ಮುಂಬೈ | 17 ಮಕ್ಕಳನ್ನು ಒತ್ತೆಯಿಟ್ಟಿದ್ದ ಪ್ರಕರಣ : ಪೊಲೀಸರೊಂದಿಗಿನ ಘರ್ಷಣೆಯಲ್ಲಿ ಆರೋಪಿ ಮೃತ್ಯು

Photo | indiatoday
ಮುಂಬೈ: 17 ಮಕ್ಕಳನ್ನು ಒತ್ತೆಯಾಳಾಗಿಸಿಕೊಂಡಿದ್ದ ರೋಹಿತ್ ಆರ್ಯ ಎಂಬ ಆರೋಪಿಯು ಗುರುವಾರ ಮುಂಬೈನ ಪೊವೈ ಪ್ರದೇಶದಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದಾನೆ.
ಮಕ್ಕಳ ರಕ್ಷಣಾ ಕಾರ್ಯಾಚರಣೆಯ ವೇಳೆ, ಆರೋಪಿ ರೋಹಿತ್ ಆರ್ಯ ಪೊಲೀಸರತ್ತ ಏರ್ ಗನ್ ನಿಂದ ಗುಂಡು ಹಾರಿಸಿದ್ದಾನೆ. ಇದಕ್ಕೆ ಪ್ರತಿಯಾಗಿ, ಪೊಲೀಸರೂ ಕೂಡ ಆತನತ್ತ ಒಂದು ಸುತ್ತಿನ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿದ್ದ ಆರೋಪಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಆರೋಪಿ ರೋಹಿತ್ ಆರ್ಯ, ಮಕ್ಕಳ ಗುಂಪೊಂದಕ್ಕೆ ಆಡಿಷನ್ ಆಮಿಷವೊಡ್ಡಿ ಆರ್ಐ ಸ್ಟುಡಿಯೋಸ್ ಎಂಬ ಪುಟ್ಟ ಸಿನಿಮಾ ಸ್ಟುಡಿಯೊದಲ್ಲಿ ಕೂಡಿ ಹಾಕಿದ್ದ. ರೋಹಿತ್ ಆರ್ಯ ಹಲವಾರು ಗಂಟೆಗಳ ಕಾಲ ಒತ್ತೆಯಾಳಾಗಿರಿಸಿಕೊಂಡಿದ್ದ 14-18 ವರ್ಷ ವಯಸ್ಸಿನೊಳಗಿನ ಮಕ್ಕಳನ್ನು ಪೊಲೀಸರು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಮಧ್ಯಾಹ್ನ ಸುಮಾರು 1.45ರ ವೇಳೆಗೆ ಪೊವೈ ಪೊಲೀಸ್ ಠಾಣೆಯ ಪೊಲೀಸರು ಈ ಒತ್ತೆಯಾಳು ಪ್ರಕರಣದ ಕುರಿತು ಮಾಹಿತಿ ಸ್ವೀಕರಿಸಿದರು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರ ತಂಡ ಆರೋಪಿಯೊಂದಿಗೆ ಸಂಧಾನದ ಮಾತುಕತೆ ಪ್ರಾರಂಭಿಸಿದರು. ಆದರೆ, ಆತ ಮಕ್ಕಳನ್ನು ಬಿಡುಗಡೆಗೊಳಿಸಲು ನಿರಾಕರಿಸಿ, ಅವರಿಗೆ ಅಪಾಯವನ್ನುಂಟು ಮಾಡುವುದಾಗಿ ಬೆದರಿಕೆ ವೊಡ್ಡಿದ. ಬಳಿಕ ಪೊಲೀಸರ ತಂಡವೊಂದು ಸ್ನಾನ ಗೃಹದ ಮೂಲಕ ಬಲವಂತವಾಗಿ ಸ್ಟುಡಿಯೊದೊಳಗೆ ಪ್ರವೇಶಿಸಿ, ಎಲ್ಲಾ 17 ಮಕ್ಕಳನ್ನೂ ಸುರಕ್ಷಿತವಾಗಿ ಪಾರು ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಗೂ ಮುನ್ನ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದ ರೋಹಿತ್ ಆರ್ಯ, “ಆತ್ಮಹತ್ಯೆ ಮಾಡಿಕೊಳ್ಳುವ ಬದಲು ನಾನು ಸರಿಯಾಗಿ ಯೋಜಿಸಿ, ಕೆಲವು ಮಕ್ಕಳನ್ನು ಒತ್ತೆ ಇರಿಸಿಕೊಂಡಿದ್ದೇನೆ. ನನ್ನಲ್ಲಿ ಹೆಚ್ಚೇನೂ ಬೇಡಿಕೆಗಳಿಲ್ಲ. ಕೆಲವು ಪ್ರಶ್ನೆಗಳಿವೆ. ಅವು ತುಂಬಾ ಸರಳವಾದ, ನೈತಿಕ ಮತ್ತು ಸೈದ್ಧಾಂತಿಕವಾದವು. ಕೆಲವರೊಂದಿಗೆ ಮಾತನಾಡಲು ಬಯಸುತ್ತೇನೆ. ಅದನ್ನು ಬಿಟ್ಟರೆ ನನಗೆ ಬೇರೇನೂ ಬೇಡ. ನಾನು ಭಯೋತ್ಪಾದಕನಲ್ಲ. ಹಣಕ್ಕಾಗಿ ಬೇಡಿಕೆ ಇಡುತ್ತಿಲ್ಲ. ನಿಮ್ಮ ಕಡೆಯಿಂದ ಒಂದೇ ಒಂದು ತಪ್ಪಾದರೂ, ಎಲ್ಲರಿಗೂ ತೊಂದರೆ ಮಾಡಿ, ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ" ಎಂದು ಹೇಳಿದ್ದಾನೆ.







