ಮುಂಬೈ ಹೈರಾಕ್ಸ್ ಫಿಟ್ನೆಸ್ ರೇಸ್ ಪೂರ್ಣಗೊಳಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ
ಅಂತರರಾಷ್ಟ್ರೀಯ ಪವರ್ಲಿಫ್ಟರ್ ಪ್ರದೀಪ್ ಕುಮಾರ್ ಜತೆಗೂಡಿ 1 ಗಂಟೆ 39 ನಿಮಿಷಗಳಲ್ಲಿ ಗುರಿ ತಲುಪಿದ ಡಿಸಿ

ದರ್ಶನ್ ಎಚ್.ವಿ | ಪ್ರದೀಪ್ ಕುಮಾರ್ ಆಚಾರ್ಯ Photo: screengrab/instagram.com/itsmangalore/
ಮುಂಬೈ: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಮತ್ತು ಮಂಗಳೂರಿನ ಫಿಟ್ನೆಸ್ ತರಬೇತುದಾರ ಪ್ರದೀಪ್ ಕುಮಾರ್ ಆಚಾರ್ಯ ಮುಂಬೈನಲ್ಲಿ ನಡೆದ ಜಾಗತಿಕ ಮಟ್ಟದ 'ಹೈರಾಕ್ಸ್' (HYROX) ಫಿಟ್ನೆಸ್ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಮುಂಬೈನ ಗೋರೆಗಾಂವ್ ನಲ್ಲಿರುವ ನೆಸ್ಕೋ ಕೇಂದ್ರದ ಹಾಲ್ 6ರಲ್ಲಿ ಆಯೋಜಿಸಲಾಗಿದ್ದ ಈ ಕ್ರೀಡಾಕೂಟದಲ್ಲಿ, ಮಾಸ್ಟರ್ಸ್ ಯೂನಿಯನ್ ವಿಶ್ವವಿದ್ಯಾಲಯವು ಅಧಿಕೃತ ಪಾಲುದಾರನಾಗಿ ಸಹಕರಿಸಿದೆ. ಸೆಪ್ಟೆಂಬರ್ 17ರಿಂದ 20ರವರೆಗೆ ನಡೆದ ಈ ಸ್ಪರ್ಧೆಯ ಪುರುಷರ ಡಬಲ್ಸ್ ವಿಭಾಗದಲ್ಲಿ ಇವರು ಕಣಕ್ಕಿಳಿದಿದ್ದರು.
ತಮ್ಮ ಕಠಿಣ ಆಡಳಿತಾತ್ಮಕ ಮತ್ತು ಸಾರ್ವಜನಿಕ ಸೇವಾ ಜವಾಬ್ದಾರಿಗಳ ನಡುವೆಯೂ ಸಮಯಾವಕಾಶ ಮಾಡಿಕೊಂಡ ಐಎಎಸ್ ಅಧಿಕಾರಿ ದರ್ಶನ್ ಎಚ್.ವಿ ಅವರು, ಅಂತರರಾಷ್ಟ್ರೀಯ ಪವರ್ಲಿಫ್ಟರ್ ಹಾಗೂ 'ಕಾಷಾರ್ಪ್ ಫಿಟ್ನೆಸ್' ಸಂಸ್ಥೆಯ ಪ್ರದೀಪ್ ಕುಮಾರ್ ಆಚಾರ್ಯ ಅವರೊಂದಿಗೆ ಕೈಜೋಡಿಸಿ ಈ ಸಾಧನೆ ಮಾಡಿದ್ದಾರೆ. ಈ ಇಬ್ಬರ ಜೋಡಿಯು ಒಟ್ಟು 8 ಕಿಲೋಮೀಟರ್ ಓಟ ಹಾಗೂ 8 ಕಠಿಣ ವ್ಯಾಯಾಮಗಳನ್ನು ಒಳಗೊಂಡ ಸಂಪೂರ್ಣ ರೇಸ್ ಅನ್ನು ಕೇವಲ 1 ಗಂಟೆ, 39 ನಿಮಿಷ ಮತ್ತು 9 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಯಶಸ್ವಿಯಾಗಿ ಮುಗಿಸಿದೆ.
