'ಬೆನ್ನುಮೂಳೆಯಿಲ್ಲದ ಚಿತ್ರರಂಗವೇ, ಎಚ್ಚರಗೊಳ್ಳಿ'; ವಾಂಗ್ಚುಕ್, 20 ವಿದ್ಯಾರ್ಥಿಗಳ ಆತ್ಮಹತ್ಯೆ ವಿಚಾರದಲ್ಲಿ ಮೌನವಾಗಿರುವ ಬಾಲಿವುಡ್, ಟಿವಿ ನಟರ ವಿರುದ್ಧ ಮುನವ್ವರ್ ಫಾರೂಕಿ ವಾಗ್ದಾಳಿ

ಮುನಾವರ್ ಫಾರೂಕಿ(X \ @munawar0018) , ಸೋನಮ್ ವಾಂಗ್ಚುಕ್(PTI)
ಹೊಸದಿಲ್ಲಿ: ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹವನ್ನು ದಿಲ್ಲಿ ಪೊಲೀಸರು ಬಲವಂತವಾಗಿ ಕೊನೆಗೊಳಿಸಿದ ಬೆನ್ನಲ್ಲೇ, ಸ್ಟ್ಯಾಂಡ್ಅಪ್ ಕಮೇಡಿಯನ್ ಹಾಗೂ ರಿಯಾಲಿಟಿ ಶೋ ತಾರೆ ಮುನವ್ವರ್ ಫಾರೂಕಿ ಬಾಲಿವುಡ್ ಹಾಗೂ ಕಿರುತೆರೆ ಕ್ಷೇತ್ರದ ಕಲಾವಿದರ ಮೌನವನ್ನು ತೀವ್ರವಾಗಿ ಟೀಕಿಸಿದ್ದಾರೆ.
NEET UG ಪ್ರಶ್ನೆಪತ್ರಿಕೆ ಸೋರಿಕೆ, 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಹಾಗೂ ಈ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಚಿತ್ರರಂಗದ ಪ್ರಮುಖರು ಮೌನವಾಗಿರುವುದನ್ನು ಅವರು ಪ್ರಶ್ನಿಸಿದ್ದಾರೆ.
ಸೋನಮ್ ವಾಂಗ್ಚುಕ್ ಅವರು NEET-UG ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಣೆಗಾರಿಕೆ ನಿಗದಿಪಡಿಸಬೇಕು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಸುಮಾರು 20 ದಿನಗಳ ಕಾಲ ನಡೆದ ಉಪವಾಸ ಸತ್ಯಾಗ್ರಹವನ್ನು ಜುಲೈ 18ರಂದು ದೆಹಲಿ ಪೊಲೀಸರು ಜಂತರ್ ಮಂತರ್ನಿಂದ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಕೊನೆಗೊಳಿಸಿದರು.
ಈ ಬೆಳವಣಿಗೆಯ ಬಳಿಕ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪ್ರತಿಕ್ರಿಯಿಸಿದ ಮುನವ್ವರ್ ಫಾರೂಕಿ, "ಬೆನ್ನುಮೂಳೆಯಿಲ್ಲದ ಚಿತ್ರರಂಗವೇ, ಎಚ್ಚರಗೊಳ್ಳಿ. ನಿಮ್ಮ ಅಭಿಪ್ರಾಯವನ್ನು ಮುಚ್ಚುಮರೆ ಇಲ್ಲದೆ ವ್ಯಕ್ತಪಡಿಸಿ. ಮಾತನಾಡಿ!" ಎಂದು ಪೋಸ್ಟ್ ಮಾಡಿದ್ದಾರೆ.
ಅಲ್ಲದೆ, "ಇದು ದುಃಖದ ಸಮಯ. ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. 20 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಯಾರೂ ಜವಾಬ್ದಾರಿ ಹೊತ್ತಿಲ್ಲ. ನಿಜಕ್ಕೂ ಇದೇ ಪರಿಸ್ಥಿತಿಯೇ?" ಎಂದು ಪ್ರಶ್ನಿಸಿದ್ದಾರೆ.






