ಉತ್ತರ ಪ್ರದೇಶ | ನೆಲದ ಮೇಲೆ ಬಿದ್ದಿದ್ದ ಪಾಕಿಸ್ತಾನ ಧ್ವಜವನ್ನು ಎತ್ತಿಕೊಳ್ಳಲು ಪ್ರಯತ್ನಿಸಿದ ಮುಸ್ಲಿಂ ವಿದ್ಯಾರ್ಥಿನಿಯ ವೀಡಿಯೊ ವೈರಲ್: ಶಾಲೆಯಿಂದ ಉಚ್ಛಾಟನೆ

ಸಾಂದರ್ಭಿಕ ಚಿತ್ರ | Photo : telegraphindia
ಲಕ್ನೊ: ಉತ್ತರ ಪ್ರದೇಶದ ಸಹರಣ್ಪುರ್ ಜಿಲ್ಲೆಯ ರಸ್ತೆಯೊಂದರ ಮೇಲೆ ಬಿದ್ದಿದ್ದ ಪಾಕಿಸ್ತಾನದ ಧ್ವಜವನ್ನು ಎತ್ತಿಕೊಳ್ಳಲು ಪ್ರಯತ್ನಿಸುತ್ತಿರುವ 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮುಸ್ಲಿಂ ವಿದ್ಯಾರ್ಥಿನಿಯ ವೀಡಿಯೊ ವೈರಲ್ ಆಗಿದ್ದು, ಇದರ ಬೆನ್ನಿಗೇ ಆಕೆಯನ್ನು ಶಾಲೆಯಿಂದ ಉಚ್ಛಾಟಿಸಿರುವ ಘಟನೆ ನಡೆದಿದೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ಸ್ಕೂಟಿಯಲ್ಲಿ ಬರುತ್ತಿದ್ದ ಬಾಲಕಿಯು, ನೆಲದಲ್ಲಿ ಹೂತುಕೊಂಡಿದ್ದ ಪಾಕಿಸ್ತಾನದ ಧ್ವಜವನ್ನು ಕಂಡು, ಅದನ್ನು ಕೈಗೆತ್ತಿಕೊಳ್ಳಲು ತನ್ನ ಸ್ಕೂಟಿಯನ್ನು ನಿಲ್ಲಿಸಿದ್ದಾಳೆ. ಆದರೆ, ಅದರಲ್ಲಿ ಆಕೆ ಯಶಸ್ವಿಯಾಗದೆ ಇದ್ದುದರಿಂದ, ಆಕೆ ತನ್ನ ವಾಹನದತ್ತ ಮರಳಿ, ಅದನ್ನು ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದಾಳೆ ಎನ್ನಲಾಗಿದೆ.
ದಾರಿಹೋಕನೊಬ್ಬ ಆಕೆಯ ಈ ಕೃತ್ಯವನ್ನು ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದು, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಿದ್ದಾನೆ. ತಕ್ಷಣವೇ ಆ ವೀಡಿಯೊ ವೈರಲ್ ಆಗಿದೆ ಎಂದು ವರದಿಯಾಗಿದೆ.
ಈ ವೀಡಿಯೊವನ್ನು ವೀಕ್ಷಿಸುತ್ತಿದ್ದಂತೆಯೆ, ಆಕೆಯ ಕೃತ್ಯವನ್ನು ದೇಶವಿರೋಧಿ ಎಂದು ಆರೋಪಿಸಿರುವ ಸಂಘಪರಿವಾರದ ಕಾರ್ಯಕರ್ತರು, ಆಕೆಯನ್ನು ಶಾಲೆಯಿಂದ ಉಚ್ಛಾಟಿಸಬೇಕು ಎಂದು ಆಕೆ ವ್ಯಾಸಂಗ ಮಾಡುತ್ತಿರುವ ಶಾಲೆಯೆದುರು ದೊಂಬಿ ಎಬ್ಬಿಸಿದ್ದಾರೆ. ನಂತರ, ಶಾಲಾ ಆಡಳಿತ ಮಂಡಳಿಯು ಆಕೆಯನ್ನು ಶಾಲೆಯಿಂದ ಉಚ್ಛಾಟಿಸಿದೆ ಎಂದು ವರದಿಯಾಗಿದೆ.
ಈ ಘಟನೆ ಸಹರಣ್ ಪುರ್ ಜಿಲ್ಲೆಯ ಗನೋಹ್ ಪ್ರದೇಶದಲ್ಲಿ ಮಂಗಳವಾರದಂದೇ ನಡೆದಿದ್ದರೂ, ಈ ಘಟನೆಯ ವೀಡಿಯೊ ಗುರುವಾರ ವೈರಲ್ ಆದ ನಂತರ, ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಕೋಮು ಸೂಕ್ಷ್ಮ ಪಟ್ಟಣವಾದ ಆಲಿಗಢದಲ್ಲಿ ನೆಲದ ಮೇಲೆ ಬಿದ್ದಿದ್ದ ಪಾಕಿಸ್ತಾನದ ಧ್ವಜವನ್ನು ಕುತೂಹಲದಿಂದ ಕೈಗೆತ್ತಿಕೊಂಡಿದ್ದ ಓರ್ವ ಅಪ್ರಾಪ್ತ ಮುಸ್ಲಿಂ ವಿದ್ಯಾರ್ಥಿಯನ್ನು ಸಂಘಪರಿವಾರದ ಕಾರ್ಯಕರ್ತರು ನಿಂದಿಸಿ, ಅದರ ಮೇಲೆ ಆತನಿಂದ ಬಲವಂತವಾಗಿ ಮೂತ್ರ ವಿಸರ್ಜನೆ ಮಾಡಿಸಿದ್ದಾರೆ ಎಂಬ ವರದಿಗಳ ಬೆನ್ನಿಗೇ ಈ ಘಟನೆ ನಡೆದಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮೂವರನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಹಾಗೂ ವೀಡಿಯೊದಲ್ಲಿ ಕಂಡು ಬಂದಿರುವ ಆರೋಪಿಗಳ ಗುರುತು ಪತ್ತೆಯಾದ ನಂತರ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ಸೌಜನ್ಯ: deccanherald.com