ಹೈರಾಕ್ಸ್ ಎನ್ನುವುದು ಜಾಗತಿಕವಾಗಿ ಅತ್ಯಂತ ಜನಪ್ರಿಯತೆ ಗಳಿಸಿರುವ ಒಳಾಂಗಣ ಫಿಟ್ನೆಸ್ ರೇಸ್ ಆಗಿದೆ. ಇದನ್ನು 2017ರಲ್ಲಿ ಜರ್ಮನಿಯಲ್ಲಿ ಆರಂಭಿಸಲಾಯಿತು. ಪ್ರಪಂಚದ ಯಾವುದೇ ಮೂಲೆಯಲ್ಲಿ ಅಥವಾ ನಗರದಲ್ಲಿ ಈ ಸ್ಪರ್ಧೆ ನಡೆದರೂ, ಇದರ ನಿಯಮಗಳು, ದೂರ ಮತ್ತು ವ್ಯಾಯಾಮದ ಸ್ವರೂಪ ಎಲ್ಲಿಯೂ ಬದಲಾಗದೆ ಒಂದೇ ರೀತಿಯಾಗಿರುತ್ತವೆ. ಇದು ಕೇವಲ ವೇಗದ ಓಟದ ಸ್ಪರ್ಧೆಯಲ್ಲದೆ, ಪ್ರತಿಯೊಬ್ಬರ ಸಹಿಷ್ಣುತೆ, ದೈಹಿಕ ಶಕ್ತಿ, ಸ್ಟ್ಯಾಮಿನಾ ಮತ್ತು ತಂಡದ ಒಗ್ಗಟ್ಟನ್ನು ಕಠಿಣವಾಗಿ ಪರೀಕ್ಷಿಸುತ್ತದೆ.
ಈ ಸಂಪೂರ್ಣ ಸ್ಪರ್ಧೆಯು ನಿಗದಿತ ಮಾದರಿಯಲ್ಲಿ ನಡೆಯುತ್ತದೆ. ಸ್ಪರ್ಧಿಗಳು ಒಟ್ಟು 8 ಕಿಲೋಮೀಟರ್ ಓಡಬೇಕಾಗುತ್ತದೆ. ಇದರ ವಿಶೇಷತೆಯೆಂದರೆ, ಪ್ರತಿ 1 ಕಿಲೋಮೀಟರ್ ಓಟ ಮುಗಿದ ತಕ್ಷಣ ಒಂದು ನಿಗದಿತ ಫಂಕ್ಷನಲ್ ವ್ಯಾಯಾಮದ ಕೇಂದ್ರಕ್ಕೆ ತೆರಳಿ ಅಲ್ಲಿ ವರ್ಕೌಟ್ ಪೂರ್ಣಗೊಳಿಸಬೇಕು. ಹೀಗೆ ಒಟ್ಟು 8 ಕಿಲೋಮೀಟರ್ ಓಟ ಹಾಗೂ 8 ವಿವಿಧ ವ್ಯಾಯಾಮ ಕೇಂದ್ರಗಳ ಸರಣಿಯನ್ನು ಪೂರ್ಣಗೊಳಿಸಬೇಕಾಗುತ್ತದೆ.
