ಮಿರ್ಝಾ Photo: x.com/ANI
ಮುಂಬೈ, ನ. 6: ದೀಪಾವಳಿಗೆ ಪಟಾಕಿ ಸಿಡಿಸದಂತೆ ಜನರಲ್ಲಿ ಮನವಿ ಮಾಡಿದ್ದ ನಟಿ ದಿಯಾ ಮಿರ್ಝಾ ಅವರ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಹಾಕಿದ್ದ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ), ಬಾಂಬೆ ಹೈಕೋರ್ಟ್ ಆದೇಶದ ಬಳಿಕವೂ ಅದನ್ನು ಮರುಪ್ರಕಟಿಸಿಲ್ಲ. ಗುರುವಾರ ಸಂಜೆಯೊಳಗೆ ವಿಡಿಯೊವನ್ನು ಮತ್ತೆ ಅಪ್ಲೋಡ್ ಮಾಡುವಂತೆ ನ್ಯಾಯಾಲಯ ಸೂಚಿಸಿದ್ದರೂ ಪಾಲಿಕೆ ಇನ್ನೂ ಕ್ರಮ ಕೈಗೊಂಡಿಲ್ಲ.
ಮುಂಬೈ ಬಿಜೆಪಿ ಅಧ್ಯಕ್ಷ ಅಮಿತ್ ಸತಮ್ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಬಿಎಂಸಿ ರವಿವಾರ ರಾತ್ರಿ ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಿಂದ ವಿಡಿಯೊವನ್ನು ತೆಗೆದುಹಾಕಿತ್ತು. ಪಾಲಿಕೆಯ ಈ ನಿರ್ಧಾರವನ್ನು ಮೇಯರ್ ರಿತು ತಾವ್ಡೆ ಸಮರ್ಥಿಸಿಕೊಂಡಿದ್ದರು. ಅಲ್ಲದೆ, ದಿಯಾ ಮಿರ್ಝಾ ಅವರನ್ನು 'ಹಿಂದೂ ವಿರೋಧಿ' ಎಂದು ಹೇಳಿದ್ದರು.
ರಾಜಕೀಯ ಆಕ್ಷೇಪಕ್ಕೆ ಕೋರ್ಟ್ ಕಿಡಿ
ವಿಡಿಯೊ ತೆಗೆದುಹಾಕಿರುವುದಕ್ಕೆ ಸಂಬಂಧಿಸಿದಂತೆ ರಾಜಕೀಯ ಆಕ್ಷೇಪಣೆಗಳ ಬಗ್ಗೆ ತೀವ್ರ ನೋವು ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದ ಬಾಂಬೆ ಹೈಕೋರ್ಟ್, ಮಂಗಳವಾರ ಅದನ್ನು ಮರುಸ್ಥಾಪಿಸುವಂತೆ ಬಿಎಂಸಿಗೆ ಆದೇಶಿಸಿತ್ತು. ಗುರುವಾರ ಸಂಜೆಯೊಳಗೆ ಮರು ಅಪ್ಲೋಡ್ ಮಾಡುವಂತೆಯೂ ನಿರ್ದೇಶನ ನೀಡಿತ್ತು.
ಪರಿಸರ ಸಂರಕ್ಷಣೆ ಹಾಗೂ ವಾಯು ಮತ್ತು ಶಬ್ದ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದ ವಿಡಿಯೊಗೆ ರಾಜಕೀಯ ಬಣ್ಣ ಬಳಿಯಲು ಪ್ರಯತ್ನಿಸಿರುವುದು ಅತ್ಯಂತ ದುರದೃಷ್ಟಕರ ಎಂದು ನ್ಯಾಯಾಲಯ ಹೇಳಿತ್ತು. ಕೆಲವು ವ್ಯಕ್ತಿಗಳ, ಅದರಲ್ಲೂ ವಿಶೇಷವಾಗಿ ಜನಪ್ರತಿನಿಧಿಗಳ 'ಸಂಕೀರ್ಣ ಮನಸ್ಥಿತಿ'ಯ ಬಗ್ಗೆಯೂ ತೀವ್ರ ಬೇಸರ ವ್ಯಕ್ತಪಡಿಸಿತ್ತು. ಪ್ರತಿಯೊಬ್ಬ ನಾಗರಿಕನೂ ಜಾತ್ಯತೀತ ಮನೋಭಾವ ಬೆಳೆಸಿಕೊಳ್ಳಬೇಕು ಎಂಬುದು ಸಂವಿಧಾನದ ನಿರೀಕ್ಷೆ ಎಂದು ಒತ್ತಿಹೇಳಿತ್ತು.
