ಮುಸ್ಲಿಂ ಸಮುದಾಯ ವಕ್ಫ್ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿದೆ: ಅಸದುದ್ದೀನ್ ಉವೈಸಿ

ಅಸದುದ್ದೀನ್ ಉವೈಸಿ (Photo: PTI)
ಹೊಸದಿಲ್ಲಿ: ವಕ್ಫ್ ತಿದ್ದುಪಡಿ ಮಸೂದೆಯನ್ನು ಮುಸ್ಲಿಂ ಸಮುದಾಯ ತಿರಸ್ಕರಿಸಿದೆ. ಇದು ಸಾಮಾಜಿಕ ಅಸ್ಥಿರತೆಗೆ ಕಾರಣವಾಗಲಿದೆ ಎಂದು ಎಐಎಂಐಎಂ ನಾಯಕ ಅಸದುದ್ದೀನ್ ಉವೈಸಿ ಹೇಳಿದ್ದಾರೆ.
ಸೋಮವಾರ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಅವರು, ‘ಈ ಮಸೂದೆಯ ಅನುಷ್ಠಾನದಿಂದ ದೇಶವು 1980 ಮತ್ತು 1990 ರ ದಶಕದ ಆರಂಭಕ್ಕೆ ಹೋಗಲಿದೆ’ ಎಂದರು.
‘ವಕ್ಫ್ ತಿದ್ದುಪಡಿ ಮಸೂದೆಯನ್ನು ಜಾರಿಗೆ ತಂದರೆ ಸಂವಿಧಾನದ ವಿಧಿ 25,26, ಮತ್ತು 14ರ ಉಲ್ಲಂಘನೆಯಾಗುತ್ತದೆ. ಅದು ದೇಶದಲ್ಲಿ ಅಸ್ಥಿರತೆಗೆ ಕಾರಣವಾಗಲಿದೆ. ಮುಸ್ಲಿಂ ಸಮುದಾಯ ಯಾವುದೇ ವಕ್ಫ್ ಆಸ್ತಿಯನ್ನು ಬಿಟ್ಟುಕೊಡುವುದಿಲ್ಲ’ ಎಂದು ಅವರು ಹೇಳಿದರು.
‘ಸರಕಾರವು ವಿಕಸಿತ ಭಾರತ ಮಾಡಲು ಬಯಸುತ್ತಿದೆ. ಅದೇ ವೇಳೆ ಮಸೂದೆ ಮಂಡಿಸುವ ಮೂಲಕ ದೇಶವನ್ನು 80, 90ರ ದಶಕಕ್ಕೆ ಕೊಂಡೊಯ್ಯುವ ಪ್ರಯತ್ನವೂ ನಡೆಯುತ್ತಿದೆ. ಆದರೆ ಹೆಮ್ಮೆಯ ಭಾರತೀಯ ಮುಸಲ್ಮಾನನಾಗಿ ನಾನು ನನ್ನ ಮಸೀದಿಯ ಒಂದು ಇಂಚನ್ನು ಕಳೆದುಕೊಳ್ಳುವುದಿಲ್ಲ. ನನ್ನ ದರ್ಗಾದ ಒಂದು ಇಂಚು ಜಾಗವನ್ನೂ ಬಿಟ್ಟುಕೊಡುವುದಿಲ್ಲ. ನಾವು ಇನ್ನು ಮುಂದೆ ಇಲ್ಲಿ ರಾಜತಾಂತ್ರಿಕವಾಗಿ ಯಾವುದೇ ಮಾತುಕತೆ ನಡೆಸುವುದಿಲ್ಲ. ನಮ್ಮದು ಹೆಮ್ಮೆಯ ಭಾರತೀಯ ಸಮುದಾಯ. ಇದು ನನ್ನ ಆಸ್ತಿ, ಯಾರೂ ಕೊಟ್ಟಿದ್ದಲ್ಲ. ನೀವು ಅದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ’ ಎಂದು ಉವೈಸಿ ಹೇಳಿದರು.