ಹೈರಾಕ್ಸ್ ಸ್ಪರ್ಧೆಯಲ್ಲಿ ಪ್ರಮುಖವಾಗಿ 8 ವ್ಯಾಯಾಮ ಕೇಂದ್ರಗಳು ಇರುತ್ತವೆ. ಮೊದಲನೆಯದು 1000 ಮೀಟರ್ ದೂರದ 'ಸ್ಕೀಎರ್ಗ್' (SkiErg), ಎರಡನೆಯದು 50 ಮೀಟರ್ 'ಸ್ಲೆಡ್ ಪುಶ್' (ಭಾರದ ಬಂಡಿಯನ್ನು ತಳ್ಳುವುದು), ಮೂರನೆಯದು 50 ಮೀಟರ್ 'ಸ್ಲೆಡ್ ಪುಲ್' (ಭಾರದ ಬಂಡಿಯನ್ನು ಹಗ್ಗದಿಂದ ಎಳೆಯುವುದು), ನಾಲ್ಕನೆಯದು 80 ಮೀಟರ್ 'ಬರ್ಪೀ ಬ್ರಾಡ್ ಜಂಪ್ಸ್' (ನೆಲದ ಮೇಲೆ ಮಲಗಿ ಜಿಗಿಯುವುದು), ಐದನೆಯದು 1000 ಮೀಟರ್ 'ರೋಯಿಂಗ್' (ದೋಣಿ ತುಳಿಯುವ ಯಂತ್ರದ ವ್ಯಾಯಾಮ), ಆರನೆಯದು 200 ಮೀಟರ್ 'ಫಾರ್ಮರ್ಸ್ ಕ್ಯಾರಿ' (ಕೈಗಳಲ್ಲಿ ಭಾರವಾದ ವಸ್ತುಗಳನ್ನು ಹಿಡಿದುಕೊಂಡು ನಡೆಸುವುದು), ಏಳನೆಯದು 100 ಮೀಟರ್ 'ಸ್ಯಾಂಡ್ಬ್ಯಾಗ್ ಲಂಜಸ್' (ಭುಜದ ಮೇಲೆ ಮರಳಿನ ಚೀಲ ಹೊತ್ತು ಹೆಜ್ಜೆ ಹಾಕುವುದು) ಹಾಗೂ ಎಂಟನೆಯದು 100 'ವಾಲ್ ಬಾಲ್ಸ್' (ಭಾರದ ಚೆಂಡನ್ನು ಗೋಡೆಗೆ ಎಸೆದು ಹಿಡಿಯುವುದು) ವ್ಯಾಯಾಮಗಳಾಗಿವೆ.
ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಸಿಂಗಲ್ಸ್ (ವೈಯಕ್ತಿಕ), ಡಬಲ್ಸ್ (ಜೋಡಿ) ಹಾಗೂ ರಿಲೇ (ನಾಲ್ವರ ತಂಡ) ಎಂಬ ವಿವಿಧ ವಿಭಾಗಗಳಿರುತ್ತವೆ. ದರ್ಶನ್ ಮತ್ತು ಪ್ರದೀಪ್ ಆಚಾರ್ಯ ಭಾಗವಹಿಸಿದ್ದ ಡಬಲ್ಸ್ ವಿಭಾಗದಲ್ಲಿ, ಇಬ್ಬರೂ ಸ್ಪರ್ಧಿಗಳು 8 ಕಿಲೋಮೀಟರ್ ಓಟವನ್ನು ಒಟ್ಟಾಗಿಯೇ ಪೂರ್ಣಗೊಳಿಸಬೇಕು. ಆದರೆ 8 ವ್ಯಾಯಾಮ ಕೇಂದ್ರಗಳಲ್ಲಿ ಮಾಡಬೇಕಾದ ಕೆಲಸ ಹಾಗೂ ತೂಕವನ್ನು ಪರಸ್ಪರ ಹಂಚಿಕೊಂಡು ಸಮಾನವಾಗಿ ನಿರ್ವಹಿಸಲು ಅವಕಾಶವಿರುತ್ತದೆ. ಪ್ರತಿಯೊಬ್ಬ ಸ್ಪರ್ಧಿಯ ಎದೆಗೆ ಅಥವಾ ಕಾಲಿಗೆ ಟೈಮಿಂಗ್ ಚಿಪ್ ಅಳವಡಿಸಲಾಗಿದ್ದು, ಮುಗಿಸಿದ ನಿಖರ ಸಮಯವನ್ನು ಜಾಗತಿಕ ಹೈರಾಕ್ಸ್ ಲೀಡರ್ಬೋರ್ಡ್ನಲ್ಲಿ ದಾಖಲಿಸಲಾಗುತ್ತದೆ.
ಈ ಜಾಗತಿಕ ಫಿಟ್ನೆಸ್ ರೇಸ್ನಲ್ಲಿ ಶೇಕಡಾ 99ರಷ್ಟು ಮಂದಿ ಯಶಸ್ವಿಯಾಗಿ ಗುರಿ ಮುಟ್ಟುತ್ತಾರೆ.