ವಿಡಿಯೊವನ್ನು ಮತ್ತೆ ಪ್ರಕಟಿಸುವ ಕುರಿತು ಅಂತಿಮ ನಿರ್ಧಾರವನ್ನು ಮುನ್ಸಿಪಲ್ ಆಯುಕ್ತೆ ಅಶ್ವಿನಿ ಭಿಡೆ ತೆಗೆದುಕೊಳ್ಳಲಿದ್ದಾರೆ ಎಂದು ಬಿಎಂಸಿ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. ನ್ಯಾಯಾಲಯದ ಆದೇಶವನ್ನು ಪರಿಶೀಲಿಸುವ ಪ್ರಕ್ರಿಯೆಯಿಂದಾಗಿ ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಅಶ್ವಿನಿ ಭಿಡೆ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿಡಿಯೊ ಮರುಸ್ಥಾಪನೆಗೆ ಯಾವುದೇ ನಿರ್ದಿಷ್ಟ ಕಾಲಮಿತಿಯನ್ನೂ ಪ್ರಕಟಿಸಿಲ್ಲ.
ಪರಿಸರ ಸ್ನೇಹಿ ದೀಪಾವಳಿ ಅಭಿಯಾನದ ವಿಡಿಯೊ
ಪಟಾಕಿಗಳಿಂದ ಉಂಟಾಗುವ ವಾಯು ಮತ್ತು ಶಬ್ದ ಮಾಲಿನ್ಯ ತಡೆಯುವಂತೆ ಬಾಂಬೆ ಹೈಕೋರ್ಟ್ ನೀಡಿದ್ದ ನಿರ್ದೇಶನಗಳ ಹಿನ್ನೆಲೆಯಲ್ಲಿ ಬಿಎಂಸಿ 'ಪರಿಸರ ಸ್ನೇಹಿ ದೀಪಾವಳಿ' ಅಭಿಯಾನ ಆರಂಭಿಸಿತ್ತು. ದಿಯಾ ಮಿರ್ಝಾ ಅವರ ವಿಡಿಯೊ ಈ ಅಭಿಯಾನದ ಭಾಗವಾಗಿತ್ತು.
ಆದರೆ, ದಿಯಾ ಮಿರ್ಝಾ ಅವರ ವಿಡಿಯೊವನ್ನು ಮಾತ್ರ ತೆಗೆದುಹಾಕಲಾಗಿದ್ದು, ನಟಿಯರಾದ ಮಾಧುರಿ ದೀಕ್ಷಿತ್, ನಿಶಿಗಂಧ ವಾಡ್ ಮತ್ತು ಕ್ರಿಕೆಟಿಗ ಅಜಿಂಕ್ಯ ರಹಾನೆ ಅವರ ವಿಡಿಯೊಗಳು ಬಿಎಂಸಿಯ 'ಎಕ್ಸ್' ಮತ್ತು ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ಇನ್ನೂ ಲಭ್ಯವಿವೆ.
ದಿಯಾ ಮಿರ್ಝಾ ಅವರು 2017ರಲ್ಲಿ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (UNEP) ಭಾರತದ ಸದ್ಭಾವನಾ ರಾಯಭಾರಿಯಾಗಿ ನೇಮಕಗೊಂಡಿದ್ದರು. 2019ರಲ್ಲಿ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳ (SDG) ಪ್ರತಿಪಾದಕಿಯಾಗಿಯೂ ನೇಮಕಗೊಂಡಿದ್ದರು. ಪರಿಸರ ಸಂರಕ್ಷಣೆ, ಹವಾಮಾನ ಬದಲಾವಣೆ, ವನ್ಯಜೀವಿ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಮಾಲಿನ್ಯ ತಡೆಗೆ ಸಂಬಂಧಿಸಿದ ಅಭಿಯಾನಗಳಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.






